ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಭೀಮಾ-ಕೋರೆಗಾಂವ್ ಪ್ರಕರಣದ ಆರೋಪಿಯಾಗಿ ಆರು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ನಂತರ, ಪ್ರೊಫೆಸರ್ ಶೋಮಾ ಸೆನ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಏಪ್ರಿಲ್ 5ರಂದು ಜಾಮೀನು ನೀಡಿದೆ. ಅವರ ಜಾಮೀನು ಅರ್ಜಿಯ ವಿಚಾರಣೆಯ ಸಮಯದಲ್ಲಿ “ಜಾಮೀನು, ಆರೋಪಿಯ ಹಕ್ಕು ಅಲ್ಲ” ಎಂಬ ಪ್ರಸಕ್ತ ಸರಕಾರದ ವಿಕೃತ ನ್ಯಾಯಶಾಸ್ತ್ರವನ್ನು ಅದು ಭಾರತ ಸಂವಿಧಾನದ ಕಲಮು 21ರ ಉಲ್ಲಂಘನೆ ಎಂದು ತಿರಸ್ಕರಿಸಿತು. ಇದು ಒಳ್ಳೆಯ ಸುದ್ದಿಯೇ. ಆದರೂ ಇದು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ: ಅದರಲ್ಲಿ ಮೊದಲನೆಯದು, ನಿರಾಧಾರವಾಗಿ ಮತ್ತು ವಿಚಾರಣೆ ಇಲ್ಲದೆ ಅವರನ್ನು ದೀರ್ಘಾವಧಿಯ ಜೈಲು ವಾಸದ ಶಿಕ್ಷೆಗೆ ಒಳಪಡಿಸಿದ್ದಕ್ಕಾಗಿ ಸರ್ಕಾರವನ್ನು ಯಾವುದಾದರೂ ಒಂದು ರೀತಿಯ ಶಿಕ್ಷೆಗೆ ಒಳಪಡಿಸಬೇಕಲ್ಲವೇ? ನ್ಯಾಯಾಂಗ
ಹಿಟ್ಲರನ ಆಳ್ವಿಕೆಯ ಆರಂಭದ ದಿನಗಳಲ್ಲಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಜರ್ಮನಿಯ ನ್ಯಾಯಾಂಗವು ತೋರಿದ ಎದೆಗಾರಿಕೆಯನ್ನು ಭಾರತದ ನ್ಯಾಯಾಂಗವೂ ತೋರಬೇಕೆಂಬುದು ಜನತೆಯ ಬಯಕೆ.
ಜರ್ಮನಿಯನ್ನು ಒಂದು ಉದಾರವಾದಿ ಪ್ರಜಾಪ್ರಭುತ್ವದಿಂದ ಒಂದು ಫ್ಯಾಸಿಸ್ಟ್ ಸರ್ವಾಧಿಕಾರಿ ಪ್ರಭುತ್ವವಾಗಿ ಪರಿವರ್ತಿಸುವಲ್ಲಿ 1933ರಲ್ಲಿ ರೈಖ್ಸ್ಟಾಗ್(ಜರ್ಮನಿಯ ಸಂಸತ್ತಿ)ಗೆ ಬೆಂಕಿ ಹಚ್ಚಿದ ಘಟನೆಯು ನಿರ್ಣಾಯಕವಾಗಿತ್ತು. ಸ್ವತಃ ನಾಜಿಗಳೇ ಬೆಂಕಿ ಹಚ್ಚಿದ್ದರೆಂದು ಶಂಕಿಸಲಾದ ಈ ಘಟನೆಗೆ ಕಮ್ಯುನಿಸ್ಟರನ್ನು ತಪ್ಪಾಗಿ ದೂಷಿಸಲಾಯಿತು ಮತ್ತು ಈ ನೆಪದಲ್ಲಿ ಅವರ ಮೇಲೆ ಒಂದು ಭಯಂಕರ ಹಿಂಸಾತ್ಮಕ ದಾಳಿಯನ್ನು ಹರಿಯ ಬಿಡಲಾಯಿತು. ಜರ್ಮನ್ ಸಂಸತ್ತಿನ 81 ಕಮ್ಯುನಿಸ್ಟ್ ಸಂಸದರಲ್ಲಿ ಅನೇಕರನ್ನು ಬಂಧಿಸಲಾಯಿತು. ಅದುವರೆಗೆ ಸಂಸತ್ತಿನಲ್ಲಿ ಬಹುಮತ ಹೊಂದದ ನಾಜಿಗಳು ಕಮ್ಯುನಿಸ್ಟ್ ಸಂಸದರ ಅನುಪಸ್ಥಿತಿಯಲ್ಲಿ ಪಡೆದ ಬಹುಮತದ ಮೂಲಕ ಎಲ್ಲ ಅಧಿಕಾರವನ್ನೂ ದುರ್ಬಳಕೆ ಮಾಡಿಕೊಂಡು ಜರ್ಮನಿಯನ್ನು ಒಂದು ಫ್ಯಾಸಿಸ್ಟ್ ಪ್ರಭುತ್ವವಾಗಿ ಪರಿವರ್ತಿಸಿದರು. ಸಂಸತ್ತಿಗೆ ಬೆಂಕಿ ಹಚ್ಚಿದ ಆಪಾದನೆ ಮತ್ತು ವಿಚಾರಣೆಗೆ ಒಳಗಾದ ಕಮ್ಯುನಿಸ್ಟರಲ್ಲಿ ಆ ಸಮಯದಲ್ಲಿ ಅಕಸ್ಮಾತಾಗಿ ಜರ್ಮನಿಯಲ್ಲಿದ್ದ ಬಲ್ಗೇರಿಯನ್ ಕ್ರಾಂತಿಕಾರಿ ಜಾರ್ಜಿ ದಿಮಿತ್ರೋವ್ ಒಬ್ಬರು.
ವಿಚಾರಣೆಯ ಸಮಯದಲ್ಲಿ, ತಮ್ಮ ಪ್ರತಿವಾದವನ್ನು ಸ್ವತಃ ತಾವೇ ಮಂಡಿಸಿದ ದಿಮಿತ್ರೋವ್, ಪ್ರಾಸಿಕ್ಯೂಶನ್ ಪರವಾಗಿ ಸಾಕ್ಷಿ ಹೇಳಲು ಬಂದಿದ್ದ ವಿಮಾನ ಯಾನ ಮಂತ್ರಿ ಮತ್ತು ಹಿಟ್ಲರನ ಬಲಗೈ ಬಂಟನಾಗಿದ್ದ ಹರ್ಮನ್ ಗೋರಿಂಗ್ನನ್ನು ಪಾಟಿ ಸವಾಲು ಮಾಡುವ ತಮ್ಮ ಹಕ್ಕಿಗಾಗಿ ಪಟ್ಟುಹಿಡಿದರು. ಹಿಟ್ಲರ್ ಆಡಳಿತದಿಂದ ನೇಮಿಸಲ್ಪಟ್ಟಿದ್ದರೂ ಸಹ, ಆ ನ್ಯಾಯಾಧೀಶರು, ದಿಮಿತ್ರೋವ್ ಅವರ ಪಾಟಿ ಸವಾಲಿನ ಹಕ್ಕನ್ನು ಮಾನ್ಯ ಮಾಡಿದರು. ದಿಮಿತ್ರೋವ್ ಮತ್ತು ಗೋರಿಂಗ್ ನಡುವೆ ನ್ಯಾಯಾಲಯದಲ್ಲಿ ನಡೆದ ಮುಖಾಮುಖಿ, ವಿಶೇಷವಾಗಿ, ಗೋರಿಂಗ್ನ ಉಗ್ರ ಮತ್ತು ಬೆದರಿಕೆಯ ಹೇಳಿಕೆಗಳನ್ನು ಶಾಂತವಾಗಿ ದಿಮಿತ್ರೋವ್ ಎದುರಿಸಿದ ರೀತಿ ಮತ್ತು ಬೆಂಕಿ ಹಚ್ಚಿದ ಆರೋಪದಿಂದ ನಾಜಿ ನ್ಯಾಯಾಲಯದಿಂದ ದಿಮಿತ್ರೋವ್ ಅವರು ಹೊಂದಿದ ಖುಲಾಸೆಯು ಒಂದು ದಂತಕಥೆಯಾಗಿದೆ. ನಂತರದಲ್ಲಿ, ದಿಮಿತ್ರೋವ್ ಕಮ್ಯುನಿಸ್ಟ್ ಇಂಟರ್ನ್ಯಾಶನಲ್ನ ಅಧ್ಯಕ್ಷರಾದರು ಮತ್ತು 1935ರಲ್ಲಿ ಅದರ ಏಳನೇ ಮಹಾಧಿವೇಶನದಲ್ಲಿ, ಫ್ಯಾಸಿಸಂ ವಿರುದ್ಧ ಹೋರಾಡಲು ಅನುಸರಿಸಬೇಕಾದ ಸಂಯುಕ್ತ ರಂಗದ ಕಾರ್ಯತಂತ್ರವನ್ನು ರೂಪಿಸಿದರು.
