ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಲವ್ ಜಿಹಾದ್ ಕಾರಣವಲ್ಲ: ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖ

ಹುಬ್ಬಳ್ಳಿ :ನೇಹಾ ಹಿರೇಮಠ ಹತ್ಯೆಗೆ ಆರೋಪಿಯ ಹತಾಶೆಯೇ ಕಾರಣ ಎಂದು ಸಿಐಡಿ ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ, ಲವ್ ಜಿಹಾದ್​ ಕುರಿತ ಯಾವುದೇ ವಿಚಾರಗಳನ್ನು ನಮೂದಿಸಿಲ್ಲ. ಒಟ್ಟು 483 ಪುಟಗಳ ಚಾರ್ಜ್​ಶೀಟ್ ಸಲ್ಲಿಸಲಾಗಿದೆ.

ಆರೋಪಿ ಫಯಾಜ್ ವಿರುದ್ಧ ಐಪಿಸಿ ಕಲಂ 302 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ), 341(ಒಂದು ತಿಂಗಳ ಜೈಲು ಶಿಕ್ಷೆ) ಹಾಗೂ 506 (ಜೀವ ಬೆದರಿಕೆಗಾಗಿ 7 ವರ್ಷಗಳ ಜೈಲು ಶಿಕ್ಷೆ) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ಇದನ್ನೂ ಓದಿ: ಡೆಂಗ್ಯೂ ಹೆಚ್ಚಳಕ್ಕೆ ಹೈಕೋರ್ಟ್ ಕಳವಳ – ಸುಮೋಟೋ ಕೇಸ್ ದಾಖಲು

ನೇಹಾ ತಂದೆ, ತಾಯಿ, ಸಹೋದರ, ಸಹಪಾರಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಒಟ್ಟು 99 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು, ಸಿಸಿಟಿವಿ ದೃಶ್ಯಾವಳಿಗಳು, ದಾಖಲೆಗಳು, ಮರಣೋತ್ತರ ಶವ ಪರೀಕ್ಷೆ ಕೈಗೊಂಡ ವೈದ್ಯರು ಹಾಗೂ ತಜ್ಞರ (ಫೊರೆನ್ಸಿಕ್) ವರದಿಗಳೂ ಅಡಕವಾಗಿವೆ.

2020-21ರಲ್ಲಿ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಫಯಾಜ್ ಮತ್ತು ನೇಹಾ ಬಿಸಿಎ ಅಧ್ಯಯನ ಮಾಡುತ್ತಿದ್ದಾಗ ಸಹಾರಿಗಳಾಗಿದ್ದರು. ಇಬ್ಬರೂ ಆರಂಭದಲ್ಲಿ ಸ್ನೇಹಿತರಾಗಿದ್ದರು. 2022ರಲ್ಲಿ ಕ್ರಮೇಣ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. 2024ರ ಮಾರ್ಚ್ ತಿಂಗಳಿನಲ್ಲಿ ಇಬ್ಬರಿಗೂ ಮನಸ್ತಾಪ ಉಂಟಾಗಿತ್ತು. ಇದರಿಂದ ಬೇಸತ್ತ ನೇಹಾ, ಫಯಾಜ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು.

ಫಯಾಜ್‌ ನನ್ನು ನೇಹಾ ನಿರ್ಲಕ್ಷ್ಯ ಮಾಡಲು ಆರಂಭಿಸಿದ್ದರಿಂದ ಆತ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದ್ದಾರೆ. 2024ರ ಏಪ್ರಿಲ್ 18ರಂದು ಸಂಜೆ 4. 40ರ ವೇಳೆಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾರೆ.

ಕೊಲೆಗೂ ಮುನ್ನ ನೇಹಾ ಎದುರು ಫಯಾಜ್, “ಇಷ್ಟು ದಿನ ಪ್ರೀತಿಸಿ ಈಗ ಮೋಸ ಮಾಡುತ್ತಿದ್ದೀಯಾ? ನನ್ನನ್ನು ಮದುವೆ ಆಗುವುದಿಲ್ಲವೇ? ಈಗ ನಿನ್ನನ್ನು ಬಿಡುವುದಿಲ್ಲ” ಎಂದು ಕೂಗುತ್ತಾ ಆಕೆಗೆ ಚಾಕುವಿನಿಂದ ಚುಚ್ಚಿ, ಚಾಕು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ ಎಂದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ವಿವರಿಸಿದ್ದಾರೆ.

ನೇಹಾ ಹಿರೇಮಠ  ಕೊಲೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕೊಲೆ ಹಿಂದೆ ಲವ್​ ಜಿಹಾದ್ ​ ಇದೆ ಅಂತ ನೇಹಾ ತಂದೆ ನಿರಂಜನ ಹಿರೇಮಠ, ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ರಾಜ್ಯವ್ಯಾಪಿ ಪ್ರತಿಭಟನೆ ಮಾಡಿದ್ದವು. ಪ್ರಕರಣದ ತನಿಖೆ ನಡೆಸಿದ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಲವ್​ ಜಿಹಾದ್​ ಉಲ್ಲೇಖವಿಲ್ಲ. ಮದುವೆಗೆ ನಿರಾಕರಿಸಿದಕ್ಕೆ ನೇಹಾಳನ್ನು ಫಯಾಜ್​ ಕೊಲೆ ಮಾಡಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.​ ಹಾಗಾಗಿ ಬಿಜೆಪಿ ಸಾವನ್ನು ತನ್ನ ರಾಜಕೀಯ ಲಾಭಕ್ಕಾಗಿ ಮನಸೋ ಇಚ್ಚೆ ತಿರುಚುತ್ತದೆ ಎಂಬ ಅಂಶ ಮತ್ತೊಮ್ಮೆ ಬಯಲಾಗಿದೆ.

ಇದನ್ನೂ ನೋಡಿ: ಮಳೆ ಹೆಚ್ಚಳ ಸಾಧ್ಯತೆ – ಸರ್ಕಾರ ಕಣ್ಮುಚ್ಚಿ ಕುಳಿತರೆ ಅಪಾಯ ಕಟ್ಟಿಟ್ಟ ಬುತ್ತಿJanashakthi Media

Donate Janashakthi Media

Leave a Reply

Your email address will not be published. Required fields are marked *