ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಅಧಿಕಾರಿಗಳು ಮ್ಯಾನ್ ಹೋಲ್ನಲ್ಲಿ ಕಾರ್ಮಿಕನನ್ನ ಇಳಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮ್ಯಾನ್ ಹೋಲ್ನಲ್ಲಿ ಕಾರ್ಮಿಕನನ್ನ ಇಳಿಸಿ ಕ್ಲೀನ್ ಮಾಡದಂತೆ ನಿಯಮವಿದ್ದರೂ ಅಧಿಕಾರಿಗಳು ಕಾರ್ಮಿಕನನ್ನ ಕೆಳಗೆ ಇಳಿಸಿದ್ದಾರೆ. ಕೆಟ್ಟ ವಾಸನೆಯಿಂದ ಕೂಡಿರುವ ಮ್ಯಾನ್ ಹೋಲ್ನಲ್ಲಿ ಕಾರ್ಮಿಕನನ್ನು ಕೆಳಗಿಳಿಸಿ ಸ್ವಚ್ಛತೆಗೆ ಮುಂದಾಗಿದ್ದ ಅಧಿಕಾರಿಯನ್ನು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ.
ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕೆಯುಐಡಿಎಫ್ಸಿ ಸಹಾಯಕ ಇಂಜಿನಿಯರ್ ರವೀಂದ್ರ ಕಾರ್ಮಿಕನನ್ನ ಮ್ಯಾನ್ ಹೋಲ್ನಿಂದ ಮೇಲೆ ಹತ್ತಿಸಿದ್ದಾರೆ. ಕಾರ್ಮಿಕ ಚರಂಡಿ ನೀರಿನಲ್ಲಿ ಮಿಂದೆದ್ದು ಮೇಲೆ ಹತ್ತಿದ್ದಾರೆ. ಮಾನವೀಯತೆ ಮರೆತು ಕಾರ್ಮಿಕನನ್ನ ಮ್ಯಾನ್ ಹೋಲ್ನಲ್ಲಿ ಇಳಿಸಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ರಾಣೆಬೆನ್ನೂರು ನಗರದ ಮೆಡ್ಲೇರಿ ರಸ್ತೆಯಲ್ಲಿ ನಿನ್ನೆ (ಡಿ. 6) ಮಧ್ಯಾಹ್ನ ನಡೆದಿದೆ. ಕಳೆದ ಕೆಲವು ದಿನಗಳಿಂದ ಒಳಚರಂಡಿ ಬ್ಲಾಕ್ ಆಗಿ ಸ್ಥಗಿತಗೊಂಡಿದ್ದರಿಂದ ಮ್ಯಾನ್ ಹೋಲ್ನಲ್ಲಿ ಕಾರ್ಮಿಕನನ್ನ ಇಂಜಿನಿಯರ್ ಇಳಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.