ಹರಿದ್ವಾರ : ದೇಶದಲ್ಲಿ ರೂಪಾಂತರಿ ಕೋವಿಡ್ ಸೋಂಕಿನ ಅಲೆ ಹಠಾತ್ ಏರಿಕೆಯಿಂದ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಯಾದ ಸಂದರ್ಭದಲ್ಲೇ ಉತ್ತರಾಖಂಡದ ಹರಿದ್ವಾರದಲ್ಲಿ ಮಹಾಕುಂಭ ಮೇಳ ಆರಂಭವಾಗಿದ್ದು, ಲಕ್ಷೋಪಲಕ್ಷ ಮಂದಿ ಗಂಗಾ ಪವಿತ್ರ ಸ್ನಾನಕ್ಕಾಗಿ ಹರಿದ್ವಾರಕ್ಕೆ ಧಾವಿಸಿದ್ದಾರೆ.
ಮಹಾಕುಂಭ ಮೇಳಕ್ಕೆ ಆಗಮಿಸಿದ ಜನರ ನಡುವೆ ಸಾಮಾಜಿಕ ಅಂತರ ಸೇರಿ ಕೋವಿಡ್ ನಿಯಮಾವಳಿಗಳು ಮಾಯವಾಗಿವೆ. ಮಹಾಕುಂಭ ಪವಿತ್ರ ಸ್ನಾನಕ್ಕಾಗಿ ಬಂದವರನ್ನು ನಿರ್ವಹಿಸುವುದು ಕೂಡ ಕಷ್ಟವಾಗಿದೆ.
ಕುಂಭಮೇಳದಲ್ಲಿ ಪಾಲ್ಗೊಳ್ಳುವವರನ್ನ ಎಚ್ಚರಿಕೆಯಿಂದ ಪರೀಕ್ಷಿಸಲಾಗುತ್ತಿದೆ ಎನ್ನಲಾಗಿದ್ರೂ ಭಕ್ತರು ಪರೀಕ್ಷೆ ತಪ್ಪಿಸಿಕೊಳ್ಳಲು ಬೇರೆ ಬೇರೆ ದಾರಿಗಳಿಂದ ಕುಂಭಮೇಳಕ್ಕೆ ಬರುತ್ತಿದ್ದಾರೆ ಎಂದು ವರದಿಯಾಗಿತ್ತು.
ಈವರೆಗೆ ಕುಂಭಮೇಳದಲ್ಲಿ 28 ಲಕ್ಷ ಜನರು ಗಂಗಾಸ್ನಾನ ಮಾಡಿದ್ದಾರೆ ಎನ್ನಲಾಗಿದೆ. ಈ ಪೈಕಿ 18,169 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ 102 ಮಂದಿಗೆ ಕೊರೊನಾ ಸೋಂಕು ಪಾಸಿಟಿವ್ ರಿಪೋರ್ಟ್ ಬಂದಿದೆ. 28 ಲಕ್ಷ ಮಂದಿಯನ್ನೂ ಕೊರೊನಾ ಪರೀಕ್ಷೆಗೊಳಪಡಿಸಿದರೆ ಮತ್ತೆಷ್ಟು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರಬಹುದು ಎಂಬ ಆತಂಕ ಸೃಷ್ಟಿಯಾಗಿದೆ.
Uttarakhand: Sadhus participate in the second 'shahi snan' of Maha Kumbh at Har Ki Pauri ghat in Haridwar pic.twitter.com/VMjd4h5Gcp
— ANI (@ANI) April 12, 2021
ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಎಂದು ನಿರಂತರವಾಗಿ ಭಕ್ತಾದಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರೂ ಅವರು ಕೇಳುತ್ತಿಲ್ಲ. ದೇಶದ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದ ಭಕ್ತಾದಿಗಳ ನಡುವೆ ಸಾಮಾಜಿಕ ಅಂತರವನ್ನು ನಿರ್ವಹಿಸುವುದಕ್ಕೆ ಕಷ್ಟವಾಗುತ್ತಿದೆ. ಜನರ ಗುಂಪಿನಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವವರಿಗೆ ದಂಡ ವಿಧಿಸಲು ಕೂಡ ಸಾಧ್ಯವಾಗುತ್ತಿಲ್ಲ. ಹರ್ ಕಿ ಪೌರಿ ಘಾಟ್ ನಲ್ಲಿ ಸಾಮಾಜಿಕ ಅಂತರ ಇಲ್ಲದಂತಾಗಿದೆ ಎಂದು ಹರಿದ್ವಾರದಲ್ಲಿ ಕಾರ್ಯ ನಿರತವಾಗಿರುವ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಹೇಳಿರುವುದನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನ ನಿತ್ಯ ಏರಿಕೆಯಾಗುತ್ತಿದೆ. ಘಾಟ್ ನಲ್ಲಿ ಸಾಮಾಜಿಕ ಅಂತರವನ್ನು ನಿರ್ವಹಿಸುವುದಕ್ಕೆ ಪ್ರಯತ್ನ ಪಟ್ಟರೆ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇದೆ ಎಂದು ಕೂಡ ಗುಂಜ್ಯಾಲ್ ತಿಳಿಸಿದ್ದಾರೆ.
ಇನ್ನು, ಪವಿತ್ರ ಗಂಗಾ ಸ್ನಾನಕ್ಕಾಗಿ ಮಹಾ ಕುಂಭ ಸಂದರ್ಭದಲ್ಲಿ ಬೆಳಗ್ಗೆ ಏಳು ಗಂಟೆಯವರೆಗೆ ಮಾತ್ರ ಸಾಮಾನ್ಯ ಜನರಿಗೆ ಅವಕಾಶವಿದ್ದು, ತದನಂತರ ಸಾಧುಗಳಿಗೆ ಅವಕಾಶವನ್ನು ನೀಡಲಾಗಿದೆ.
ಕುಂಬಮೇಳದಲ್ಲಿನ ದೈಹಿಕ ಅಂತರ ನಿರ್ಲಕ್ಷ್ಯ, ಮಾಸ್ಕ ಹಾಕದಿರುವುದು, ಭಾಗವಹಿಸಿದವರು ಯಾವುದೆ ಎಚ್ಚರಿಕೆಗಳಿಲ್ಲದೆ ಇತರೆ ರಾಜ್ಯಗಳಿಗೆ ಓಡಾಡುತ್ತಿರುವುದು ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಹರಿದ್ವಾರದಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದನು ಇಲ್ಲಿ ಸ್ಮರಿಸಬಹುದು.
ಇದನ್ನೆಲ್ಲಾ ಗಮನಿಸುತ್ತಿದ್ದರೆ, ದೇಶದ ಎಲ್ಲಾ ಭಾಗಕ್ಕೂ ಕೊರೊನಾ ಸೋಂಕು ಹರಡುವ ಆತಂಕ ಎದುರಾಗಿದೆ. ಇದೆಲ್ಲದರ ಮುಂದೆ ಉತ್ತರಾಖಂಡ್ ಸರ್ಕಾರ ಕಣ್ಮುಚ್ಚಿ ಕುಳಿತಿದೆಯಾ ಎನ್ನುವ ಪ್ರಶ್ನೆಯೂ ಮೂಡಿದೆ.