ಬೆಂಗಳೂರು :ಲಂಚ ಪ್ರಕರಣದ ಪ್ರಮುಖ ಆರೋಪಿ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಒಂದೇ ದಿನದಲ್ಲಿ ವಿಚಾರಣೆ ನಡೆಸಿ ಮಾನ್ಯ ಮಾಡಿರುವ ನ್ಯಾಯಾಂಗ ಪ್ರಕ್ರಿಯೆಗೆ ಬೆಂಗಳೂರು ವಕೀಲರ ಸಂಘ(ಎಎಬಿ) ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ಮಂಗಳವಾರ ಸಂಜೆ ತುರ್ತು ಸಭೆ ನಡೆಸಿದ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಗಂಭೀರವಾದ ಕಾಳಜಿಯುಕ್ತ ಪತ್ರವೊಂದನ್ನು ಬರೆದಿದ್ದು, ‘ಇಂದು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿರುವ ಪ್ರಕ್ರಿಯೆ ನ್ಯಾಯಾಂಗದ ಬಗ್ಗೆ ಶ್ರೀಸಾಮಾನ್ಯರಿಗಿರುವ ನಂಬಿಕೆಯನ್ನು ಹುಸಿ ಮಾಡಿದೆ’ ಎಂದು ತಿಳಿಸಿದೆ.
‘ಹೈಕೋರ್ಟ್‌ನ ಸಾಮಾನ್ಯ ಪ್ರಕ್ರಿಯೆಯ ಅನುಸಾರ ಹೊಸ ಪ್ರಕರಣಗಳು ಅದರಲ್ಲೂ ನಿರೀಕ್ಷಣಾ ಜಾಮೀನು ಕೋರಿಕೆಯ ಕ್ರಿಮಿನಲ್ ಅರ್ಜಿಗಳು ದಾಖಲಾದರೆ ಅವು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲು ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಆದರೆ, ದೊಡ್ಡವರ ಪ್ರಕರಣಗಳನ್ನು ಮಾತ್ರ ದಿನಬೆಳಗಾಗುವದರೊಳಗೆ ಪುರಸ್ಕರಿಸಲಾಗುತ್ತಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.
‘ಇವತ್ತು ಮಾಡಾಳ್ ವಿರೂಪಾಕ್ಷಪ್ಪ ಅವರ ಅರ್ಜಿ ವಿಚಾರಣೆಯಲ್ಲಿ ಕೈಗೊಂಡ ನಿಲುವನ್ನೇ ಶ್ರೀಸಾಮಾನ್ಯರ ವಿಷಯದಲ್ಲೂ ಅನುಸರಿಸುವಂತಾಗಬೇಕು. ಅದಕ್ಕಾಗಿ ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಕಾದು ಕುಳಿತಿರುವ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ನ್ಯಾಯಪೀಠದ ಎದರು ವಿಚಾರಣೆಗೆ ನಿಗದಿಯಾಗುವಂತೆ ಪೋಸ್ಟ್ ಮಾಡಲು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಿ ಕಚೇರಿಗೆ ನಿರ್ದೇಶಿಸುವಂತಾಗಬೇಕು’ ಎಂದು ಸಂಘವು ಮನವಿ ಮಾಡಿದೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವಕೀಲರ ಸಂಘದ ನಡೆಯನ್ನು ಹಲವರು ಪ್ರಶಂಸಿದರೆ, ಇನ್ನೂ ಕೆಲವರು ಪ್ರಶ್ನಿಸಿದ್ದಾರೆ. ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಬಿಜೆಪಿಯ ವಕ್ತಾರರಾಗಿ ಕೆಲಸ ಮಾಡಿದ್ದವರು, ಈಗ ಅವರೇ ಇದನ್ನು ಪ್ರಶನಿದುತ್ತಾರೆ ಎಂದರೆ ಇದರ ಹಿಂದೆ ಏನೋ ಇದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.