ಬೆಂಗಳೂರು: ರಾಜ್ಯದ ಶಾಲಾ – ಕಾಲೇಜುಗಳಲ್ಲಿ ಉಂಟಾದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ವಿಚಾರದಲ್ಲಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠವು ಮಧ್ಯಂತರ ಆದೇಶವನ್ನು ಹೊರಡಿಸಿದೆ. ಆದರೆ, ರಾಜ್ಯ ಸರಕಾರ ಇದನ್ನು ಯಥಾರ್ಥವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವುದರಿಂದ ಮುಸ್ಲಿಂ ಅಲ್ಪಸಂಖ್ಯಾತ ಜನ ಸಮುದಾಯದಲ್ಲಿ ಮತ್ತಷ್ಠು ಆತಂಕ ಉಂಟಾಗುವಂತಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಖಂಡಿಸಿದೆ.
ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ಮದ್ಯಂತರ ಆದೇಶದಲ್ಲಿ “ತರಗತಿ ಕೋಣೆಗಳ ಒಳಗಡೆಯಲ್ಲಿ” ಯಾವುದೇ ವಿದ್ಯಾರ್ಥಿ ಕೇಸರಿ ಶಾಲು ಹಾಗೂ ತಲೆವಸ್ತ್ರ, ಹಿಜಾಬು ಮುಂತಾಗಿ ಧರಿಸುವುದನ್ನು ತಡೆದಿದೆ. ಸದರಿ ಆದೇಶದಂತೆ, ಮುಂದಿನ ಆದೇಶ ಬರುವವರೆಗೆ ತರಗತಿ ಕೋಣೆಗಳಲ್ಲಿ ಅವುಗಳನ್ನು ಧರಿಸಿ ಯಾರೂ ಪಾಲ್ಗೊಳ್ಳುವಂತಿಲ್ಲ. ಆದರೆ, ರಾಜ್ಯ ಸರಕಾರ ಇದನ್ನು ಯಥಾರ್ಥವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವುದೆ. ಅಲ್ಲದೆ, ವರ್ಷದ ಕೊನೆಯ ಹಂತದಲ್ಲಿ ಸಮವಸ್ತ್ರದ ಕುರಿತು ಆದೇಶವನ್ನು ಏಕಾಏಕಿ ಹೊರಡಿಸಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಕೆಲವೆಡೆ ತಲೆಗವಸು ಧರಿಸಿಬಂದ ವಿದ್ಯಾರ್ಥಿನಿಯರನ್ನು ಮತ್ತು ಬುರ್ಕಾ ಧರಿಸಿಬಂದ ಮಹಿಳೆಯರನ್ನು ಶಾಲಾ – ಕಾಲೇಜು ಕಾಂಪೌಂಡ್ ಆಚೆಯೇ ನಿಲ್ಲಿಸಿ ತಡೆಯಲಾಗಿದೆ. ತರಗತಿಯಲ್ಲಿ ಧರಿಸಲು ಅವಕಾಶವಿಲ್ಲವೆಂಬುದರ ಬದಲು ಶಾಲಾ – ಕಾಲೇಜು ಆವರಣದೊಳಗೂ ಪ್ರವೇಶವಿಲ್ಲವೆಂಬಂತೆ ವರ್ತಿಸಿ ತಿರುಚಲಾಗಿರುವುದು ತೀವ್ರ ಖಂಡನೀಯವಾಗಿದೆ ಎಂದು ಸಿಪಿಐ(ಎಂ) ಪಕ್ಷವು ತಿಳಿಸಿದೆ.
