ಸಮುದಾಯ ಸಾಂಸ್ಕೃತಿಕ ಸಂಘಟನೆಯ ಪ್ರಾರಂಭದ ದಿನಗಳಿಂದಲೂ ತೊಡಗಿಸಿಕೊಂಡಿದ್ದ ಎಂ.ಜಿ.ವೆಂಕಟೇಶ್ ರವರನ್ನು ಕೋವಿಡ್ ಬಲಿ ತೆಗೆದುಕೊಂಡಿತು. ಕಳೆದ ಸುಮಾರು ಒಂದು ತಿಂಗಳಿನಿಂದ ಕೋವಿಡ್ ವಿರುದ್ದ ಸೆಣಸಿದ ಗೆಳೆಯನನ್ನು ಕೋವಿಡ್ ಮಣಿಸಿಯೇ ಬಿಟ್ಟಿತು. ಸಂಗೀತ, ರಂಗಭೂಮಿ, ಸಾಹಿತ್ಯಗಳ ವಿಷಯದಲ್ಲಿ ತಾಸುಗಟ್ಟಲೇ ಮಾತಾಡಬಲ್ಲ, ತಿಳಿದಿಲ್ಲದ ವಿಷಯವೇ ಇಲ್ಲವೆಂಬಂತಿದ್ದ ಎಂ.ಜಿ.ವೆಂಕಟೇಶ್ ತನ್ನ ಪಾಂಡಿತ್ಯದ ಪ್ರದರ್ಶನವನ್ನು ಎಂದೂ ಮಾಡಿದ ವ್ಯಕ್ತಿಯಲ್ಲ. ಆದರೆ ಮಾತಿಗೆ ಕುಳಿತರೆ ಮಾಹಿತಿಯ ಬುಟ್ಟಿ ಖಾಲಿಯಾದುದೇ ಇಲ್ಲ.
ಸಮುದಾಯ ಸಂಘಟಿಸಿದ ಸಾಂಸ್ಕೃತಿಕ ಜಾಥಾಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಎಂ.ಜಿ.ವೆಂಕಟೇಶ್ ಹತ್ತು ವರ್ಷಗಳ ಕಾಲ ಸಮುದಾಯ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿದ್ದವರು. ನಟ, ರಂಗ ಸಂಘಟಕ, ಹಾಡುಗಾರ ಕೂಡಾ.
ಭಾರತದ ಮಹಾ ಲೆಕ್ಕ ಪರಿಶೋಧಕರ ಕಛೇರಿಯಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಕರ್ತವ್ಯ ನಿರ್ವಹಣೆಗೆ ದೇಶದಾದ್ಯಂತ ಸಂಚರಿಸಿದವರು. ಹುದ್ದೆಯ ದರ್ಪವನ್ನೂ ತೋರದ, ಲೆಕ್ಕ ಪರಿಶೋಧಕರಾಗಿ ಕರ್ತವ್ಯ ನಿಷ್ಠೆಗೆ ಎಂದೂ ಎರವಾಗದಂತೆ ನಿರ್ವಹಿಸಿದವರು.
ಇದನ್ನು ಓದಿ: ರಂಗಕರ್ಮಿ, ಹೋರಾಟಗಾರ ಎಂ.ಜಿ. ವೆಂಕಟೇಶ್ ಇನ್ನಿಲ್ಲ
ಸಾಂಸ್ಕೃತಿಕ ಬೇರು ಬಿಳಲುಗಳ ಆಲದ ಮರದಂತಿದ್ದ ಅವರು ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಜನ ನಾಟ್ಯ ಮಂಚ್ ಮತ್ತು ಅದರ ಸಂಸ್ಥಾಪಕ ರಂಗ ಸಂಘಟಕ ಸಫ್ದರ್ ಹಾಷ್ಮಿಯವರ ನಿಕಟ ಸಂಪರ್ಕದಲ್ಲಿ ಇದ್ದವರು. ಇತ್ತೀಚೆಗೆ ಸುಧನ್ವಾ ದೇಶಪಾಂಡೆ ಯವರು ಬರೆದ “ಸಫ್ದರ್ ಹಾಶ್ಮಿ ಸಾವು ಮತ್ತು ಬದುಕು – ಹಲ್ಲಾ ಬೋಲ್” ಎನ್ನುವ ಇಂಗ್ಲಿಷ್ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದರು. ಕನ್ನಡದಲ್ಲಿ ಒಂದು ಅತ್ಯುತ್ತಮ ಪುಸ್ತಕವೆಂದು ಹಲವು ಜನರಿಂದ ಮೆಚ್ಚುಗೆ ಗಳಿಸಿದ ಈ ಪುಸ್ತಕವನ್ನು ನಮಗೆ ಬಿಟ್ಟು ತಮ್ಮ ಅಪೂರ್ವ ವಿದ್ವತ್ ನ್ನು ಒಳಗೇ ಇಟ್ಟುಕೊಂಡು ಅರ್ಧ ದಾರಿಯಲ್ಲಿ ವಿದಾಯ ಹೇಳಿದ ಗೆಳೆಯ ಎಂ.ಜಿ.ವೆಂಕಟೇಶ್ ರವರಿಗೆ ಸಮುದಾಯ ಕರ್ನಾಟಕ ಅಂತಿಮ ನಮನಗಳನ್ನು ಸಲ್ಲಿಸುತ್ತದೆ.
