ಕೇರಳದಲ್ಲಿ ಮೇ 23ರ ವರೆಗೆ ಲಾಕ್‌ಡೌನ್‌ ವಿಸ್ತರಣೆ-ಆರ್ಥಿಕ ನೆರವು ಘೋಷಣೆ

ತಿರುವನಂತಪುರ: ಕೋವಿಡ್–19 ಸೋಂಕಿನ ಪ್ರಕರಣಗಳು ಅಧಿಕಗೊಳ್ಳದಂತೆ ಅದನ್ನು ತಡೆಯಲು ಈಗಾಗಲೇ ವಿಧಿಸಲಾಗಿರುವ ಕೇರಳ ರಾಜ್ಯದಲ್ಲಿನ ಲಾಕ್‌ಡೌನ್ ಅನ್ನು ಮೇ 23ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಸುದ್ಧಿಗೋಷ್ಠಿಯ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾತನಾಡಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ ಅನಿವಾರ್ಯವಾಗಿದೆ. ನೂತನ ಲಾಕ್‌ಡೌನ್‌ನಲ್ಲಿ ಸದ್ಯ ಚಾಲ್ತಿಯಲ್ಲಿರುವ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಎಡರಂಗ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ʻʻಪರಿಹಾರವಾಗಿ ರಾಜ್ಯದ ಜನತೆಗೆ ಜೂನ್‌ನಲ್ಲಿಯೂ ಉಚಿತ ಆಹಾರ ಕಿಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಅಲ್ಲದೆ 823.23 ಕೋಟಿ ರೂ.ಗಳ ಹಣವನ್ನು ವಿವಿಧ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಿಂಚಣಿಗೆ ಹಣ ಬಿಡುಗಡೆಗೊಳಿಸಲಾಗಿದೆ. ಅದೇ ರೀತಿಯಲ್ಲಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಎಲ್ಲರಿಗೂ ರೂ.1,000 ಗಳ ಆರ್ಥಿಕ ನೆರವನ್ನು ಘೋಷಿಸಲಾಗಿದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಈಗಾಗಲೇ ಘೋಷಿತ ಪ್ರಕಾರ ಮೇ 8 ರಿಂದ 16ರ ವರೆಗೆ ಕೇರಳದಲ್ಲಿ ಲಾಕ್‌ಡೌನ್ ಜಾರಿಯಲ್ಲಿತ್ತು.  ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಕೋವಿಡ್‌ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕೋವಿಡ್‌–19 ಬಿಕ್ಕಟ್ಟು ಉಲ್ಬಣಿಸಿದ್ದು, ರಾಜ್ಯದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕದ ಕೊರತೆ ಎದುರಾಗಿರುವುದಾಗಿ ಈಚೆಗೆ ವರದಿಯಾಗಿತ್ತು.

ಅದರಲ್ಲೂ ಪ್ರಕರಣಗಳ ಸಂಖ್ಯೆ ಅತ್ಯಂಥ ಅಧಿಕವಾಗಿರುವ ನಾಲ್ಕು ಜಿಲ್ಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ತಿರುವನಂತಪುರಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ ಜಿಲ್ಲೆಗಳಲ್ಲಿ ಮತ್ತಷ್ಟು ಕಠಿಣವಾದ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಇನ್ನೆರಡು ದಿನಗಳಲ್ಲಿ ಅಂತ್ಯವಾಗಬೇಕಿದ್ದ ಲಾಕ್‌ಡೌನ್ ಇದೀಗ ಮತ್ತೆ ವಿಸ್ತರಣೆಗೊಂಡಿದೆ.

ಇಂದಿನ ವರದಿಯಂತೆ ಕೇರಳದಲ್ಲಿ 34,694 ಕೊರೊನಾ ಪ್ರಕರಣಗಳು ದಾಖಲಾಗಿದೆ. ಇನ್ನು 93 ಮಂದಿ ನಿಧನ ಹೊಂದಿದ್ದಾರೆ. ಅಲ್ಲದೆ, ಗುಣಮುಖರಾಗುವವರ ಸಂಖ್ಯೆ ಏರಿಕೆಯಾಗಿದ್ದು, ಇಂದು ಒಂದೇ ದಿನದಲ್ಲಿ 31,319 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *