ಬೆಂಗಳೂರು: ಕೋವಿಡ್ ಸಮಯದಲ್ಲಿ ಮಂಡಳಿಯಿಂದ ನಡೆದಿರುವ ಎಲ್ಲಾ ವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ರಾಜ್ಯಾದ್ಯಂತ ಹೋರಾಟ ನಡೆದಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಕೋವಿಡ್ ಸಂದರ್ಭದಲ್ಲಿ ಮಂಡಳಿ ಹಣದ ಮೂಲಕ ಖರೀದಿಸಿದ ಆಹಾರ ಕಿಟ್, ಟೂಲ್ ಕಿಟ್ ಹಾಗೂ ಸೇಪ್ಟಿ ಕಿಟ್ಗಳನ್ನು ಶಾಸಕರ ಮೂಲಕ ನೀಡುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕು. ಬಾಕಿ ಇರುವ ಎಲ್ಲ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಜುಲೈ 12ರಂದು ಬೆಂಗಳೂರಿನಲ್ಲಿ ಕಲ್ಯಾಣ ಮಂಡಳಿ ಮುಂಭಾಗ ನಡೆದ ಪ್ರತಿಭಟನೆಗೆ ಆಗಮಿಸಿದ 40 ಕಾರ್ಮಿಕರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಮಂಡಳಿಯಲ್ಲಿ ಸಂಗ್ರಹವಾಗಿರುವ ಸೆಸ್ ಹಣವನ್ನು ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಕೆಯಾಗಬೇಕು ಹಾಗೂ ಸೆಸ್ ಹಣದಲ್ಲಿ ಸಾಮಾಗ್ರಿ, ಖರೀದಿ, ವಾಹನಗಳ ಖರೀದಿ, ನಿರ್ಮಾಣ ಕಾಮಗಾರಿಗಳನ್ನು ನಡೆಸುವ ತೀರ್ಮಾನ ಕೈ ಬಿಡಬೇಕು ಎನ್ನುವ ಬೇಡಿಕೆಗಳನ್ನು ಮಂಡಿಸಿದ ಪ್ರತಿಭಟನಾಕಾರರು ರಾಜ್ಯದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಇದನ್ನು ಓದಿ: ಆಹಾರ ಕಿಟ್ ಅವ್ಯವಹಾರ ತನಿಖೆಗೆ ಕಟ್ಟಡ ಕಾರ್ಮಿಕರ ಆಗ್ರಹ: ಪ್ರತಿಭಟನಾಕಾರರ ಬಂಧನ
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಿಂದ ರಾಜ್ಯದ ಕಲುಬುರಗಿ, ಬೀದರ್, ರಾಯಚೂರು, ಬಳ್ಳಾರಿ,ಕೊಪ್ಪಳ, ಧಾರವಾಡ, ತುಮಕೂರು, ಚಿತ್ರದುರ್ಗ, ಮಂಡ್ಯ, ಉಡುಪಿ, ಉತ್ತರ ಕನ್ನಡ, ಗದಗ, ಕೋಲಾರ, ದಾವಣಗೆರೆ ಮೊದಲಾದ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿದರು.
ಹೋರಾಟದ ಭಾಗವಾಗಿ ಅಂಚೆ ಕಾರ್ಡು ಚಳವಳಿಯ ಕಾನೂನು ಸೇವಾ ಪ್ರಾಧಿಕಾರ, ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ತನಿಖೆ ಮಾಡಲು ಮತ್ತು ಮಧ್ಯ ಪ್ರವೇಶಿಸಲು ಕೋರಿ ಈ ದಿನ ಸಾವಿರಾರು ಅಂಚೆ ಕಾರ್ಡುಗಳನ್ನು ಪೊಸ್ಟ್ ಮಾಡಿದರು. ಒಂದು ತಿಂಗಳ ಪೂರ್ತಿ ಈ ಪತ್ರ ಹಾಗೂ ಇ ಮೇಲ್ ಚಳವಳಿ ರಾಜ್ಯಾದ್ಯಂತ ನಡೆಯಲಿದೆ. ಅಂತಿಮವಾಗಿ ಸೆಪ್ಟೆಂಬರ್ 1, 2021 ರಂದು ಹತ್ತು ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಬೆಂಗಳೂರಿನಲ್ಲಿ ಇರುವ ಕಲ್ಯಾಣ ಮಂಡಳಿ ಮುತ್ತಿಗೆ ಹಾಕಲಿದ್ದಾರೆ ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.