– ಸಮುದಾಯ ಕರ್ನಾಟಕ
ಎಂ.ಜಿ.ವೆಂಕಟೇಶ್ ಅವರನ್ನು ಸಫ್ದರ್ ಹಾಶ್ಮಿ ಅವರೇ ನನಗೆ ಪರಿಚಯ ಮಾಡಿಸಿದ್ದು. ಅಂದಿನಿಂದ ನನಗೆ ಆತ್ಮೀಯನಾದ ಸಹ-ರಂಗಕರ್ಮಿ, ಸಂಗಾತಿ, ಎಲ್ಲಕ್ಕಿಂತಲೂ ಹೆಚ್ಚಾಗಿ ಹಿರಿಯಣ್ಣನಂತೆ. ನನ್ನ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವಾಗ ಹಲವು ಬಾರಿ ದೇಶದ ವಿವಿಧ ಸಾಂಸ್ಕೃತಿಕ ಚಳುವಳಿ ಕುರಿತು ಮಾತನಾಡಿದ್ದೆವು. ಆಗ ಅವರಿಂದ ಒಂದು ಭಾಷೆ ಪಡೆದಿದ್ದೆ. ಅದು ಈ ಅನುವಾದ ಮುಗಿದ ಕೂಡಲೇ ಸಮುದಾಯದ ಸಮಗ್ರ ಇತಿಹಾಸವನ್ನು ಬರೆಯಬೇಕು ಎಂದು. ಸಮುದಾಯ ದೇಶದಲ್ಲೇ ವಿಶಿಷ್ಟವಾದ ಸಾಂಸ್ಕೃತಿಕ ಚಳುವಳಿ. ಅದರ ಇತಿಹಾಸ ಬರೆಯುವುದು ರಂಗಚಳುವಳಿಯ, ಎಡಚಳುವಳಿಯ, ಇತಿಹಾಸ ಅಳಿಸಿ ಹಾಕಲಾಗುತ್ತಿರುವ ತಿರುಚಲಾಗುತ್ತಿರುವ ದೇಶದ ಭವಿಷ್ಯದ ದೃ಼ಷ್ಟಿಯಿಂದ ಅತ್ಯಂತ ತುರ್ತಿನದು. ಇದನ್ನು ಮಾಡಲು ಅತ್ಯಂತ ಸಮರ್ಥರಾಗಿದ್ದವರು ಎಂ.ಜಿ.ವೆಂಕಟೇಶ್ ಆದರೆ ಆ ಭಾಷೆಯನ್ನು ಈಗ ಸಮುದಾಯದ ಮತ್ತು ಇತರ ಸಾಂಸ್ಕೃತಿಕ ಒಡನಾಡಿಗಳು ಪೂರೈಸಬೇಕಾಗಿದೆ. ಇದು ಅವರಿಗೆ ಕೊಡಬಹುದಾದ ನಿಜವಾದ ಶ್ರದ್ಧಾಂಜಲಿ.