ಭೀಮಾ-ಕೋರೆಗಾಂವ್ ಪ್ರಕರಣದ ಆರೋಪಿಯಾಗಿ ಆರು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ನಂತರ, ಪ್ರೊಫೆಸರ್ ಶೋಮಾ ಸೆನ್ ಅವರಿಗೆ ನ್ಯಾಯಾಲಯವು ಏಪ್ರಿಲ್ 5ರಂದು ಜಾಮೀನು ನೀಡಿದೆ. ಅವರಿಗೆ ಜಾಮೀನು ನೀಡುವಾಗ, ಆಕೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಅಥವಾ ಯಾವುದೇ ಭಯೋತ್ಪಾದನಾ ಕೃತ್ಯಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ತೋರಿಸುವ (prima facie case) ಪ್ರಕರಣವೇನೂ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದಾಗ್ಯೂ, ಶ್ರೀಮತಿ ಸೆನ್ ತನ್ನ ಜೀವನದ ಆರು ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು. ಇದು ಎರಡು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ: ಮೊದಲನೆಯದು, ಸುಪ್ರೀಂ ಕೋರ್ಟ್ನ ಪ್ರಕಾರವೇ, ನಿರಾಧಾರವಾಗಿ ಮತ್ತು ವಿಚಾರಣೆ ಇಲ್ಲದೆ ಶ್ರೀಮತಿ ಶೋಮಾ ಸೆನ್ ಅವರನ್ನು ದೀರ್ಘಾವಧಿಯ ಜೈಲು ವಾಸದ ಶಿಕ್ಷೆಗೆ ಒಳಪಡಿಸಿದ್ದಕ್ಕಾಗಿ ಸರ್ಕಾರವು ಹೊಣೆ ಹೊರಬೇಕಲ್ಲವೇ ಮತ್ತು ಸರ್ಕಾರವನ್ನು ಯಾವುದಾದರೂ ಒಂದು ರೀತಿಯ ಶಿಕ್ಷೆಗೆ ಒಳಪಡಿಸಬೇಕಲ್ಲವೇ? ಎರಡನೆಯದಾಗಿ, ಆಕೆಯ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯಗಳು ಸಂವಿಧಾನದ ಅಡಿಯಲ್ಲಿ ಕರ್ತವ್ಯ ಬದ್ಧರಾಗಿರುವಾಗ, ಈ ಆರು ವರ್ಷಗಳ ಕಾಲ ಶ್ರೀಮತಿ ಸೆನ್ ಜೈಲಿನಲ್ಲಿ ಕೊಳೆಯುತ್ತಿದ್ದಾಗ, ನಾನಾ ಹಂತದ ನ್ಯಾಯಾಲಯಗಳು ಏನು ಮಾಡುತ್ತಿದ್ದವು?
ಎನ್ಐಎ ಯ ವಿಕೃತ ನ್ಯಾಯಶಾಸ್ತ್ರ
ಈ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್ಐಎ) ಶ್ರೀಮತಿ ಸೆನ್ ಅವರ ಜಾಮೀನು ಅರ್ಜಿಯ ವಿಚಾರಣೆಯ ಸಮಯದಲ್ಲಿ “ಜಾಮೀನು, ಆರೋಪಿಯ ಹಕ್ಕು ಅಲ್ಲ” ಎಂಬ ನಿಲುವನ್ನು ತಳೆಯಿತು. ಫಿರ್ಯಾದಿಯು ಮುಂದಿಟ್ಟ ಈ ಅತಿರೇಕದ ವಾದವನ್ನು, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಭಾರತ ಸಂವಿಧಾನದ ಕಲಮು 21ರ ಉಲ್ಲಂಘನೆ ಎಂದು ತಿರಸ್ಕರಿಸಿತು. ಈ ಅತಿರೇಕದ ವಾದವನ್ನು ಮತ್ತು ಆಕೆಯ ವಿರುದ್ಧ ಯಾವುದೇ ಭಯೋತ್ಪಾದಕ ಕೃತ್ಯವಾಗಲಿ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಬಗ್ಗೆಯಾಗಲಿ ಮೇಲ್ನೋಟಕ್ಕೇ ಯಾವುದೇ ಅಂಶ ಇಲ್ಲದಿದ್ದರೂ ಆಕೆಯನ್ನು ಬಂಧಿಸಿ ಆರು ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು ಎಂಬ ಅಂಶದೊಂದಿಗೆ ನೋಡಿದಾಗ, ಕೇಂದ್ರ ಸರ್ಕಾರವು ಒಂದು ಅಸಾಧಾರಣವಾದ ಪ್ರತಿಪಾದನೆಯನ್ನು ಮುಂದಿಡುತ್ತಿದೆ ಎಂಬುದು ನಮಗೆ ಕಂಡುಬರುತ್ತದೆ. ಈ ಅಸಾಧಾರಣ ಪ್ರತಿಪಾದನೆಯ ಪ್ರಕಾರ, ಎನ್ಐಎನಂತಹ ಏಜೆನ್ಸಿಗಳನ್ನು ನಿಯಂತ್ರಿಸುವ ಕೇಂದ್ರ ಸರ್ಕಾರವು ತನ್ನ ಇಚ್ಛೆಯ ಮೇರೆಗೆ ಯಾರನ್ನು ಬೇಕಾದರೂ ಬಂಧಿಸಬಹುದು ಮತ್ತು “ಜಾಮೀನು ಆರೋಪಿಯ ಹಕ್ಕು ಅಲ್ಲ” ಎಂಬ ನೆಲೆಯ ಮೇಲೆ ಒಬ್ಬ ಆರೋಪಿಯನ್ನು ಸರ್ಕಾರವು ಬಯಸಿದಷ್ಟು ಕಾಲವೂ ಜೈಲಿನಲ್ಲಿ ಇರಿಸಬಹುದು.
