ಬೆಂಗಳೂರು: ಸದನದ ಮೇಲೆ ಬುಧವಾರ ನಡೆದ ದಾಳಿಯ ಆರೋಪಿ ಮನೋರಂಜನ್ ಡಿ. ಎಂಬಾತ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐ ನಾಯಕ ಎಂದು ಬಿಜೆಪಿ ಐಟಿ ಸೆಲ್‌ಗಳು ಹರಡಿರುವ ಸುಳ್ಳಿನ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಿಕರಣ, ಫ್ಯಾಕ್ಟ್‌ಚೆಕ್ ಮತ್ತು ಪೊಲೀಸ್ ದೂರಿನ ನಡುವೆಯು ಸಂಘಪರಿವಾರದ ಪರವಾಗಿರುವ ದಿನಪತ್ರಿಕೆ ಹೊಸದಿಗಂತ ಶುಕ್ರವಾರದಂದು ಅದೇ ಸುಳ್ಳನ್ನು ಪ್ರಕಟ ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಎಫ್‌ಐ ಈ ಬಗ್ಗೆ ಪ್ರಕರಣ ದಾಖಲಿಸುವುದಾಗಿ ಮತ್ತು ಹೊಸದಿಗಂತ ಪತ್ರಿಕೆಯ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಜನಶಕ್ತಿ ಮೀಡಿಯಾಗೆ ಹೇಳಿದೆ.
ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಮೂಲಕ ಪ್ರವೇಶ ಪಡೆದು ಡಿಸೆಂಬರ್ 13ರ ಬುಧವಾರದಂದು ಲೋಕಸಭೆಗೆ ದಾಳಿ ಮಾಡಿದ ಮನೋರಂಜನ್ ಡಿ. ಎಂಬ ಆರೋಪಿ ಎಸ್‌ಎಫ್‌ಐ ಕಾರ್ಯಕರ್ತ ಎಂದು ಪ್ರತಿಪಾದಿಸಿ ಬಿಜೆಪಿ ಪೇಜ್‌ಗಳು, ಬೆಂಬಲಿಗರು ಸೇರಿದಂತೆ ಹಲವಾರು ಬಲಪಂಥೀಯರು, ಯುವಕನೊಬ್ಬ ಸಭೆಯೊಂದರಲ್ಲಿ ಮಾತನಾಡುತ್ತಿರುವ ಚಿತ್ರವನ್ನು ವ್ಯಾಪಕವಾಗಿ ಹರಡಿದ್ದರು.
ಇದನ್ನೂ ಓದಿ: ಭದ್ರತಾ ಲೋಪ ಸಂಬಂಧಿಸಿ ಚರ್ಚೆ ನಡೆಸುವಂತೆ ಪ್ರತಿಭಟನೆ | 15 ಸಂಸದರು ಅಮಾನತು!
ಈ ಬಗ್ಗೆ ಹಲವಾರು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಫ್ಯಾಕ್ಟ್‌ಚೆಕ್ ನಡೆಸಿ ಸತ್ಯವನ್ನು ಮುಂದಿಟ್ಟಿದ್ದವು. ಅಲ್ಲದೆ ಸ್ವತಃ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಜಂಟಿ ಹೇಳಿಕೆ ನೀಡಿ ಈ ಬಗ್ಗೆ ಸ್ಪಷ್ಟನೆ ನೀಡಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದವು. ಅದಾಗ್ಯೂ ಹೊಸದಿಗಂತ ದುರುದ್ದೇಶಪೂರ್ವಕವಾಗಿ ಬಿಜೆಪಿ ಐಟಿ ಸೆಲ್ ಹರಡಿದ ಅದೇ ಚಿತ್ರವನ್ನು ತನ್ನ ಮುಖಪುಟದಲ್ಲಿ ಮುದ್ರಿಸಿ ಸುಳ್ಳನ್ನೆ ವರದಿ ಮಾಡಿದೆ.
ಡಿಸೆಂಬರ್ 15ರ ಶುಕ್ರವಾರ ಪ್ರಕಟವಾದ ಪತ್ರಿಕೆಯ ಮುಖಪುಟದಲ್ಲೆ ಬಿಜೆಪಿ ಹರಡಿದ ಸುಳ್ಳಿನ ಚಿತ್ರವನ್ನು ಪ್ರಕಟಿಸಿರುವ ಹೊಸದಿಗಂತ, “ಅರೋಪಿಗಳು ಎಸ್‌ಎಫ್‌ಐ ಮತ್ತು ಇಂಡಿಯಾ ಮೈತ್ರಿಕೂಟದ ಸಕ್ರಿಯ ಕಾರ್ಯಕರ್ತರು” ಮತ್ತು
“ಮೈಸೂರಿನ ಮನೋರಂಜನ್‌ಗೆ ಎಸ್‌ಎಫ್‌ಐ ನಂಟು” ಎಂಬ ತಲೆಬರಹದೊಂದಿಗೆ ವರದಿ ಪ್ರಕಟಿಸಿದೆ. ಆರ್ಕೈವ್ ಇಲ್ಲಿ ನೋಡಿ. ಅಲ್ಲದೆ, ಪ್ರಕರಣ ಪ್ರಮುಖ ರುವಾರಿ ಲಿಲಿತ್ ಜಾ ಅವರು ಎಡಪಂಥೀಯ ಯುವಜನ ಸಂಘಟನೆಯಾದ ಡಿವೈಎಫ್‌ಐನ ‘ಸಕ್ರಿಯ’ ಕಾರ್ಯಕರ್ತ ಎಂದು ಕೂಡಾ ಯಾವುದೆ ಆಧಾರ ಇಲ್ಲದೆ ಪ್ರಕಟಿಸಿದೆ.
ಇದನ್ನೂ ಓದಿ: ಬೆಂಗಳೂರು | ಪ್ರತಿದಿನ 500 ನಾಲ್ಕು ಚಕ್ರದ ವಾಹನಗಳು & 1,300 ದ್ವಿಚಕ್ರ ವಾಹನಗಳು ನೋಂದಣಿ!
ಅಷ್ಟೆ ಅಲ್ಲದೆ, ಐದನೇ ಪೇಜ್‌ನಲ್ಲಿ ಕೂಡಾ ಅದೇ ಸುಳ್ಳನ್ನು ಪತ್ರಿಕೆ ಪುರನಾವರ್ತಿಸಿದೆ (ಆರ್ಕೈವ್). ಜೊತೆಗೆ 12ನೇ ಪೇಜ್‌ನಲ್ಲಿ ಕೂಡಾ “ಎಸ್‌ಎಫ್‌ಐನೊಂದಿಗೆ ಗುರುತಿಸಿಕೊಂಡಿದ್ದ ಆರೋಪಿ ಮನೋರಂಜನ್” ಎಂಬ ತಲೆಬರಹದೊಂದಿಗೆ ಐದು ಕಾಲಂನಲ್ಲಿ ಮತ್ತೆ ಅದೇ ಸುಳ್ಳನ್ನು ಪ್ರಟಕ ಮಾಡಿದೆ.(ಆರ್ಕೈವ್)
ಬಿಜೆಪಿ ಬೆಂಬಲಿಗರು ಮತ್ತು ಐಟಿ ಸೆಲ್‌ಗಳು ತಮ್ಮ ನಾಯಕನ ಚಿತ್ರ ಹರಡಿ ಸುಳ್ಳು ಸುದ್ದಿ ಹರಡುತ್ತಿರುವ ವಿರುದ್ಧ ಎಸ್‌ಎಫ್‌ಐ ಈಗಾಗಲೆ ಎಚ್ಚರಿಕೆ ನೀಡಿದ್ದು, ಪೊಲೀಸ್ ದೂರನ್ನು ಕೂಡಾ ದಾಖಲಿಸಿದೆ. ಅದಾಗ್ಯೂ ರಾಜ್ಯದ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಮುಂದಾಗುತ್ತಿಲ್ಲ ಎಂದು ಸಂಘಟನೆ ಆರೋಪಿಸಿದೆ.
ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಮತ್ತು ರಾಜ್ಯ ಕಾರ್ಯದರ್ಶಿ ಭೀಮನಗೌಡ ಜಂಟಿ ಹೇಳಿಕೆ ನೀಡಿದ್ದು, “ಬಿಜೆಪಿಯ ಕಾರ್ಯಕರ್ತರು ಸೈದ್ಧಾಂತಿಕವಾಗಿ ಎದುರಿಸಲಾಗದೆ, ಸೋಶಿಯಲ್ ಮೀಡಿಯಾದಲ್ಲಿ ಅಪ್ರಚಾರ ಮಾಡುತ್ತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಗಳ ಬಂಧನ ಆದರೂ ದುರುದ್ದೇಶದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರು: ಡಸ್ಟ್‌ಬಿನ್‌ನಲ್ಲಿ ಹೆಣ್ಣು ಭ್ರೂಣ ಪತ್ತೆ | ವ್ಯವಸ್ಥಿತ ದಂಧೆ!