– ಸುಧನ್ವ ದೇಶಪಾಂಡೆ, ಜನಮ್/ಲೆಫ್ಟ್ ವರ್ಡ್
ಹಲ್ಲಾಬೋಲ್ ಪುಸ್ತಕದ ಕನ್ನಡ ಭಾಷಾಂತರ ಮಾಡಿದ ಗೆಳೆಯ. ಆನ್ಲೈನ್ ಬಿಡುಗಡೆ ನಾಸಿರುದ್ದಿನ್ ಶಾ ಮಾಡಿದ್ದರು. ಅವರು ಒಪ್ಪಿದ್ದಾರೆ ಎಂದು ಹೇಳಿದಾಗ ಅದೆಷ್ಟು ಸಂಭ್ರಮಿಸಿದ್ದ… ಮಾತಾಡಲು ಪ್ರಾರಂಭಿಸಿದರೆ ಎನ್ಸೈಕ್ಲೋಪೀಡಿಯಾ….. ವಿಷಯಗಳ ಗಣಿ. ಅವನ ಜೊತೆ ಎಲ್ಲ ತಗೊಂಡು ಹೀಗೆ ಹೋಗಲು ಅಧಿಕಾರ ಇರಲಿಲ್ಲ ಅವನಿಗೆ. ಈ ಗೆಳೆಯ ಇನ್ನಿಲ್ಲವೆಂದು ಹೇಗೆ ನಂಬಲಿ. ಸಮುದಾಯ ಸಾಂಸ್ಕೃತಿಕ ಸಂಘಟನೆಯ ಪ್ರಾರಂಭದ ದಿನಗಳಿಂದ ತೊಡಗಿಸಿಕೊಂಡಿದ್ದ ಈ ಗೆಳೆಯನಿಗೆ ಸಮುದಾಯದ ಪ್ರತಿಯೊಂದು ವಿಷಯಗಳೂ ನಾಲಿಗೆಯ ತುದಿಯಲ್ಲಿ. ಬರಿಯೋ… ಬರಿಯೋ ಎಂದು ಹೇಳ್ತಾನೆ ಇದ್ದೆ. ಕಳೆದ ತಿಂಗಳು ಏಪ್ರಿಲ್ 12 ಸಫ್ದರ್ ಹಾಷ್ಮಿ ಹುಟ್ಟಿದ ದಿನ ಹಠ ಮಾಡಿ ಮನೆಗೆ ಕರೆಸಿಕೊಂಡು ಜನಶಕ್ತಿ ಗೆ ಸಫ್ದರ್ ಹಾಷ್ಮಿ ಯ ಜೊತೆಗಿನ ಅವನ ಸಾಂಗತ್ಯ, ಹಲ್ಲಾ ಬೋಲ್ ಪುಸ್ತಕದ ಮತ್ತೊಂದು ಮೆಲುಕು ಕಾರ್ಯಕ್ರಮ ಲೈವ್ ಮಾಡಿದ್ದೆ. ಹೋಗುವಾಗ ಮಾತು ಕೊಟ್ಟ ಖಂಡಿತಾ ಸಮುದಾಯದ ಕುರಿತು ಬರೀತೀನಿ ಅಂದ. ಆದರೆ……. ಸರಕಾರ ಪ್ರಜ್ಞಾಪೂರ್ವಕವಾಗಿ ಹಾಳುಗೆಡವಿದ ಆರೊಗ್ಯ ವ್ಯವಸ್ಥೆ ಮತ್ತೊಬ್ಬ ಗೆಳೆಯನ ಬಲಿ ತೆಗೆದುಕೊಂಡಿತು.
– ಕೆ.ಎಸ್.ವಿಮಲ
ಹಿರಿಯ ರಂಗಕರ್ಮಿ ಸಮುದಾಯದ ಸಂಗಾತಿ. ಸತತವಾಗಿ ಹತ್ತು ವರ್ಷಗಳು ಸಮುದಾಯ ಸಾಂಸ್ಕೃತಿಕ ಸಂಘಟನೆ ಪ್ರಧಾನ ಕಾರ್ಯದರ್ಶಿಯಾಗಿ, ನಾನು ಅಧ್ಯಕ್ಷನಾಗಿದ್ದಾಗ ನನ್ನೊಂದಿಗೆ ರಾಜ್ಯದೆಲ್ಲೆಡೆ ಸಂಘಟನೆಯನ್ನು ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕ್ರಿಯಾಶೀಲವಾಗಿ ಕಟ್ಟಲು ಹೆಗಲಿಗೆ ಹೆಗಲು ಕೊಟ್ಟವರು ಎಂ.ಜಿ.ವೆಂಕಟೇಶ್. ವಿಶ್ವಶಾಂತಿಗಾಗಿ ಸಮುದಾಯ ಸಂಘಟಿಸಿದ ೧೦೦ ಅಡಿಗಳ ಬಣ್ಣದ ನಡೆ ಜಾಥಾದಲ್ಲಿ ದೇಶದ ಹಲವು ನಗರಗಳಲ್ಲಿ ಜೊತೆಯಾಗಿದ್ದವರು. ಸಮುದಾಯದ ಕುಟುಂಬದ ಪ್ರೀತಿಯ ಹಿರಿಯ ಜೀವ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಎಂ.ಜಿ.ವೆಂಕಟೇಶ್ ನ ಆತ್ಮೀಯ ನಗು… ಅವರ ಸಾಮಾಜಿಕ ಸಾಂಸ್ಕೃತಿಕ ತಾತ್ವಿಕ ಬದ್ಧತೆಯನ್ನು ಮರೆಯಲಾಗದು. ಎಂ.ಜಿ.ವೆಂಕಟೇಶ್ ನೆನಪು ಚಿರಸ್ಮರಣೀಯವಾಗಿ ಸಾಂಸ್ಕೃತಿಕ ಜಗತ್ತಿನಲ್ಲಿ ಸಮುದಾಯದ ನೆನಪಲಿ ಸದಾ ಅಮರವಾಗಿರಲಿದೆ.
– ಸಿ.ಬಸವಲಿಂಗಯ್ಯ
ಹಾಡು ತೋರಿದ ಹಾದಿ: ಎಂ.ಜಿ.ವೆಂಕಟೇಶ್ ದೇಶದಲ್ಲಿನ ತುರ್ತುಪರಿಸ್ಥಿತಿ ನಂತರ ಸಾಂಸ್ಕೃತಿಕ ಸಂಘಟನೆಯಾದ ಸಮುದಾಯ ಕನ್ನಡ ನೆಲದಲ್ಲಿ ನಡೆಸಿದ ಪ್ರಥಮ ಸಾಂಸ್ಕೃತಿಕ ಜಾಥಾ ದಲ್ಲಿ ಜತೆಯಾದ ಅಪರೂಪದ ಹಿರಿಯ ಗೆಳೆಯ. ಜಾಥಾ ಸಂದರ್ಭದಲ್ಲಿ ಅರ್ಧ ಕರ್ನಾಟಕ ಸುತ್ತುತ್ತಾ ನಾಟಕ ಪ್ರದರ್ಶನಕ್ಕೂ ಮುಂಚೆ ಜನ್ನಿ ನೇತೃತ್ವದ ನಮ್ಮ ಹಾಡುಗಾರರ ತಂಡ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದೆವು. ನಾವು ಹಾಡುತ್ತಿದ್ದ ಆ ಹಾಡುಗಳಲ್ಲಿ ಈ “ಹಳ್ಳಿಗಾಡ ಹಸುಗೂಸೆ” ಕೂಡ ಒಂದು. ಗೆಳೆಯ ಎಂ.ಜಿ.ವೆಂಕಟೇಶ್ ಅವರಿಗೆ ತುಂಬಾ ಇಷ್ಟವಾದ ಹಾಡು. ಕೊರೊನ ವೆಂಕಟೇಶ್ ಅನ್ನು ನಮ್ಮಿಂದ ಕಸ್ಕೊಂಡಿರಬಹುದು. ಆದರೆ ಅವರ ನಮ್ಮ ಒಡನಾಟದ ನೂರಾರು ನೆನಪುಗಳನ್ನು ಕಸ್ಕೊಳ್ಳಲಾರದು. ಆ ನೆನಪುಗಳಲ್ಲಿ ಇದೂ ಒಂದು. ಅವರಿಗೆ ಇಷ್ಟವಾದ ಹಾಡಿನೊಂದಿಗೆ, ವೆಂಕಟೇಶ್ ನಿಮ್ಗೆ ಭಾವಪೂರ್ಣ ನಮನಗಳು.
– ಪಿಚ್ಚಳ್ಳಿ ಶ್ರೀನಿವಾಸ (ಯೂ ಟ್ಯೂಬ್ ನಲ್ಲಿ)
ಯುವ ಸದಸ್ಯರುಗಳಿಗೆ ಮಾದರಿ : ಸಮುದಾಯ ಸಂಘಟಿಸಲು ಬಹಳ ಕಾಲ ರಾಜ್ಯವಿಡೀ ಸಂಚರಿಸಿ, ಎಲ್ಲ ಕಾರ್ಯಕ್ರಮಗಳಲ್ಲೂ ಮುಂದೆ ನಿಂತು ಭಾಗವಹಿಸುತ್ತಿದ್ದ ಎಂ ಜಿ ವೆಂಕಟೇಶ್ ಅವರು ಯುವ ಸದಸ್ಯರುಗಳಿಗೆ ಮಾದರಿಯಾಗಿದ್ದರು… ಸದಾ ಹಸನ್ಮುಖಿ, ತಿಳಿ ಹಾಸ್ಯದ ಮಾತುಗಳು, ಈ ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಹಾಗೂ ರಾಜಕೀಯ ಬದ್ಧತೆ ಇದ್ದವರು.
– ಕಾವ್ಯ ಅಚ್ಯುತ್