ಈ ಪ್ರತಿಪಾದನೆಯು, ಅಪರಾಧಿ ಎಂದು ಸಾಬೀತಾಗುವ ವರೆಗೂ ಒಬ್ಬ ವ್ಯಕ್ತಿಯನ್ನು ನಿರಪರಾಧಿ ಎಂದು ಪರಿಗಣಿಸಬೇಕು ಎನ್ನುವ ನ್ಯಾಯಶಾಸ್ತ್ರದ ಸಹಜ ನೆಲೆಗಟ್ಟಿನ ನಿರಾಕರಣೆಯಾಗುತ್ತದೆ. ಮೋದಿ ಸರ್ಕಾರವು ಪ್ರಯೋಗಿಸುತ್ತಿರುವ ಈ ನ್ಯಾಯಶಾಸ್ತ್ರವು ಹೇಳುವುದೇನೆಂದರೆ, ಅಪರಾಧವನ್ನು ಸಾಬೀತು ಮಾಡುವಂಥಹ ಯಾವ ಸಾಕ್ಷ್ಯವೂ ಇಲ್ಲದೆ ಯಾರನ್ನಾದರೂ ಬಂಧಿಸಬಹುದು ಮತ್ತು ಎಷ್ಟೂ ಸಮಯದವರೆಗೂ ಜೈಲಿನಲ್ಲಿ ಇರಿಸಬಹುದು ಮತ್ತು ವಿಚಾರಣೆಯನ್ನೇ ನಡೆಸದೆಯೂ ಒಬ್ಬ ವ್ಯಕ್ತಿಯನ್ನು ಆತ ನಿರಪರಾಧಿ ಎಂದು ಸಾಬೀತಾಗುವ ವರೆಗೂ ಅಪರಾಧಿ ಎಂದು ಪರಿಗಣಿಸಬಹುದು ಎಂಬುದನ್ನು.
ಸುಪ್ರೀಂ ಕೋರ್ಟ್ ಪ್ರೊಫೆಸರ್ ಶೋಮಾ ಅವರಿಗೆ ಜಾಮೀನು ನೀಡಿದೆ ಎಂಬುದೇ ಒಂದು ಬಹಳ ಒಳ್ಳೆಯ ಸುದ್ದಿ ಮತ್ತು ಅದು ಸರ್ಕಾರ ಪ್ರತಿಪಾದಿಸಿದ ವಿಕೃತ ನ್ಯಾಯಶಾಸ್ತ್ರವನ್ನು ಒಪ್ಪಿಕೊಂಡಿಲ್ಲ ಎಂಬ ಕಾರಣದಿಂದಲೂ ಅದು ಬಹಳ ಒಳ್ಳೆಯ ಸುದ್ದಿಯೇ ಹೌದು. ಈ ವಿಕೃತ ನ್ಯಾಯಶಾಸ್ತ್ರದ ನಿರಾಕರಣೆಯನ್ನು ಎರಡು ಕಾರಣಗಳಿಂದಾಗಿ ಇನ್ನೂ ಅಂತಿಮವೆಂದು ಪರಿಗಣಿಸಲಾಗದು. ಮೊದಲನೆಯದು, ವ್ಯಕ್ತಿಯ ಹಕ್ಕುಗಳನ್ನು ಕಾರ್ಯಾಂಗವು ದಮನಿಸುತ್ತಿರುವುದರ ವಿರುದ್ಧವಾಗಿ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವ ಅಗತ್ಯದ ಬಗ್ಗೆ ಕೆಳ ಹಂತದ ನ್ಯಾಯಾಂಗವನ್ನು ಸಂವೇದಿಯಾಗಿಸುವ ಕಾರ್ಯವು ಇನ್ನೂ ನಡೆಯದಿರುವ ಸನ್ನಿವೇಶದಲ್ಲಿ ಈ ಆದೇಶವು ಸರ್ವೋಚ್ಛ ನ್ಯಾಯಾಲಯದಿಂದ ಬಂದಿದೆ. ಎರಡನೆಯದಾಗಿ, ಶೋಮಾ ಅವರ ಜಾಮೀನು ಅರ್ಜಿಗೆ ತನ್ನ ಆಕ್ಷೇಪಣೆಗಳನ್ನು ಸ್ವತಃ ಎನ್ಐಎ ಹಿಂತೆಗೆದುಕೊಂಡಿತು ಮತ್ತು ಇನ್ನು ಮುಂದೆ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಹೇಳಿತು. ಈ ವಾದವು ಎಷ್ಟು ಅಸಂವೇದನಾಶೀಲವಾಗಿತ್ತೊ ಅಷ್ಟೇ ಅಸಂಬದ್ಧವೂ ಆಗಿತ್ತು. ನ್ಯಾಯಾಂಗ
ಆರು ವರ್ಷಗಳ ಅವಧಿಯಲ್ಲಿ ಎನ್ಐಎ ಅವರನ್ನು ವಿಚಾರಣೆಗೆ ಒಳಪಡಿಸಿತ್ತು ಎಂದಲ್ಲ ಅಥವಾ ವಿಚಾರಣೆಯನ್ನು ಪೂರ್ಣಗೊಳಿಸಲು ಶೋಮಾ ಅವರ ಜೀವನದ ಆರು ವರ್ಷಗಳು ಬೇಕಿದ್ದವು ಎಂದಲ್ಲ. ಜಾಮೀನಿಗೆ ಎನ್ಐಎ ಆಕ್ಷೇಪ ಎತ್ತದ ನಿಲುವಿನ ಹಿಂದಿರುವ ಪ್ರಮುಖ ಪರಿಗಣನೆ ಎಂದರೆ, ಎನ್ಐಎ ವಿರೋಧದ ಹೊರತಾಗಿಯೂ ಸುಪ್ರೀಂ ಕೋರ್ಟ್ ಆಕೆಗೆ ಒಂದು ವೇಳೆ ಜಾಮೀನು ನೀಡಿದರೆ, ಈ ನಿದರ್ಶನವನ್ನು ಇನ್ನು ಮುಂದೆ ಇದೇ ರೀತಿಯಲ್ಲಿ ಬಂಧನದಲ್ಲಿ ಇರಿಸಿರುವ ಇತರರು ತಮ್ಮ ಜಾಮೀನು ಅರ್ಜಿಗಳಲ್ಲಿ ಉಲ್ಲೇಖಿಸಬಹುದು ಎಂಬುದು. ಹಾಗಾಗಿ, ಕೊನೆಯ ಕ್ಷಣದಲ್ಲಿ ಆಕ್ಷೇಪಣೆಯನ್ನು ಎನ್ಐಎ ಹಿಂತೆಗೆದುಕೊಂಡ ಕ್ರಮವು, ಇದೇ ರೀತಿಯ ಪ್ರಕರಣಗಳಲ್ಲಿ ಇನ್ನು ಮುಂದೆ ಕೆಳ ಹಂತದ ನ್ಯಾಯಾಂಗವು, ಜಾಮೀನು ನೀಡಲು ಒಂದು ಆಧಾರವಾಗುತ್ತದೆಯೇ ಅಥವಾ ಪ್ರಸ್ತುತ ಸರ್ಕಾರವು ಪ್ರತಿಪಾದಿಸುತ್ತಿರುವ ವಿಕೃತ ನ್ಯಾಯಶಾಸ್ತ್ರದೊಂದಿಗೆ ಅದು ಸಾಗುತ್ತದೆಯೇ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದು.
ಇದನ್ನು ಓದಿ : ಲೋಕಸಭಾ ಚುನಾವಣೆಗೆ ನಮ್ಮ ಮೆಟ್ರೋ ಅವಧಿ ವಿಸ್ತರಣೆ
ಪ್ರಬೀರ್ ಪುರ್ಕಾಯಸ್ಥ ಪ್ರಕರಣದಲ್ಲೂ..
ಇದೇ ವಿಕೃತ ನ್ಯಾಯಶಾಸ್ತ್ರವನ್ನು ಪ್ರಬೀರ್ ಪುರ್ಕಾಯಸ್ಥ ಪ್ರಕರಣದಲ್ಲೂ ಅನ್ವಯಿಸಲಾಗಿದೆ. ಸುಮಾರು ಎರಡು ವರ್ಷಗಳಿಂದಲೂ ನ್ಯೂಸ್ಕ್ಲಿಕ್ ಪತ್ರಿಕೆಯನ್ನು ಬೆನ್ನಟ್ಟಿದ ಮೋದಿ ಸರ್ಕಾರವು ಪತ್ರಿಕೆಯ ಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರ ಕಚೇರಿ ಮತ್ತು ಮನೆಯನ್ನು ಹಣ ದುರುಪಯೋಗದ ಪುರಾವೆಗಾಗಿ ವಾರಗಟ್ಟಲೆ ಶೋಧಿಸಿದ ನಂತರವೂ ಏನೂ ಸಿಗದಿದ್ದಾಗ, ಚೀನಾದ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಅಮೆರಿಕದ ಶ್ರೀಮಂತ ಉದ್ಯಮಿ ನೆವಿಲ್ಲ್ ರಾಯ್ ಸಿಂಘಮ್ ನ್ಯೂಸ್ಕ್ಲಿಕ್ ಪತ್ರಿಕೆಯೊಂದಿಗೂ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಸೂಚಿಸುವ ಒಂದು ಲೇಖನದ (ದಿ ನ್ಯೂಯಾರ್ಕ್ ಟೈಮ್ಸ್, ಆಗಸ್ಟ್ 5, 2023) ಆಧಾರದ ಮೇಲೆ ಪ್ರಬೀರ್ ಪುರ್ಕಾಯಸ್ಥ ಅವರನ್ನು ಜಾಮೀನಿಗೆ ಅವಕಾಶವಿಲ್ಲದ ಯುಎಪಿಎ ಅಡಿಯಲ್ಲಿ ಬಂಧಿಸಲಾಯಿತು. ನ್ಯೂಯಾರ್ಕ್ ಟೈಮ್ಸ್ನ ಈ ಲೇಖನದ ಉದ್ದೇಶವೆಂದರೆ, ಚೀನಾದಲ್ಲಿ ನೆಲೆಸಿರುವ ಮತ್ತು ಪ್ರಗತಿಪರ ಅಭಿಪ್ರಾಯಗಳನ್ನು ಹೊಂದಿರುವ ಅಮೇರಿಕನ್ ಬಿಲಿಯನೇರ್ ಉದ್ಯಮಿ ನೆವಿಲ್ಲ್ರಾಯ್ ಸಿಂಘಂ ಅವರು ಬೆಳೆಯುತ್ತಿರುವ ಚೀನಾದ ಪ್ರಭಾವವನ್ನು ವಿಶ್ವಾದ್ಯಂತ ಹರಡುತ್ತಾರೆ ಎಂಬ ರೀತಿಯ ಸನ್ನಿವೇಶವನ್ನು ಸೃಷ್ಟಿಸುವುದು ಮತ್ತು ಚೀನಾ ಒಂದು ಜಾಗತಿಕ ಬೆದರಿಕೆ ಎಂಬ ಭ್ರಮೆಯನ್ನು ಸೃಷ್ಟಿಸುವುದು ಮತ್ತು ಇಂಥಹ ಉದ್ದೇಶಕ್ಕಾಗಿ ಅಮೆರಿಕಾದ ಯುದ್ಧ-ವಿರೋಧಿ ಸಂಘಟನೆಗಳೂ ಸೇರಿದಂತೆ ವಿಶ್ವಾದ್ಯಂತ ಹಲವಾರು ಎಡ ಸಂಘಟನೆಗಳಿಗೆ ಸಿಂಘಂ ಹಣ ಒದಗಿಸುತ್ತಾರೆ ಎಂಬುದು.
ಈ ಲೇಖನದಲ್ಲಿ, ಸಿಂಘಂ-ಚೀನಾ ಸರ್ಕಾರ ಸಂಬಂಧದ ಬಗ್ಗೆ ಯಾವ ಪುರಾವೆಯನ್ನೂ ಉಲ್ಲೇಖಿಸಿಲ್ಲ ಅಥವಾ ಅದನ್ನು ನೇರವಾಗಿ ಹೇಳಲೂ ಇಲ್ಲ. ಈ ಬಿಲಿಯನೇರ್ ಮಾಡಿದ ಯಾವ ತಪ್ಪನ್ನಾಗಲಿ ಅಥವಾ ಕಾನೂನಿನ ನಿರ್ದಿಷ್ಟ ಉಲ್ಲಂಘನೆಯನ್ನಾಗಲಿ ಉಲ್ಲೇಖಿಸಿಲ್ಲ. ಈ ಲೇಖನದ ಉದ್ದೇಶವೆಂದರೆ, ಅಮೆರಿಕಾದ ಯುದ್ಧ-ವಿರೋಧಿ ಗುಂಪುಗಳ ಮೇಲೆ ಮೆಕಾರ್ಥಿವಾದೀ ಬೇಟೆಯನ್ನು ಆರಂಭಿಸುವುದು (ಅಮೆರಿಕಾದ ಸೆನೆಟರ್ ಜೋಸೆಫ್ ಮೆಕಾರ್ಥಿ 1950ರ ದಶಕದಲ್ಲಿ ಕಮ್ಯೂನಿಸಂ ಹರಡುವ ಭೀತಿಯನ್ನು ಸೃಷ್ಟಿಸಿದ್ದ ಮತ್ತು ಅದಕ್ಕೆ ಪರಿಹಾರವಾಗಿ, ವ್ಯಕ್ತಿಗಳ ಮೇಲೆ ದೇಶದ್ರೋಹ, ಗೂಢಚರ್ಯೆ, ವಿಧ್ವಂಸಕ ಕೃತ್ಯ ಮುಂತಾದ ಸುಳ್ಳು ಆರೋಪ ಹೊರಿಸಿ, ತನಿಖಾ ಸಂಸ್ಥೆಗಳನ್ನು ಅವರ ಮೇಲೆ ಛೂ ಬಿಟ್ಟು, ಕಿರುಕುಳ ಕೊಡುವ ಮತ್ತು ದಮನಕಾರಿ ಕ್ರಮಗಳನ್ನು ಕೈಗೊಳ್ಳುವ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಯಿತು) ಮತ್ತು ಅದೇ ಸಮಯದಲ್ಲಿ ಈ ವಿಷಯವನ್ನು ಕಾನೂನು ಕ್ರಮ ಎದುರಾಗದ ರೀತಿಯಲ್ಲಿ ಹೇಳುವುದಕ್ಕಾಗಿ (ಅಂದರೆ ಪ್ರಕಟಿಸಿದ ಲೇಖನದಲ್ಲಿ ಸುಳ್ಳುಗಳನ್ನು ಸೇರಿಸದೆ) ಲೇಖನದಲ್ಲಿ ಕೇವಲ ದ್ವಂದ್ವಾರ್ಥ-ಸೂಚ್ಯಾರ್ಥಗಳುಳ್ಳ ಪದ ಬಳಕೆಮಾಡಲಾಗಿದೆ. ಈ ಲೇಖನದಲ್ಲಿ, ಬಿದ್ದು ಹೋಗುವುದು ಎದ್ದು ಹೋಗಲಿ ಎನ್ನುವ ರೀತಿಯಲ್ಲಿ, ನ್ಯೂಸ್ಕ್ಲಿಕ್ ಕೂಡ ಈ ಬಿಲಿಯನೇರ್ ನಿಧಿಯ ಫಲಾನುಭವಿ ಎಂಬಂತೆ ಬರೆಯಲಾಗಿದೆ.
ನ್ಯೂಯಾರ್ಕ್ ಟೈಮ್ಸ್ ಹವಣಿಸಿದ ಈ ಯೋಜನೆಗೆ ಫ್ಲೋರಿಡಾದ ಬಲಪಂಥೀಯ ಸೆನೆಟರ್ ಮಾರ್ಕೊ ರೂಬಿಯೊ, ಅಮೆರಿಕಾದಲ್ಲಿರುವ ಒಂಬತ್ತು ಯುದ್ಧ-ವಿರೋಧಿ ಗುಂಪುಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿ ಅಟಾರ್ನಿ ಜನರಲ್ ಅವರಿಗೆ ಬರೆದ ