ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಕಾಯ್ದೆಗಳನ್ನು ವಾಪಾಸು ಪಡೆಯಲು ಒತ್ತಾಯ

ಬೆಂಗಳೂರು: ಕರ್ನಾಟಕ ಸರಕಾರ ರಾಜ್ಯದಲ್ಲಿ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ಲೂಟಿಯ ಪರವಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸಿತ್ತಿರುವುದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಜಂಟಿಯಾಗಿ ಹೇಳಿಕೆ ನೀಡಿವೆ.

ಕರ್ನಾಟಕ ಸರಕಾರ ಕಳೆದ ವರ್ಷ ರಾಜ್ಯದ ಜನತೆ ಕೋವಿಡ್ ಸಂಕಷ್ಠದಲ್ಲಿರುವಾಗ, ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳಲ್ಲಿ ನಿಯಮಾವಳಿಯಂತೆ ವಿಶೇಷ ಚರ್ಚೆಗೆ ಒಳಪಡಿಸದೇ ಅದೇ ರೀತಿ, ಅಂತಹ ಕಾಯ್ದೆಗಳಿಂದ ಬಾಧಿತರಾಗುವ ಜನ ಸಮುದಾಯಗಳು ಮತ್ತು ತಜ್ಞರುಗಳು, ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಜೊತೆ ವ್ಯಾಪಕ ಚರ್ಚೆಗೊಳಪಡಿಸದೇ ಸಂಚಿನಂತೆ ತರಾತುರಿಯಲ್ಲಿ ಮತ್ತು ಅಧಿವೇಶನಗಳ ಕೊನೆಯ ಹಂತದಲ್ಲಿ ಮೂರು ರೈತವಿರೋಧಿ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದೆ.

“ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020”, ಪರಂಪರೆಯಿಂದ ರೈತರ ವಶದಲ್ಲಿದ್ದು ಉದ್ಯೋಗದ ಭದ್ರತೆಯನ್ನೊದಗಿಸುತ್ತಿದ್ದ ಕೃಷಿ ಭೂಮಿಗಳನ್ನು ಬಲವಂತವಾಗಿ ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ, ಕೃಷಿಕರಲ್ಲದ ಶ್ರೀಮಂತರ ಕೈಗೆ ವರ್ಗಾಯಿಸುತ್ತವೆ ಮಾತ್ರವಲ್ಲಾ, ದೊಡ್ಡ ಬಂಡವಾಳದಾರ ಕೃಷಿ ಉದ್ಯಮಕ್ಕೆ ದಾರಿ ತೆರೆಯಲಿದೆ. ಉಪ ಕಸುಬುಗಳನ್ನು ಕಿತ್ತುಕೊಳ್ಳಲಿದೆ. ಇದು ಗ್ರಾಮೀಣ ಜನತೆಯನ್ನು ತೀವ್ರ ಬಾಧೆಗೀಡು ಮಾಡಿ, ಅವರ ಹಸಿವಿನ ಸಾವುಗಳನ್ನು ಮತ್ತು ಆತ್ಮಹತ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದೆ.

ಅದೇ ರೀತಿ, “ಎಪಿಎಂಸಿ ತಿದ್ದುಪಡಿ ಕಾಯ್ದೆ-2020” ಕೃಷಿ ಉತ್ಪನ್ನಗಳ ಬೆಲೆಗಳನ್ನು ಏರಿಳಿತ ಮಾಡಿ ರೈತರನ್ನು ಲೂಟಿಗೊಳಪಡಿಸುವ ದೊಡ್ಡ ವರ್ತಕರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗಲಿದೆ, ಇದು ಕೆಲವೇ  ವರ್ಷಗಳಲ್ಲಿ ರೈತರನ್ನು ಮತ್ತು ಕೃಷಿ ಆಧರಿಸಿದ ಎಲ್ಲ ಗ್ರಾಮೀಣ ಜನತೆಯ ಬದುಕನ್ನು ಕಿತ್ತುಕೊಳ್ಳಲಿದೆ. ರಾಜ್ಯದ ಸಾರ್ವಜನಿಕ ಒಡೆತನದ ನೂರಾರು ಎಪಿಎಂಸಿಗಳ ಹಲವು ದಶ ಸಾವಿರ ಕೋಟಿ ಮೊತ್ತದ ಬೆಲೆಬಾಳುವ ಆಸ್ತಿಗಳನ್ನು ಕೊಳ್ಳೆ ಹೊಡೆಯಲು ನೆರವಾಗಲಿದೆ.

“ಜಾನುವಾರು ಹತ್ಯೆ ನಿಷೇದ ತಿದ್ದುಪಡಿ ಕಾಯ್ದೆ-2020” ರಾಜ್ಯದ ಹೈನುಗಾರಿಕೆಯನ್ನು ಹೊರೆಯಾಗಿಸಿ ಅವರನ್ನು ಹೊರದೂಡಲಿದೆ. ಸಾರ್ವಜನಿಕ ರಂಗದ ಹೈನು ಉದ್ಯಮವಾದ ಕರ್ನಾಟಕ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಾಶ ಮಾಡಿ, ಕಾರ್ಪೊರೇಟ್ ಲೂಟಿಗೆ ನೆರವಾಗಲಿದೆ. ದಲಿತರು, ಅಲ್ಪ ಸಂಖ್ಯಾತರು ಮತ್ತಿತರರ ಆಹಾರದ ಹಕ್ಕನ್ನು ಕಸಿದುಕೊಂಡು ಈ ಬಡವರಿಗೆ ಪೌಷ್ಠಿಕ ಆಹಾರ ದೊರೆಯದಂತೆ ಆಕ್ರಮಣ ಮಾಡಲಿದೆ.

ಅದೇ ರೀತಿ, “ನೂತನ ರಾಷ್ಟ್ರೀಯ ಶಿಕ್ಷಣ ನೀತಿ”ಯು ಕನ್ನಡ ಹಾಗೂ ಕನ್ನಡಿಗರ ಇತರ ಭಾಷೆಗಳ ಮತ್ತು ಬದುಕಿನ ಮೇಲಿನ ಮತ್ತೊಂದು ತೀವ್ರ ಧಾಳಿಯಾಗಿದೆ. ದಲಿತರು, ಮಹಿಳೆಯರು ಮತ್ತು ಬಡವರಿಗೆ ಶಿಕ್ಷಣವನ್ನು ಮತ್ತು ಉದ್ಯೋಗಾವಕಾಶಗಳನ್ನು ನಾಶ ಮಾಡಲಿದೆ. ಮದ್ಯಮ ವರ್ಗವನ್ನು ಈ ನೀತಿಯು ತೀವ್ರವಾದ ಲೂಟಿಗೆ ತೆರೆಯಲಿದೆ.

ಕೇಂದ್ರ ಸರಕಾರವೂ ಇಂತಹದ್ದೇ ಕಾರ್ಪೊರೇಟ್ ಲೂಟಿಗೆ ನೆರವಾಗುವ ದೇಶ ಹಾಗೂ ರೈತ ವಿರೋಧಿ ಕೃಷಿ ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು, ಕಾಯ್ದೆಗಳು ಅಲ್ಲದೇ ದೇಶದ ಗ್ರಾಹಕರನ್ನು ಕಾಳ ಸಂತೆಯ ಮೂಲಕ ವ್ಯಾಪಕ ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳ ಜಾರಿಗೆ ಕ್ರಮವಹಿಸಿದೆ. ಆದರೇ ಸುಪ್ರಿಂ ಕೋರ್ಟ ಮಧ್ಯ ಪ್ರವೇಶದಿಂದ ಜಾರಿಗೊಳಿಸಲಾಗುತ್ತಿಲ್ಕ. ವಿದ್ಯುತ್ ರಂಗ ಮತ್ತಿತರೆ ಸಾರ್ವಜನಿಕ ಉದ್ದಿಮೆಗಳ ಲೂಟಿಕೋರ ಖಾಸಗೀಕರಣವನ್ನು ಜಾರಿಗೊಳಿಸುತ್ತಿದೆ. ಅದೇ ರೀತಿ ತೀವ್ರ ಸಂಕಷ್ಠದಲ್ಲಿರುವ ಜನತೆಯ ಮೇಲೆ ಹೇರುತ್ತಿರುವ ಬೆಲೆ ಏರಿಕೆಯ ಹೊರೆಯೂ ಸೇರಿದಂತೆ ಈ ಎಲ್ಲವುಗಳನ್ನು ತಡೆಯಲು ಮುಂದಾಗದೇ ತಮ್ಮ ಸರಕಾರ ಬೆಂಬಲಿಸುತ್ತಿರುವುದು  ಮತ್ತು ಅವುಗಳಿಗೆ ಪೂರಕವಾಗಿ ಈ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದು ತೀವ್ರ ಖಂಡನೀಯವಾಗಿದೆ.

