ವಯಸ್ಸು ಮೀರಿದ ಅವಿವಾಹಿತರಿಗೆ ಮದುವೆ ಮಾಡಿಸಿ ದೋಚುವ ಮೂವರು ಮಹಿಳೆಯರನ್ನೊಳಗೊಂಡ ನಾಲ್ವರ ಗ್ಯಾಂಗ್ ಅನ್ನು ಹುಬ್ಬಳ್ಳಿಯಲ್ಲಿ ತುಮಕೂರಿನ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದ ನಿವಾಸಿ ಪಾಲಾಕ್ಷಯ್ಯ 37 ವರ್ಷ ದಾಟಿದ ಮಗ ದಯಾನಂದ ಮೂರ್ತಿಗೆ ಮದುವೆ ಮಾಡಿಸಲು ಹೋಗಿ ವಂಚನೆಗೆ ಒಳಗಾದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಮದುಮಗಳು ಕೋಮಲಾ ಅಲಿಯಾಸ್ ಲಕ್ಷ್ಮಿ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಬಂಧಿತ ಆರೋಪಿಗಳು.
ಕುಷ್ಟಗಿ ಮೂಲದ ಬಸವರಾಜು ಎಂಬವರ ಮೂಲಕ ಮದುವೆ ಬ್ರೋಕರ್ ಹುಬ್ಬಳಿಯ ಲಕ್ಷ್ಮಿ ಪರಿಚಯವಾಗಿದೆ. ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು. ಹುಬ್ಬಳ್ಳಿಯಲ್ಲಿ ತಂದೆ-ತಾಯಿ ಇಲ್ಲದ ಹುಡುಗಿ ಇದ್ದು, ಮದುವೆ ಮಾಡಿಸೋಣ ಅಂತ ಹೇಳಿದ್ದಾಳೆ.
ʻಕೋಮಲಾʼ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿ, ಆಕೆಯನ್ನೂ ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು. ಕೋಮಲಾ ಜೊತೆಗೆ ಆಕೆಯ ಸಂಬಂಧಿಕರು ಅಂತ ಹೇಳಿಕೊಂಡು ಇನ್ನೂ ಐದಾರು ಜನ ಬಂದಿದ್ದರು. ಕಳೆದ ವರ್ಷ ನವೆಂಬರ್ 11ರಂದು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬ ಪಾಲಾಕ್ಷಯ ಕುಟುಂಬಸ್ಥರೊಂದಿಗೆ ಮದುವೆ ಮಾತುಕತೆಯನ್ನೂ ನಡೆಸಿದ್ದರು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆಮುಂದೆ ಯೋಚಿಸದೇ ಪಾಲಾಕ್ಷಯ್ಯ ಮಾತುಕತೆ ನಡೆಸಿದ್ದ ಮರುದಿನವೇ ಗ್ರಾಮದ ದೇವಸ್ಥಾನದಲ್ಲೇ ಮದುವೆ ಮಾಡಿ ಮುಗಿಸಿದ್ದರು.
ಮದುವೆ 200ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಅಲ್ಲದೇ ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಸೇರಿ 25 ಗ್ರಾಂ ಚಿನ್ನಾಭರಣ ಸಹ ಹಾಕಿದ್ದರು. ಮದುವೆ ಮುಗಿಯುತ್ತಿದ್ದಂತೆ ಹೆಣ್ಣು ತೋರಿಸಿದ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ರೂ. ಹಣ ನೀಡಿದ್ದರು.
ಹೆಣ್ಣಿನ ಕಡೆಯವರು ಅಂತ 8 ಜನರನ್ನು ಕರೆ ತಂದಿದ್ದ ಬ್ರೋಕರ್ ಲಕ್ಷ್ಮಿ, ಮದುವೆ ಮುಗಿದ ಸಂಪ್ರದಾಯದ ನೆಪದಲ್ಲಿ ಎರಡು ದಿನದ ನಂತರ ಯುವತಿಯ ಹಣ-ಒಡವೆ ಜೊತೆ ವಾಪಸ್ ಕರೆದುಕೊಂಡ ಹೋಗಿದ್ದಾಳೆ.
ವಾರ ಕಳೆದರೂ ವಾಪಸ್ ಬರದೇ ಇದ್ದಾಗ ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್ ಗುಬ್ಬಿಗೆ ಮರಳಿದ ಪಾಲಾಕ್ಷಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ಸತತ 1 ವರ್ಷ ತನಿಖೆ ನಂತರ ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.