ರಾಜ್ಯ ಸರಕಾರ ಹಾಗೂ ಜಿಲ್ಲಾ ಆಡಳಿತಗಳು, ನ್ಯಾಯಾಲಯದ ಮಧ್ಯಂತರ ಆದೇಶವನ್ನು ಆತಂಕಕ್ಕೊಳಗಾದ ಎಲ್ಲ ನಾಗರೀಕ ಸಮುದಾಯಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಶಾಲಾ – ಕಾಲೇಜು ಆಡಳಿತ ಮಂಡಳಿಗಳಿಗೂ ಸೂಕ್ತ ನಿರ್ದೇಶನ ನೀಡಿ ಶಾಂತಿ ಹಾಗೂ ಸೌಹಾರ್ಧಯುತವಾಗಿ ಜಾರಿಗೊಳಿಸಿ ಶಾಲಾ-ಕಾಲೇಜುಗಳಲ್ಲಿ ಸೌಹಾರ್ಧ ವಾತಾವರಣವನ್ನು ಉಂಟು ಮಾಡಬೇಕಿತ್ತು. ಅದಾಗದೇ ಹೋದುದರಿಂದ ಶಾಲಾ – ಕಾಲೇಜುಗಳ ಆವರಣದೊಳಗೆ ಹಿಜಾಬ್ ಹಾಗೂ ಬುರ್ಖಾ ಧರಿಸಿದವರನ್ನು ನಿರ್ಬಂಧಿಸಿ ತಡೆಯುವ ಅತಿರೇಕದ ವರ್ತನೆಗಳು ಕಂಡುಬಂದಿವೆ.
ಕೆಲವು ಮಾದ್ಯಮದ ವರದಿಗಾರರು ಹಿಜಾಬ್ ಧರಿಸಿ ಶಾಲಾ ಆವರಣ ಪ್ರವೇಶಿಸಿದ ಪುಟ್ಟ ಬಾಲಕಿಯನ್ನು ಬೆನ್ನಟ್ಟಿ ಹೋಗುವ ಖಂಡನೀಯ ವಿಚಾರವನ್ನು ಇಲ್ಲಿ ಗಮನಿಸಬೇಕಾಗಿದೆ. ಇದು ಆ ಪುಟ್ಟ ಮನಸ್ಸಿನ ಮೇಲೆ ಎಂತಹ ಗಾಯವನ್ನುಂಟು ಮಾಡಿರಬಹುದು?
ಇವೆಲ್ಲವುಗಳು, ರಾಜ್ಯದ ಶಾಂತಿ ಸೌಹಾರ್ಧತೆಗೆ ಮತ್ತಷ್ಠು ಧಕ್ಕೆ ಉಂಟು ಮಾಡಿವೆ. ರಾಜ್ಯ ಸರಕಾರದ ವಿವೇಚನಾ ರಹಿತ ಅವಸರದ ನಡೆಗಳು ಮತ್ತು ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ ಕೋಮುವಾದಿ ಯೋಜನೆಗಳು ಇದಕ್ಕೆ ಕಾರಣಗಳಾಗಿದೆ. ಇಂತಹ ತಪ್ಪು ನಡೆಗಳಿಗೆ ರಾಜ್ಯ ಸರಕಾರವೇ ನೇರ ಹೊಣೆಗಾರನಾಗಿದೆ ಎಂದು ಸಿಪಿಐ(ಎಂ) ಪಕ್ಷವು ತಿಳಿಸಿದೆ.
ಶೈಕ್ಷಣಿಕ ವಲಯದೊಳಗೆ ಪೊಲೀಸ್ ಮದ್ಯಪ್ರವೇಶವು ಸೇರಿದಂತೆ ಈ ಎಲ್ಲಾ ದುಸ್ಥಿತಿಯು, ಎಲ್ಲಾ ಪೋಷಕರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಅದು ಮುಖ್ಯವಾಗಿ, ಬಾಲಕಿಯರ ವಿದ್ಯಾಭ್ಯಾಸವನ್ನು ಮೊಟಕು ಮಾಡುವಂತೆ ಮಾಡಿದೆ.