ರಾಜ್ಯದ ಜನತೆ ಕೋವಿಡ್ ಸಂಕಷ್ಠದ ನಡುವೆಯು, ಈ ಕುರಿತಂತೆ ವ್ಯಾಪಕವಾದ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರೂ ತಮ್ಮ ಸರಕಾರ ಕಣ್ಣಿದ್ದು ಕುರುಡನಂತೆ ಮತ್ತು ಕಿವಿಯಿದ್ದು ಕಿವುಡನಂತೆ ಲೂಟಿಕೋರ ಜಾಣತನವನ್ನು ಮರೆಯುತ್ತಿರುವುದು ಸರಕಾರದ ಘನತೆಯನ್ನು ಕುಗ್ಗಿಸಿದೆ.

ಒಟ್ಟಾರೆ ಈ ಎಲ್ಲಾ ಲೂಟಿಕೋರರ ಪರವಾದ ಈ ಕಾಯ್ದೆಗಳು, ನೂತನ ಶಿಕ್ಷಣ ನೀತಿಯ ಜಾರಿ, ಇವು, ರಾಜ್ಯದ ಎಲ್ಲ ದುಡಿಯುವ ಜನತೆಯನ್ನು ದುರ್ಬಲ ಸಮುದಾಯಗಳನ್ನು ಹೊಸಕಿಹಾಕಲಿವೆ.

ಈ ಕಾಯ್ದೆಗಳು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ, ದೇಶದ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಹಾಗೂ ಸಾರ್ವ ಭೌಮತೆ ಮತ್ತು ಒಕ್ಕೂಟವಾದಿ ಸ್ವರೂಪದ ಮೇಲೆ ತೀವ್ರ ದಾಳಿ ನಡೆಸಲಿವೆ. ಇವು ಭಾರತದ ಸಂವಿಧಾನದ ವಿರೋಧಿ ನಡೆಗಳಾಗಿವೆ.

ಆದ್ದರಿಂದ, ಈ ಕೂಡಲೆ ರಾಜ್ಯ ಸರಕಾರ ಈ ವಿಧಾನಸಭಾ ಅಧಿವೇಶನದಲ್ಲಿಯೇ ಈ ಎಲ್ಲ ಸಂವಿಧಾನ ಹಾಗೂ ಜನ ವಿರೋಧಿಯಾದ ಕಾಯ್ದೆಗಳನ್ನು ವಾಪಾಸು ಪಡೆಯಲು ಮತ್ತು ಈ ಕೂಡಲೆ ಅವುಗಳ ಜಾರಿಯನ್ನು ತಡೆಯಲು ಬಲವಾಗಿ ಒತ್ತಾಯಿಸುತ್ತೇವೆ ಏಳು ಪಕ್ಷಗಳ ರಾಜ್ಯ ಘಟಕಗಳು ತಿಳಿಸಿವೆ.

ಯು. ಬಸವರಾಜ, ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ)-ಸಿಪಿಐ(ಎಂ)

ಸಾತಿ ಸುಂದರೇಶ್, ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ

ಕೆ‌. ಉಮಾ, ಕಾರ್ಯದರ್ಶಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ(ಕಮ್ಯುನಿಸ್ಡ್)-ಎಸ್‌ಯುಸಿಐ(ಸಿ)

ಕ್ಲಿಫ್ಟನ್ ಡಿ ರೋಜಾರಿಯೋ, ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ -ಲಿಬರೇಷನ್)-ಸಿಪಿಐ(ಎಂಎಲ್‌)

ಜಿ.ಆರ್. ಶಿವಶಂಕರ್, ಕಾರ್ಯದರ್ಶಿ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ

ಚಾಮರಸ ಮಾಲೀ ಪಾಟೀಲ, ಗೌರವಾಧ್ಯಕ್ಷರು, ಸ್ವರಾಜ್ ಇಂಡಿಯಾ

ಮೋಹನ್ ರಾಜ್, ಅಧ್ಯಕ್ಷರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ

Donate Janashakthi Media

Leave a Reply

Your email address will not be published. Required fields are marked *