ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಕುರಿತು ಪ್ರಶ್ನೆ ಪತ್ರಿಕೆಯಲ್ಲಿ ಸಿದ್ಧಪಡಿಸಲಾಗಿದ್ದ ಎರಡು ಪ್ರಶ್ನೆಗಳು ದೇಶ ವಿರೋಧಿಯಾಗಿದ್ದವು ಎಂದು ಆರೆಸ್ಸೆಸ್ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಕ್ಷೇಪಿಸಿದ ಬೆನ್ನಿಗೇ, ಮೀರತ್ ನ ಮಾನ್ಯತೆ ಪಡೆದ ಕಾಲೇಜೊಂದರ ಪ್ರಾಧ್ಯಾಪಕಿಯಾದ ಸೀಮಾ ಪನ್ವರ್ ರನ್ನು ಉತ್ತರ ಪ್ರದೇಶದ ಸರಕಾರಿ ವಿಶ್ವವಿದ್ಯಾಲಯವೊಂದು ಎಲ್ಲ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಗಳಿಂದ ನಿಷೇಧಿಸಿದೆ. ಆರ್‌ಎಸ್‌ಎಸ್
ಆರೆಸ್ಸೆಸ್ ನ ವಿದ್ಯಾರ್ಥಿ ಘಟಕವೂ ಆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಪ್ರಾಧ್ಯಾಪಕಿ ಸೀಮಾ ಪನ್ವರ್ ದೇಶ ವಿರೋಧಿ ಸಿದ್ಧಾಂತದಿಂದ ಪ್ರೇರಿತರಾಗಿದ್ದಾರೆ ಎಂದು ಆರೋಪಿಸಿದೆ.
ಈ ಸಂಬಂಧ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪಶ್ಚಿಮ ಉತ್ತರ ಪ್ರದೇಶದ ಪ್ರಮುಖ ವಿವಿಯಾದ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿತ್ತು. ಈ ಮನವಿ ಪತ್ರವನ್ನು ಆಧರಿಸಿ, ಸೀಮಾ ಪನ್ವರ್ ಅವರನ್ನು ಎಲ್ಲ ಪರೀಕ್ಷಾ ಕಾರ್ಯಗಳಿಂದ ಜೀವನಪರ್ಯಂತ ನಿಷೇಧಿಸಲು ವಿಶ್ವವಿದ್ಯಾಲಯ ತೀರ್ಮಾನಿಸಿದೆ.
ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಧೀರೇಂದ್ರ ಕುಮಾರ್ ವರ್ಮ, “ಪರೀಕ್ಷಾ ಪತ್ರಿಕೆಗಳನ್ನು ಸಿದ್ಧಪಡಿಸುವುದರಿಂದ ಆಕೆಯನ್ನು ಜೀವನ ಪರ್ಯಂತ ನಿಷೇಧಿಸಲಾಗಿದೆ” ಎಂದು ತಿಳಿಸಿದ್ದಾರೆ ಎಂದು thewire.in ವರದಿ ಮಾಡಿದೆ. ಆರ್‌ಎಸ್‌ಎಸ್
ಇದನ್ನೂ ಓದಿ: ಚಿಕ್ಕೋಡಿ ಅಭಿವೃದ್ಧಿಗೆ 8.30 ಕೋಟಿ ರೂ. ಅನುದಾನ : ಪ್ರಕಾಶ ಹುಕ್ಕೇರಿ ಆರ್‌ಎಸ್‌ಎಸ್
ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಟ್ಟಿದ್ದ ಕಾಲೇಜುಗಳಲ್ಲಿ ಎಪ್ರಿಲ್ 2ರಂದು ಖಾಸಗಿ ರಾಜಕೀಯ ವಿಜ್ಞಾನ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆಗೆಂದು ಸಿದ್ಧಪಡಿಸಲಾಗಿದ್ದ ‘ಭಾರತದಲ್ಲಿ ರಾಜ್ಯ ರಾಜಕಾರಣ’ ವಿಷಯದ ಕುರಿತ ಪ್ರಶ್ನೆ ಪತ್ರಿಕೆಯ ಸುತ್ತ ವಿವಾದ ಭುಗಿಲೆದ್ದಿತ್ತು. ತನ್ನ ಮಾತೃ ಸಂಸ್ಥೆಯಾದ ಆರೆಸ್ಸೆಸ್ ಕುರಿತು ಕೇಳಲಾಗಿದ್ದ ಎರಡು ಪ್ರಶ್ನೆಗಳ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಕ್ಷೇಪ ವ್ಯಕ್ತಪಡಿಸಿತ್ತು.
