ಕೊಪ್ಪಳ : ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಶಿಕ್ಷಕ ಮನಬಂದಂತೆ ಥಳಿಸಿರುವ ಅಮಾನವಿಯ ಘಟನೆ ಕೊಪ್ಪಳದ ನಗರದ ಧನ್ವಂತರಿ ಕಾಲೋನಿಯಲ್ಲಿ ನಡೆದಿದೆ.
ನವೋದಯ, ಸೈನಿಕ್ ಶಾಲೆಯ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಶಿಕ್ಷಕ ಲೋಹಿತ್ ಎಂಬಾತ ಹೋಮ್ ವರ್ಕ್ ಮಾಡಿಲ್ಲ ಎಂಬ ಸಣ್ಣ ಕಾರಣಕ್ಕೆ 1೦ ವರ್ಷದ ಪ್ರಥಮ್ ಎಂಬ ಬಾಲಕನಿಗೆ ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ. ಪರಿಣಾಮ ಪ್ರಥಮ್ ಕಿವಿಯಲ್ಲಿ ರಕ್ತ ಸುರಿದಿದೆ.
ಇದಲ್ಲದೇ ತರಗತಿಗೆ ಬರುವ ಹಲವಾರು ಮಕ್ಕಳ ಮೇಲೆ ಇದೇ ರೀತಿ ಶಿಕ್ಷಕ ಲೋಹಿತ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಶಿಕ್ಷಕನ ಅಮಾನವೀಯ ವರ್ತನೆಯಿಂದಾಗಿ ವಿದ್ಯಾರ್ಥಿ ಪ್ರಥಮ್ ನೋವು ಅನುಭವಿಸುತ್ತಿದ್ದಾನೆ. ಸದ್ಯ ಮೈ ಮೇಲೆ ಗಾಯವಾಗಿರುವ ಪ್ರಥಮ್‌ಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಲೋಹಿತ್ ಕ್ರೂರ ವರ್ತನೆ ವಿರುದ್ಧ ಬಾಲಕನ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಮಕ್ಕಳನ್ನು ಹಿಂಸಿಸುತ್ತಿರುವ ಕೋಚಿಂಗ್ ಸೆಂಟರ್‌ಗಳು : 5 ನೇ ತರಗತಿ ಇರುವಾಗ ವಸತಿ ಶಾಲೆಗಳಿಗೆ ಪರೀಕ್ಷೆ ಬರೆಯಬೇಕು ಅದಕ್ಕಾಗಿ, ಮಗು ಮೂರನೇ ತರಗತಿಗೆ ಬರುತ್ತಿದ್ದಂತೆ, ಪೋಷಕರು ನವೋದಯ, ಮೊರಾರ್ಜಿ, ಸೈನಿಕ, ಕಿತ್ತೂರು ವಸತಿ ಶಾಲೆಗಳಿಗೆ ಸೇರಿಸುವುದಕ್ಕಾಗಿ ಕೋಚಿಂಗ್ ಸೆಂಟರ್ ಮೊರೆ ಹೋಗುತ್ತಾರೆ. ವಾರದ ಪೂರ್ತಿ ದಿನವೂ ಈ ಕೊಚಿಂಗ್ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿವೆ. ರಜೆ, ವಿಶ್ರಾಂತಿಗೆ ಇಲ್ಲಿ ಅವಕಾಶವೇ ಇಲ್ಲ.
ಬೆಳಗ್ಗೆ 9 ಕ್ಕೆ ಆರಂಭವಾದ ಕೊಚಿಂಗ್ ಸೆಂಟರ್ ಗಳು ತರಗತಿಗಳನ್ನು ಮುಗಿಸುವುದು ರಾತ್ತಿ 9ಕ್ಕೆ. ಅಂದರೆ ಬರೋಬ್ಬರಿ 12 ಗಂಟೆ. ಆಗ ಆ ಮಗು ಮೂರು ವರ್ಷ ಶಾಲೆಗೆ ಚಕ್ಕರ್ ಹಾಕಬೇಕು.
ಈ ಕೋಚಿಂಗ್ ಸೆಂಟರ್ ಗಳು ನಾಯಿಕೊಡೆಗಳಂತೆ ಹಬ್ಬಿಕೊಂಡಿವೆ. ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್ ಗಳು ಹೆಚ್ಚಿವೆ. ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಮಕ್ಕಳ ಮನಸ್ಸನ್ನು ಘಾಸಿ ಗೊಳಿಸುವ ಈ ಕೋಚಿಂಗ್ ಸಂಸ್ಕೃತಿಗೆ ವಿದಾಯ ಹೇಳಬೇಕಿದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಈ ಕೋಚಿಂಗ್ ಸೆಂಟರ್ ನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ತಿಳಿಸಿದ್ದಾರೆ.
Ok