“ಎಸ್‌ಎಫ್ಐ ಸಂಘಟನೆ ತ್ಯಾಗ ಬದ್ದತೆಯ ಮೂಲಕ ವಿದ್ಯಾರ್ಥಿಗಳ, ಶಿಕ್ಷಣದ ಮತ್ತು ಸಮಾಜದ ಪ್ರಗತಿಗಾಗಿ ಹಾಗೂ ಸೌಹಾರ್ದ, ಸಾಮರಸ್ಯದ ಘನತೆಯ ಬದುಕಿಗಾಗಿ ಐದು ದಶಕಗಳಿಂದ ವಿದ್ಯಾರ್ಥಿ ಸಮುದಾಯದ ಪರವಾಗಿ ದೇಶಾದ್ಯಂತ ಹೋರಾಟ ಮಾಡುತ್ತಾ ಬರುತ್ತಿದೆ. ಇದನ್ನು ಸಹಿಸದ ಈ ದೇಶದ ಕೋಮುವಾದಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸೈದ್ದಾಂತಿಕವಾಗಿ ಸಂಘಟನೆಯನ್ನು ಎದುರಿಸಲಾಗದೆ ಈ ಪ್ರಕರಣದಲ್ಲಿ ವಿನಾಕಾರಣ ಎಸ್ಎಫ್ಐ ಮೈಸೂರು ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಇವರ ಹೆಸರನ್ನು ಎಳೆದು ತಂದು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಸಂಸತ್ ದಾಳಿಯ ಪ್ರಮುಖ ರುವಾರಿ ಲಲಿತ್ ಝಾ ಡಿವೈಎಫ್ಐ ‘ಸಕ್ರಿಯ’ ಕಾರ್ಯಕರ್ತ ಎಂಬ ಪತ್ರಿಕೆಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಹೊಸದಿಗಂತ ಆರೆಸ್ಸೆಸ್‌ನ ಮುಖವಾಣಿ ಪತ್ರಿಯಾಗಿದ್ದು, ಅದರಿಂದ ಸುಳ್ಳನ್ನಲ್ಲದೆ ಹೆಚ್ಚಿನದ್ದನ್ನು ನಿರೀಕ್ಷಿಸಲಾಗದು. ಇಲ್ಲಿವರೆಗೆ ಸಂಘಪರಿವಾರದ ಅನಧೀಕೃತ ಐಟಿ ಸೆಲ್‌ನ ನಕಲಿ ಖಾತೆಗಳು ಇಂತವುಗಳನ್ನು ಹರಡುತ್ತಿತ್ತು. ಇದೀಗ ಎಲ್ಲರೂ ಅವರ ಸುಳ್ಳನ್ನು ಬಯಲಿಗೆಳೆದರೂ ಅವರ ಅಧೀಕೃತ ಮುಖವಾಣಿ ಕೂಡಾ ಸುಳ್ಳನ್ನೆ ನೆಚ್ಚಿಕೊಂಡಿದೆ” ಎಂದು ಹೇಳಿದ್ದಾರೆ.
“ಇವೆಲ್ಲವೂ 2024 ಚುನಾವಣೆಗೆ ಬಿಜೆಪಿ ಮತ್ತು ಸಂಘಪರಿವಾರ ನಡೆಸುತ್ತಿರುವ ತಯಾರಿಯಾಗಿದೆ. ಹೊಸದಿಗಂತ ಪತ್ರಿಕೆಗೆ ನೈತಿಕತೆ ಇದ್ದರೆ ತಾವು ಪ್ರಕಟಿಸಿದ ವರದಿಗೆ ಆಧಾರ ಸಮೇತ ಆರೋಪವನ್ನು ನಿರೂಪಿಸಬೇಕು. ಇಲ್ಲವೆಂದರೆ ತಪ್ಪಿಗಾಗಿ ಕ್ಷಮೆ ಕೇಳಬೇಕು. ಅದಾಗ್ಯೂ ಅವರ ಸುಳ್ಳಿನ ಅಪಪ್ರಚಾರದ ವಿರುದ್ಧ ನಾವು ಕಾನೂನು ಹೋರಾಟ ನಡೆಸಲಿದ್ದೇವೆ” ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ವಿಡಿಯೊ ನೋಡಿ: SFI ನಾಯಕನ ಫೋಟೋ ಹಾಕಿ ಈತನೇ ಮನೋರಂಜನ್ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿ Janashakthi Media