ಬೆಂಗಳೂರು: ರಾಜಕೀಯದಲ್ಲಿ ಭಾರಿ ಚರ್ಚೆಗೊಳಗಾಗಿದ್ದ ಮುಡಾ ಹಗರಣ ಪ್ರಕರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ವರದಿಯೂ ಸಿದ್ಧವಾಗಿದೆ. ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಗೆ ಕ್ಲೀನ್‌ಚಿಟ್ ನೀಡಿರುವುದು ತಿಳಿದುಬಂದಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿ ನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಡಾ ಆಯುಕ್ತರು, ರವಿನ್ಯೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಅಧಿಕಾರಿಗಳು ಅಪರಾಧ ಎಸಗಿರುವ ಬಗ್ಗೆ ಮುಂದೇನು ಮಾಡಬೇಕೆಂಬುದರ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎನ್ನಲಾಹಗಿದೆ.
ಇದನ್ನೂ ಓದಿ: ಕೊಪ್ಪಳ: ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಧರಣಿ; ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬಂಧನ
ಮುಡಾ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಕೋರ್ಟ್ಗೆ ಸಲ್ಲಿಕೆ ಮಾಡಲಿದ್ದಾರೆ. ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ನೇತೃತ್ವದಲ್ಲಿ ತನಿಖೆ ನಡೆದು ವರದಿ ಸಿದ್ಧಪಡಿಸಲಾಗಿದೆ.
ಸಿಎಂ ಪ್ರಭಾವ ಇಲ್ಲದೆ ಸಾಧ್ಯವೇ ಇಲ್ಲ: ಸ್ನೇಹಮಯಿ ಕೃಷ್ಣ
ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ, ಸಿಎಂ ಪ್ರಭಾವ ಇಲ್ಲದೆ ಅಧಿಕಾರಿಗಳು ಅಕ್ರಮ ಎಸಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ‘ಟಿವಿ9’ ಜತೆ ಮಾತನಾಡಿದ ಅವರು, ಲೋಕಾಯುಕ್ತ ವರದಿಯಲ್ಲಿ ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್‌ಚಿಟ್ ನೀಡಿರುವ ಬಗ್ಗೆ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ. ಆದಾಗ್ಯೂ ಅದು ನಿರೀಕ್ಷಿತ. ಇದರಿಂದ ನನ್ನ ಹೋರಾಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಸಿಎಂ ಪ್ರಭಾವ ಇಲ್ಲದೆ ಅಧಿಕಾರಿಗಳು ಅಪರಾಧವೆಸಗಲು ಸಾಧ್ಯವೇ ಇಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಡಾ ಹಗರಣ ಸಂಬಂಧ ಮತ್ತೊಂದೆಡೆ, ಜಾರಿ ನಿರ್ದೇಶನಾಲಯ ತನಿಖೆಯೂ ಪ್ರಗತಿಯಲ್ಲಿದೆ. ಏತನ್ಮಧ್ಯೆ, ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯೂ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಜನವರಿ 27ರಂದು ಸಿಬಿಐ ತನಿಖೆ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಲೋಕಾಯುಕ್ತ ಅಧಿಕಾರಿಗಳು ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಕೆ ಮಾಡಲಿದ್ದಾರೆ. ಹೀಗಾಗಿ ಪ್ರಕರಣದ ಕುರಿತ ಕುತೂಹಲ ಇದೀಗ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ನೋಡಿ: ತೊಗರಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿ “ಕಲಬುರಗಿ ಬಂದ್