ಮದ್ದೂರು :ಮದ್ದೂರು ಪಟ್ಟಣದಲ್ಲಿ ಇತ್ತಿಚೆಗೆ ನಡೆದ ಕೋಮು ಗಲಭೆ ಖಂಡಿಸಿ ಜನಪರ ಸಂಘಟನೆಗಳು ಸೌಹಾರ್ದ ಸಾಮರಸ್ಯ ನಡಿಗೆ ಕಾರ್ಯಕ್ರಮ ನಡೆಸಿದರು.
ಮಳವಳ್ಳಿ ರಸ್ತೆಯಲ್ಲಿರುವ ಪ್ರೊ.ನಂಜುಂಡಸ್ವಾಮಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು.
ಸಾಮರಸ್ಯ ನಡಿಗೆ ಉದ್ದೇಶಿಸಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್ ಕೃಷ್ಣೆಗೌಡ ಮಾತನಾಡಿ, ಮದ್ದೂರಿನಲ್ಲಿ ಇತ್ತೀಚೆಗೆ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟದ ಬಳಿಕ ನಡೆದಿದ್ದ ಆದ ಗಲಭೆಯನ್ನು ಪೊಲೀಸರು ತಹಬದಿಗೆ ತಂದಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾಮರಸ್ಯ ನಡಿಗೆ ನಡೆಸಲು ಅನುಮತಿ ನೀಡದಿರುವುದು ಸರಿಯಲ್ಲವೆಂದು ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಟೀಕಿಸಿದರು.
“ಸಾಮರಸ್ಯ ಸೌಹಾರ್ದ ನಡಿಗಡೆಯಲ್ಲಿ ಪಾಲ್ಗೊಳ್ಳಲು ಪೊಲೀಸ್ ಇಲಾಖೆ ಅನುಮತಿ ನೀಡದೆ ಬ್ಯಾರಿಕೇಡ್ ಹಾಕಿ ತಡೆಹಿಡಿದಿದೆ. ಆದರೆ ಅದೇ ಪೊಲೀಸ್ ಇಲಾಖೆ ಯತ್ನಾಳ್, ಸಿ ಟಿ ರವಿ, ಪ್ರತಾಪ್ ಸಿಂಹನಂತಹ ಕೋಮುವಾದಿಗಳಿಗೆ ದ್ವೇಷ ಭಾಷಣ ಮಾಡಲು ಅವಕಾಶ ನೀಡುತ್ತಾರೆ. ಆದರೆ ಸಾಮಾನ್ಯ ನಾಗರಿಕರು ಮದ್ದೂರು ತಲುಪುವುದನ್ನು ನಿರಾಕರಿಸುತ್ತಾರೆಂದರೆ ಪೊಲೀಸ್ ಇಲಾಖೆಗೆ ಕ್ರಿಮಿನಲ್‌ಗಳು ಯಾರು? ಸಜ್ಜನರು ಯಾರು? ಎಂಬ ವ್ಯತ್ಯಾಸವೇ ಗೊತ್ತಿಲ್ಲದಿರುವಂತಹ ಅಜ್ಞಾನದಲ್ಲಿ ವರ್ತಿಸುತ್ತಿರುವುದು ಖಂಡನೀಯ” ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ಜಿಲ್ಲೆಯು ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಗೆ ಹೆಸರಾಗಿದೆ. ಇಂತಹ ಜಿಲ್ಲೆಯಲ್ಲಿ ಕೆಲವರು ಕೋಮು ಗಲಭೆ ಉಂಟು ಮಾಡುವ ಮೂಲಕ ಮುಂದೆ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದ್ದಾರೆ. ಆ ಪಿತೂರಿ ವಿರುದ್ಧ ವಿವಿಧ ಜನಪರ ಸಂಘಟನೆಗಳ ನಾವೆಲ್ಲರೂ ಸೌಹಾರ್ದ ಸಾಮರಸ್ಯ ನಡಿಗೆಯನ್ನು ಸೋಮವಾರ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲಸಬೇಕು ಎಂಬ ಸಂದೇಶ ನೀಡುತ್ತಿದ್ದೇವೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ರೈತ ಸಂಘಟನೆಗಳು ಸೇರಿದಂತೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬಯಸುವ ಎಲ್ಲಾ ಸಂಘಟನೆಗಳು ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಂಡಿವೆ ಹಾಗೂ ನಾವೆಲ್ಲ ಬಸವಣ್ಣ ಹಾಗೂ ಗಾಂಧೀಜಿಯವರ ತತ್ವಗಳನ್ನು ಅನುಸರಿಸುತ್ತಿದ್ದೇವೆ ಎಂದರು.
ಸಿಐಟಿಯು ಸಿ.ಕುಮಾರಿ ಮಾತನಾಡಿ, ದೇಶದ ಇತಿಹಾಸ ಮರೆತಿರುವವರು ಇತಿಹಾಸ ಸೃಷ್ಟಿ ಮಾಡಲಿಕ್ಕೆ ಸಾಧ್ಯವಿಲ್ಲ. ನಮ್ಮ ಭಾರತ ದೇಶ ಸರ್ವಧರ್ಮಗಳು ಒಗ್ಗಟಿನಿಂದ ಬದುಕುತ್ತಿದ್ದೇವೆ ಕೆಲವು ಕಿಡಿಗೇಡಿಗಳು ರಾಜಕೀಯ ಲಾಭಕ್ಕಾಗಿ ಯುವಜನರಲ್ಲಿ ವಿಷಬೀಜ ಬಿತ್ತಿ ಜಿಲ್ಲೆಯ ಕೋಮು ಸೌಹಾರ್ದತೆ ಹಾಳು ಮಾಡಲು ಹೊರಟಿದ್ದಾರೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಜನವಾದಿ ಮಹಿಳಾ ಸಂಘಟನೆ ದೇವಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯವರು ಅಧಿಕಾರ ದಾಹಕ್ಕೆ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ದರಿದ್ದಾರೆ. ಸತ್ತ ಹೆಣದ ಮುಂದೆ ರಾಜಕೀಯ ಮಾಡಿ ಸಂವಿಧಾನವನ್ನೇ ತಿರುಚಲು ಹೊರಟಿದ್ದಾರೆ. ಜಿಲ್ಲೆಯಲ್ಲಿ ಕೋಮು ಸಂಘರ್ಷ ಹಾಳು ಮಾಡಲಿಕ್ಕೆ ಅವಕಾಶ ಕೊಡುವುದಿಲ್ಲ ಮದ್ದೂರಿನ ನೆಲದಲ್ಲಿ ಮುಂದಿನ ದಿನಗಳಲ್ಲಿ ಕೊಮುವಾದಿಗಳಿಗೆ ಜಾಗವಿಲ್ಲ ಎಂದು ಸಾರಿ ಹೇಳಬೇಕಾಗಿದೆ ಹಿಂದೂ ಮುಸ್ಲಿಂ ಐಕ್ಯತೆ ಚಿರಾಯುವಾಗಲಿ ಎಂದರು.
ಸೌಹಾರ್ದ ನಡಿಗೆಯಲ್ಲಿ ಚಿಂತಕರುಗಳಾದ ಭೂಮಿಗೌಡ, ಶಿವಸುಂದರ್, ಎಂ ವಿ ಕೃಷ್ಣ, ಜನಪರ ಸಂಘಟನೆಗಳ ಮುಖಂಡರುಗಳಾದ ಯಶ್ವಂತ್ ಟಿ, ಅಂದಾನಿ ಸೋಮನಹಳ್ಳಿ, ನಾಗೇಶ್ ಸೇರಿದಂತೆ ಯುವಜನ, ಮಹಿಳಾ, ದಲಿತ, ಕಾರ್ಮಿಕ, ರೈತ ಸಂಘಟನೆ ಕಾರ್ಯಕರ್ತರು ಇದ್ದರು.
