ನವದೆಹಲಿ: ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಪ್ರತಿದಿನವೂ ಪರಿಷ್ಕರಣೆಯಾಗುವ ಮಾದರಿಯಲ್ಲೇ ಎಲ್‌ಪಿಜಿ ಸಿಲಿಂಡರ್ ಬೆಲೆ ಕೂಡ ವಾರಕ್ಕೊಮ್ಮೆ ಪರಿಷ್ಕರಣೆಯಾಗಲಿದೆ. 2021ರಿಂದಲೇ ಪ್ರತಿವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ. ಈ ನಿರ್ಧಾರದಿಂದ ಗ್ರಾಹಕರಿಗೆ ಟೆನ್ಷನ್ ಆರಂಭವಾಗಿದ್ದು, ಪ್ರತಿವಾರವೂ ಅಡುಗೆ ಅನಿಲ ದರ ಹೆಚ್ಚಾಗಬಹುದಾ? ಎಂಬ ಆತಂಕ ಶುರುವಾಗಿದೆ.
ಪ್ರಸ್ತುತ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಆಯಾ ದಿನದ ಆರು ಗಂಟೆ ಬಳಿಕ ಪರಿಷ್ಕರಣೆಯಾದ ದರ ಅನ್ವಯವಾಗುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಿಂಗಳ ಆರಂಭದಲ್ಲೇ ತೈಲ ಬೆಲೆ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪೆನಿಗಳು ತಿಂಗಳು ಪೂರ್ತಿಯಾಗಿ ಭರಿಸಬೇಕಿತ್ತು. ಹೀಗಾಗಿ ಪ್ರತಿ ವಾರವೂ ಎಲ್‌ಪಿಜಿ ಬೆಲೆ ಪರಿಷ್ಕರಣೆ ಮಾಡುವ ಕುರಿತು ತೈಲ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಆಗಾಗ್ಗೆ ಏರಿಳಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಆಧರಿಸಿ ಪ್ರತಿ ವಾರವೂ ಬೆಲೆ ನಿಗದಿ ಮಾಡಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿವಾರವೂ ಎಲ್‌ಪಿಜಿ ಬಳಕೆದಾರರಿಗೆ ಟೆನ್ಷನ್ ತಪ್ಪಿದ್ದಲ್ಲ.
ಪೆಟ್ರೋಲ್, ಡಿಸೇಲ್ ದರವನ್ನು ಪ್ರತಿದಿನ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಗೆ ಬಂದ ಬಳಿಕ ಬಹುತೇಕ ದರ ದುಪ್ಪಟ್ಟು ಏರಿಕೆಯಾಗಿದೆ. ಡೀಲರ್ ಕಮಿಷನ್ ಮತ್ತು ಅಬಕಾರಿ ಸುಂಕ ಸೇರ್ಪಡೆಯಾಗಿರುವುದರಿಂದ ಪೆಟ್ರೋಲ್, ಡಿಸೇಲ್ ದರ ಕಡಿಮೆಯಾಗುತ್ತಿಲ್ಲ. ಈಗ ಸಾಲಿಗೆ ಅಡುಗೆ ಅನಿಲ್ ಸೇರಿಕೊಳ್ಳುತ್ತಿದೆ. ಇದೆ ತಿಂಗಳಲ್ಲಿ ಎರಡು ಬಾರಿ ಅಡುಗೆ ಅನಿಲದರ ಹೆಚ್ಚಳವಾಗಿತ್ತು. 597 ರೂ ಇದ್ದ ಅಡುಗೆ ಅನಿಲದರ 100 ರೂ ಹೆಚ್ಚಳವಾಗುವ ಮೂಲಕ 697 ರೂ ನಿಗದಿಯಾಗಿತ್ತು.
ವಾಹನ ಸವಾರರು ಪ್ರತಿದಿನವೂ ಪೆಟ್ರೋಲ್ ಡೀಸೆಲ್ ದರ ಏರಿಕೆ ಕಂಡು ಹೌಹಾರುವಂತೆಯೇ, ಮುಂದಿನ ವರ್ಷದಿಂದ ಎಲ್‌ಪಿಜಿ ಗ್ರಾಹಕರು ಪ್ರತಿ ವಾರವೂ ಟೆನ್ಷನ್ ಅನುಭವಿಸಬೇಕಿದೆ. ತೈಲ ಕಂಪನಿಗಳ ಈ ನಿರ್ಧಾರಕ್ಕೆ ವ್ಯಾಪಕ ವಿರೋಧವ್ಯಕ್ತವಾಗುತ್ತಿದ್ದು, ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಬೆಲೆ ಹೆಚ್ಚಳವಾದರೆ ಹೋರಾಟ, ಚೀರಾಟ ಮಾಡುತ್ತಿತ್ತು. ಈಗ ಅವರದ್ದೆ ಸರಕಾರ ಇದೆ ಯಾಕೆ ಬಾಯಿಗೆ ಬಿಗ ಹಾಕಿಕೊಂಡಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.