ಪ್ರಶ್ನೆ ಪತ್ರಿಕೆಯ ಪ್ರಶ್ನೆ ಸಂಖ್ಯೆ 87ರಲ್ಲಿ ಈ ಪೈಕಿ ಯಾವ ಅನಾಮಿಕ ಸಂಘಟನೆಗಳು ಸಮಾಜದಿಂದ ಪ್ರತ್ಯೇಕಗೊಂಡಿವೆ ಎಂದು ಕೇಳಲಾಗಿತ್ತು. ಈ ಪ್ರಶ್ನೆಗಾಗಿ ನೀಡಲಾಗಿದ್ದ ಆಯ್ಕೆಯಲ್ಲಿ ದಾಲ್ ಖಾಲ್ಸಾ, ನಕ್ಸಲೀಯರ ಗುಂಪುಗಳು, ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಹೆಸರುಗಳನ್ನು ನೀಡಲಾಗಿತ್ತು.
ಪ್ರಶ್ನೆ ಸಂಖ್ಯೆ 93ಯು ಹೊಂದಿಸಿ ಬರೆಯಿರಿ ಪರೀಕ್ಷೆಯಾಗಿತ್ತು. ಈ ಪ್ರಶ್ನೆಯು ಆರೆಸ್ಸೆಸ್ ಅನ್ನು ಧಾರ್ಮಿಕ ಹಾಗೂ ಜಾತಿ ಗುರುತಿನ ರಾಜಕಾರಣದೊಂದಿಗೆ ಸಂಪರ್ಕ ಕಲ್ಪಿಸುವಂತಿತ್ತು. ಮತ್ತೊಂದು ಆಯ್ಕೆಯು ಬಿಎಸ್ಪಿಯನ್ನು ದಲಿತ ರಾಜಕಾರಣಕ್ಕೆ ಸಂಪರ್ಕ ಕಲ್ಪಿಸಿತ್ತು. ಇದರೊಂದಿಗೆ ಮಂಡಲ್ ಆಯೋಗವನ್ನು ಇತರೆ ಹಿಂದುಳಿದ ವರ್ಗಗಳ ರಾಜಕಾರಣದೊಂದಿಗೆ ಹಾಗೂ ಶಿವಸೇನೆಯನ್ನು ಪ್ರಾದೇಶಿಕ ಗುರುತಿನೊಂದಿಗೆ ಸಂಪರ್ಕ ಕಲ್ಪಿಸಲಾಗಿತ್ತು.
ಪ್ರಶ್ನೆಗೆ ಲಭ್ಯವಿದ್ದ ಆಯ್ಕೆಗಳು ಧಾರ್ಮಿಕ ಮತ್ತು ಜಾರಿ ರಾಜಕಾರಣದ ಉತ್ಕರ್ಷಕ್ಕೆ ಆರೆಸ್ಸೆಸ್ ಕಾರಣ ಎಂಬ ವ್ಯಾಖ್ಯಾನವನ್ನು ಒಳಗೊಂಡಿದ್ದವು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.
“ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವು ಕಳೆದ 100 ವರ್ಷಗಳಿಂದ ಸಮಾನತೆ ಹಾಗೂ ರಾಷ್ಟ್ರೀಯ ಏಕತೆ ಆಧಾರದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಸಮರ್ಪಿಸಿಕೊಂಡಿರುವ ರಾಜಕೀಯೇತರ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿದೆ” ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಪಾದಿಸಿದೆ.
ಪ್ರಾಧ್ಯಾಪಕಿಯ ಕೃತ್ಯವು ದೇಶ ವಿರೋಧಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದ ಪರೀಕ್ಷಕಿಯನ್ನು ಅಮಾನತುಗೊಳಿಸುವ ಮೂಲಕ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಸಂಘಟನೆಯ ಮನವಿ ಪತ್ರದ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮೀರತ್ ಘಟಕವು, “ಮೇಲಿನ ಪ್ರಶ್ನೆಗಳಲ್ಲಿ ರಾಷ್ಟ್ರೀಯ ಸ್ವಯಂ ಸಂಘವನ್ನು ಸೇರ್ಪಡೆ ಮಾಡಿರುವ ರೀತಿ ನೋಡಿದರೆ, ಈ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿರುವ ಪರೀಕ್ಷಕಿಯು ದೇಶ ವಿರೋಧಿ ಸಿದ್ಧಾಂತದಿಂದ ಪ್ರೇರಿತವಾಗಿರುವಂತೆ ಕಂಡು ಬರುತ್ತಿದೆ. ಅವರು ವಿದ್ಯಾರ್ಥಿಗಳು ಹಾಗೂ ಸಮಾಜದ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದು, ತಪ್ಪು ನಿರೂಪಣೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ, ತಾವು ಈ ಕೃತ್ಯವನ್ನು ದೇಶದ ಹಿತಾಸಕ್ತಿಯಿಂದ ಮಾಡಿಲ್ಲ ಎಂಬುದನ್ನು ನಿರೂಪಿಸಿದ್ದಾರೆ” ಎಂದು ಹೇಳಿದೆ.
ಒಂದು ವೇಳೆ ಪರೀಕ್ಷಕಿಯ ವಿರುದ್ಧ ವಿಶ್ವವಿದ್ಯಾಲಯವೇನಾದರೂ ಕ್ರಮ ಕೈಗೊಳ್ಳದಿದ್ದರೆ, ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆದರಿಕೆ ಒಡ್ಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ವರ್ಮ, ವಿದ್ಯಾರ್ಥಿಗಳು ಪತ್ತೆ ಹಚ್ಚಿರುವ ಆಕ್ಷೇಪಾರ್ಹ ಪ್ರಶ್ನೆಗಳು ವಿವಾದಾತ್ಮಕವಾಗಿವೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳ ನೇತೃತ್ವದ ತಂಡವು ಅಭಿಪ್ರಾಯಪಟ್ಟಿದೆ. ಈ ಕುರಿತು ಮೀರತ್ ಕಾಲೇಜಿನಲ್ಲಿ ಬೋಧಿಸುವ ಪ್ರಾಧ್ಯಾಪಕಿ ಸೀನಾ ಪನ್ವರ್ ರಿಂದ ಕೋರಿದ್ದ ಸ್ಪಷ್ಟೀಕರಣಕ್ಕೆ, ಅವರು ಕ್ಷಮಾಪಣಾ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
“ತಮ್ಮ ತಪ್ಪಿಗಾಗಿ ವಿಷಾದ ವ್ಯಕ್ತಪಡಿಸಿರುವ ಪ್ರಾಧ್ಯಾಪಕಿಯು, ಅದು ನನ್ನ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ಅಧ್ಯಾಯವೊಂದು ಇದ್ದುದರಿಂದ, ನಾನು ಆ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದೆ ಎಂದು ಅವರು ಹೇಳಿದ್ದಾರೆ” ಎಂದು ತಿಳಿಸಿರುವ ವರ್ಮ, “ಆಕೆಯ ವಿರುದ್ಧ ಮತ್ಯಾವುದೇ ಕ್ರಮ ಕೈಗೊಂಡಿಲ್ಲ” ಎಂದೂ ಸ್ಪಷ್ಟಪಡಿಸಿದ್ದಾರೆ. “ತನ್ನ ತಪ್ಪಿಗೆ ಆಕೆ ವಿಷಾದ ವ್ಯಕ್ತಪಡಿಸಿದ್ದು, ಆಕೆ ಅದಕ್ಕಿಂತ ಹೆಚ್ಚೇನು ಮಾಡಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್
ಇದನ್ನೂ ನೋಡಿ: ಯುಗಾದಿ – ರಂಜಾನ್ ಸಾಮರಸ್ಯ ಕವಿ ಸಮ್ಮಿಲನ Janashakthi Media ಆರ್‌ಎಸ್‌ಎಸ್