ಛಬ್ಬಿ, (ಹುಬ್ಬಳ್ಳಿ): ರಾಜ್ಯದಲ್ಲಿ ನಾವು ಕೋವಿಡ್ ನಡುವೆಯೂ ಬದುಕಬೇಕಿದೆ. ಹೀಗಾಗಿ ಸುರಕ್ಷತಾ ಅಂತರ ಕಾಪಾಡಿಕೊಂಡು ಹೋಗಬೇಕಿದೆ. ಲಾಕ್ ಡೌನ್ ಹಾಗೂ ಸೆಮಿ ಲಾಕ್ ಡೌನ್‌ನ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಶನಿವಾರ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ಬೆಳಿಗ್ಗೆ ಹಿರೇಕೆರೆಯಲ್ಲಿ ವಾಯುವಿಹಾರ ಮಾಡುತ್ತಾ, ಕೆರೆಯ ಸುತ್ತ ಫೋಟೋಗ್ರಫಿಯಲ್ಲಿ ನಿರತರಾಗಿದ್ದರು. ಉತ್ತರ ಕರ್ನಾಟಕದ ಜನರ ಸಂಭ್ರಮವೇ ನನ್ನ ಉತ್ಸಾಹ ಹೆಚ್ಚಿಸಿದೆ ಎಂದರು.
ಗ್ರಾಮದಲ್ಲಿ ಮೋಡಕವಿದ ವಾತಾವರಣವಿದ್ದು, ಮಲೆನಾಡಿದಂತೆ ಭಾಸವಾಗುತ್ತಿದೆ. ಇಲ್ಲಿನ ವಾತಾವರಣ ನೋಡಿದರೆ ಹುಬ್ಬಳ್ಳಿಯಲ್ಲಿ ಇದ್ದೇನೆ ಅನಿಸುವುದೇ ಇಲ್ಲ. ಅಧಿಕಾರಿಗಳು-ಜನರ ನಡುವಿನ ಕಂದಕ ಕಡಿಮೆ ಮಾಡುವುದು ಗ್ರಾಮ ವಾಸ್ತವ್ಯದ ಮೂಲ ಉದ್ದೇಶ ಎಂದು ಸಚಿವರು ತಿಳಿಸಿದರು.
ಅನೇಕರು ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ, ಅದರಲ್ಲೂ ದೃಶ್ಯಮಾಧ್ಯಗಳು ಲಾಕ್ಡೌನ್, ಸೆಮಿ ಲಾಕ್ಡೌನ್ ಎಂದೆಲ್ಲ ಹೇಳುತ್ತಿದ್ದಾರೆ. ಸರಕಾರದ ಮುಂದೆ ಅಂತಹ ಪ್ರಸ್ತಾಪಗಳು ಇಲ್ಲ ಎಂದು ತಿಳಿಸಿದರು.