ಲಾಕ್ಡೌನ್ ಜಾರಿ ಮಾಡಿದ ರಾಜ್ಯ ಸರಕಾರ : ಜನತೆಗೆ ಆರೋಗ್ಯ ಹಾಗೂ ಅಹಾರ ಭದ್ರತೆ ಖಾತ್ರಿಪಡಿಸಲು ಡಿವೈಎಫ್ಐ ಒತ್ತಾಯ

ಬೆಂಗಳೂರು: ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಿಸಲು  ಆಸ್ಪತ್ರೆಯ ಸೌಲಭ್ಯಗಳನ್ನು ಹೆಚ್ಚಿಸಿ, ಬೆಡ್-ಆಕ್ಸಿಜನ್ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸದೇ ರಾಜ್ಯ ಸರಕಾರ ತನ್ನ ಹೊಣೆಗೇಡಿತನ ಮರೆಮಾಚಲು ಅರಾಜಕ ರೀತಿಯಲ್ಲಿ ಲಾಕ್ಡೌನ್ ಜಾರಿಗೆ ಮುಂದಾಗಿರುವುದು ಖಂಡನೀಯ. ಲಾಕ್ ಡೌನ್ ಬದಲಿಗೆ ಕಠಿಣ ಸುರಕ್ಷಾ ಕ್ರಮ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ಒತ್ತಾಯಿಸಿದೆ.

ಕಳೆದ ವರ್ಷದಲ್ಲಿ ಕೋವಿಡ್ ಸೋಂಕು ಪರಿಣಾಮದಿಂದ  ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು. ತಜ್ಞರು ನೀಡಿದ ಸಲಹೆಗಳನ್ನು ಕೂಡ ಗಂಭೀರವಾಗಿ ಪರಿಗಣಿಸುವ ಬದಲಿಗೆ ಸರಕಾರದ ಉದಾಸೀನವೇ ಕೋವಿಡ್ ಪ್ರಸರಣ ಹೆಚ್ಚಳಕ್ಕೆ ಕಾರಣ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಖ ಆರೋಪಿಸಿದ್ದಾರೆ.          .

ಆಕ್ಸಿಜೆನ್, ಹಾಸಿಗೆ ಕೊರತೆಯಿಂದ ಕಂಗೆಟ್ಟಿರುವ ಸೋಂಕು ಪೀಡಿತರನ್ನು ಸರಕಾರದ ಹೊಣೆಗೇಡಿತನದಿಂದ ಖಾಸಗಿ ಆಸ್ಪತ್ರೆ, ಔಷಧಿ ಮಾಫಿಯಾಗಲು ಸುಲಿದು ತಿನ್ನುತ್ತಿವೆ. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿಟ್ಟು, ರಾಜ್ಯದಲ್ಲಿ ಕೋರೋನಾ ಪೀಡಿತ ಜನತೆಗೆ ಉಚಿತವಾಗಿ ಚಿಕಿತ್ಸೆ ಸೌಲಭ್ಯವನ್ನು ಒದಗಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ಅಗತ್ಯವಿರುವ ಅಕ್ಸಿಜೆನ್ ಹಾಗೂ ಬೆಡ್ ಸೌಲಭ್ಯ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಲಾಕ್​ಡೌನ್ : ಹೊಸಮಾರ್ಗಸೂಚಿಯಲ್ಲಿ ಏನಿದೆ? ಯಾವುದಕ್ಕೆಲ್ಲಾ ಅನುಮತಿ??

ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಲಾಕ್ಡೌನ್ ಜಾರಿ ಮಾಡಿರುವುದರಿಂದಾಗಿ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಳ್ಳಲಿದೆಯಲ್ಲದೆ, ನಿರುದ್ಯೋಗ ಹಾಗೂ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಹೆಚ್ಚಲಿದೆ. ಸಣ್ಣ ವ್ಯಾಪಾರಿಗಳು,  ಅಸಂಘಟಿತ ಕಾರ್ಮಿಕರು ಹಸಿವಿನ‌ ದವಡೆಗೆ ಜಾರಲಿದ್ದಾರೆ. ಸರಕಾರ ಅಗತ್ಯ ತಯಾರಿ ಮಾಡಿಕೊಂಡಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈಗಲಾದರೂ ಎಚ್ಚೆತ್ತು ಅರಾಜಕ ಲಾಕ್ ಡೌನ್ ಬದಲಿಗೆ ಪರ್ಯಾಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು, ಅಗತ್ಯ ವೈಧ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಹಾಗೂ ಜನತೆಗೆ ಅಗತ್ಯವಿರುವ ಪಡಿತರವನ್ನು ಉಚಿತವಾಗಿ ನೀಡಲು ರಾಜ್ಯ ಸರಕಾರ ಕೂಡಲೇ ಕ್ರಮ ವಹಿಸಲು ಮುಂದಾಗಬೇಕು ಎಂದು ಡಿವೈಎಫ್ಐ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *