ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿನ ಬಗ್ಗೆ ಆತಂಕಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಲಾಕ್‌ಡೌನ್ ಜಾರಿಯ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪಗಳಿಲ್ಲವೆಂದು ಆರೋಗ್ಯ ಸಚಿವ ಡಾ ಕೆ. ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಧಾರವಾಡ, ಹಾಸನ, ಆನೇಕಲ್ ಸೇರಿದಂತೆ ಕೆಲ ನಿರ್ದಿಷ್ಠ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಅಲ್ಲದೆ, ಇದರ ನಡುವೆ ಕೋವಿಡ್ ರೂಪಾಂತರಿ ತಳಿ ‘ಒಮಿಕ್ರಾನ್’ ವೈರಸ್ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಲಾಕ್‌ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ. ಸುಧಾಕರ್ ಕೆ ಅವರು ʻʻಈಗಾಗಲೇ ಜನ ಬಹಳ ನಷ್ಟ ಅನುಭವಿಸುದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ ಮತ್ತೆ ಆತಂಕ ಸೃಷ್ಟಿ ಮಾಡೋದು ಬೇಡ. ಸಾಮಾಜಿಕ ಜಾಲತಾಣಗಳು ಈ ಬಗ್ಗೆ ಎಚ್ಚರವಹಿಸಬೇಕು. ಸುಳ್ಳು ಸುದ್ದಿ ಮರುಳಾಗದಂತೆ ಎಚ್ಚರವಹಿಸಬೇಕು. ಮಾಧ್ಯಮಗಳು ಸಹ ಎಚ್ಚರಿಕೆ, ಜಾಗೃತಿ ಕೊಡುವ ಕೆಲಸ ಮಾಡುತ್ತಿವೆ. ಅದನ್ನು ಮುಂದುವರೆಸಲಿ ಎಂದರು.
ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಂಗಳವಾರ ತಜ್ಞರ ಜೊತೆ ಸಭೆ ನಡೆಸಲಾಗುವುದು. ಕಳೆದ 12 ದಿನಗಳಲ್ಲಿ ವಿದೇಶದಿಂದ ಬಂದವರ ಮೇಲೆ ನಿಗಾ ಇಡಲಾಗಿದೆ. ಅದರಲ್ಲೂ ಆಫ್ರಿಕಾದಿಂದ ಬಂದವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.
ದಕ್ಷಿಣ ಆಫ್ರಿಕಾದಿಂದ ಬಂದಿದ್ದ 63 ವರ್ಷದ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿಯ ಲ್ಯಾಬ್ ವರದಿ ಇಂದು ಬರಲಿದೆ. ವರದಿಯನ್ನು ಪರಿಶೀಲಿಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಐಸಿಎಂಆರ್ ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಸಚಿವರು ಹೇಳಿದರು.
ನನಗೆ ತಿಳಿದಿರುವಂತೆ ಓಮಿಕ್ರಾನ್ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಆದರೆ ಈ ಸೋಂಕು ಗಂಭೀರ ಪ್ರಮಾಣದ್ದು ಅಲ್ಲ ಎಂದು ತಜ್ಞರ ಹೇಳಿಕೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ದಕ್ಷಿಣ ಆಫ್ರಿಕಾ, ಯು.ಕೆ, ಬೆಲ್ಜಿಯಂ, ನೆದರ್ಲೇಂಡ್ ಸೇರಿದಂತೆ ಹಲವು ದೇಶಗಳಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಸದ್ಯಕ್ಕೆ ಲಾಕ್‌ಡೌನ್ ಬಗ್ಗೆ ಸರ್ಕಾರ ನಿರ್ಧಾರವನ್ನು ಕೈಗೊಳ್ಳದಿದ್ದರೂ ಸಹ ಕೆಲವು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.