ತಕ್ಷಣವೇ, ಈ ಎಲ್ಲಾ ಘಟನೆಗಳಿಂದ ತೊಂದರೆಗೊಳಗಾದ ಎಲ್ಲಾ ವಿದ್ಯಾರ್ಥಿಗಳು ಭರವಸೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗುವಂತೆ ಮತ್ತು ರಾಜ್ಯದ ಜನ ಸಮುದಾಯಗಳಲ್ಲಿ ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಉಂಟಾದ ಆತಂಕ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಮತ್ತು ರಾಜ್ಯದಾದ್ಯಂತ ತ್ವರಿತವಾಗಿ ಶಾಂತಿ ಸೌಹಾರ್ಧತೆಗೆ ಕ್ರಮವಹಿಸಬೇಕೆಂದು ಸಿಪಿಐ(ಎಂ) ಪಕ್ಷವು ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಅದೇ ರೀತಿ, ಕೆಲವೆಡೆ ಶಾಲಾ ಆವರಣಕ್ಕೆ ಹಿಜಾಬ್ ಧರಿಸಿ ಬರುವ ಬಾಲಕಿಯರನ್ನು ತಡೆದಿರುವ ಕ್ರಮ ಹೈಕೋರ್ಟ್ ಮಧ್ಯಂತರ ಆದೇಶದ ತೀವ್ರ ಉಲ್ಲಂಘನೆಯಾಗಿದೆ. ಅಂತಹ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಮತ್ತು ರಾಜ್ಯ ಸರ್ಕಾರದ ಸಂಬಂಧಿತ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬೇಕೆಂದು ಸಿಪಿಐ(ಎಂ) ಹೈಕೋರ್ಟಿನ ಪೀಠವನ್ನು ಕೋರಿದೆ.
ಶಾಂತಿ ಸೌಹಾರ್ಧತೆಗೆ ಕ್ರಮವಹಿಸಲು ನಾಗರಿಕರಲ್ಲಿ ಮನವಿ
ಕಾರ್ಪೊರೇಟ್ ಕಂಪನಿಗಳ ಲೂಟಿಗೆ ರಾಜ್ಯವನ್ನು ತೆರೆಯುವ ಮತ್ತು ಅದಕ್ಕಾಗಿ ಜನತೆಯನ್ನು ವಿಭಜಿಸಿ ಆಳುವ ದುರುದ್ದೇಶದಿಂದ ರಾಜ್ಯದಲ್ಲಿ ಶಾಂತಿ ಹಾಗೂ ಸೌಹಾರ್ಧತೆಯನ್ನು ಕದಡುವ ಕೋಮುವಾದಿ ಶಕ್ತಿಗಳ ಸಂಚನ್ನು ಸೋಲಿಸಲು, ಶಾಂತಿ-ಸೌಹಾರ್ಧತೆಯನ್ನು ಬಲಪಡಿಸಬೇಕೆಂದು, ರಾಜ್ಯದ ಶಾಂತಿ ಪ್ರಿಯ ನಾಗರಿಕರಲ್ಲಿ ಸಿಪಿಐ(ಎಂ) ಪಕ್ಷವು ಮನವಿ ಮಾಡುತ್ತದೆ. ಅದೇ ರೀತಿ, ಸೌಹಾರ್ಧತೆಯನ್ನು ಬಲಪಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಪಕ್ಷದ ಸದಸ್ಯರು, ಹಿತೈಷಿಗಳು ಮತ್ತು ಘಟಕಗಳಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಕರೆ ನೀಡಿದೆ.
ಜಬೀನಾ ಮಕಂದಾರ್ ಗೆ ಅಭಿನಂದನೆ
ಬಾಗಲಕೋಟೆ ನಗರದ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿ ಜಬೀನ್ ಮಕಾಂದಾರ್ ಬಾಲಕಿಯು ಒಬ್ಬಳೇ ಸಮವಸ್ತ್ರ ಧರಿಸಿ, ಶಾಲೆಗೆ ಹಾಜರಾಗಿ ಪಾಠ ಕೇಳಲು ಮುಂದಾದ ಶಿಕ್ಷಣದ ಹಂಬಲ ಮತ್ತು ಧೈರ್ಯದ ಕ್ರಮವನ್ನು ಸಿಪಿಐ(ಎಂ) ಶ್ಲಾಘಿಸುತ್ತದೆ. ಅದೇ ರೀತಿ, ಶಾಲೆಗೆ ತೆರಳುವಂತೆ ಪ್ರೋತ್ಸಾಹಿಸಿದ ತಂದೆ-ತಾಯಿ ಹಾಗೂ ಪೋಷಕರನ್ನು ಮತ್ತು ಉರ್ದು ಶಾಲೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದೆ.