ದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷದ ಮೈತ್ರಿಕೂಟವಾದ ಇಂಡಿಯಾದ ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಈ ಪ್ರಸ್ತಾವನೆಯನ್ನು ಬೆಂಬಲಿಸಿದ್ದಾರೆ ಎಂದು ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ಹೇಳಿದ್ದಾಗಿ ಮಂಗಳವಾರ ವರದಿಯಾಗಿದೆ.
ಈ ಬಗ್ಗೆ ಕೇಳಿದ ಪ್ರಶ್ನೆಗೆ, ಮೊದಲು ಗೆಲ್ಲೋಣ, ಪ್ರಧಾನಿ ಅಭ್ಯರ್ಥಿಯ ಬಗ್ಗೆ ನಂತರ ಚರ್ಚಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾಗಿ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ತೊಳ್ ತಿರುಮಾವಲವನ್ ಹೇಳಿದ್ದಾರೆ. ಸೀಟು ಹಂಚಿಕೆ, ಜಂಟಿ ಪ್ರಚಾರದ ನೀಲನಕ್ಷೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ತಂತ್ರವನ್ನು ರೂಪಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷದ ನಾಯಕರು ಚರ್ಚಿಸಿದ ಇಂಡಿಯಾ ಒಕ್ಕೂಟದ ನಾಲ್ಕನೇ ಸಭೆಯಲ್ಲಿ ಈ ಬೆಳಗವಣಿಗೆಗಳು ನಡೆದಿವೆ.
ಇದನ್ನೂ ಓದಿ: ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ: ಜಿಲ್ಲಾಧಿಕಾರಿ ಕಚೇರಿ ಚಲೋದಲ್ಲಿ ಸಿಪಿಐ(ಎಂ) ಆರೋಪ
ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯಗಳಲ್ಲಿ ಸೀಟು ಹಂಚಿಕೆ ಚರ್ಚೆಗಳು ನಡೆಯುತ್ತಿವೆ. ಪಂಜಾಬ್‌ನಂತಹ ಕೆಲವು ರಾಜ್ಯಗಳಲ್ಲಿ ಪಕ್ಷಗಳ ನಡುವಿನ ಹೋರಾಟವನ್ನು ನಂತರ ವ್ಯವಹರಿಸಲಾಗುವುದು ಎಂದು ಹೇಳಿದ್ದಾರೆ. ಪ್ರಮುಖವಾಗಿ, ವಿಪಕ್ಷಗಳ ಮೈತ್ರಿಕೂಟವು 2024 ರ ಲೋಕಸಭೆ ಚುನಾವಣೆಗೆ ತನ್ನ ಜಂಟಿ ಪ್ರಚಾರವನ್ನು ಜನವರಿ 30 ರಂದು ಪ್ರಾರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 22 ರಂದು ಸಂಸದರ ಅಮಾನತು ವಿರುದ್ಧ ವಿರೋಧ ಪಕ್ಷದ ಮೈತ್ರಿಕೂಟ ಪ್ರತಿಭಟನೆ ನಡೆಸಲಿದೆ ಎಂದು ಇಂಡಿಯಾ ಒಕ್ಕೂಟದ ಸಭೆಯ ಮುಕ್ತಾಯದ ನಂತರ ಖರ್ಗೆ ಹೇಳಿದ್ದಾರೆ. ”ದೇಶದಲ್ಲಿ 151 ಮಂದಿ ಸಂಸದರನ್ನು ಅಮಾನತುಗೊಳಿಸಿರುವುದು ಇದೇ ಮೊದಲು.ಇದರ ವಿರುದ್ಧ ಹೋರಾಟ ಮಾಡುತ್ತೇವೆ.ಇದು ತಪ್ಪು. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಿದ್ದೇವೆ. ಡಿಸೆಂಬರ್ 22ರಂದು ಸಂಸದರ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ಈ ಸಭೆಯನ್ನು ಈ ಮೊದಲು ಡಿಸೆಂಬರ್ 6 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ಹಲವಾರು ಪ್ರಮುಖ ನಾಯಕರು ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ಸಭೆಯನ್ನು ಮುಂದೂಡಬೇಕಾಗಿ ಬಂದಿತ್ತು. ಡಿಸೆಂಬರ್ 13 ರ ಲೋಕಸಭೆಯ ಭದ್ರತಾ ಉಲ್ಲಂಘನೆಯ ಕುರಿತು ಪ್ರತಿಭಟನೆ ನಡೆಸಿ, ಸದನದ ಒಳಗೆ ಘೋಷಣೆಗಳನ್ನು ಕೂಗಿದ್ದಕ್ಕಾಗಿ ವಿವಿಧ ವಿರೋಧ ಪಕ್ಷಗಳ 141 ಸಂಸದರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ವಿಪಕ್ಷಗಳು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ವಿಡಿಯೊ ನೋಡಿ: ಸಮುದಾಯ ರಾಜ್ಯ ಸಮ್ಮೇಳನ : ರಂಗಗೀತೆಗಳು : ಜರ್ನಿ ಥಿಯೇಟರ್ ತಂಡದಿಂದ Janashakthi Media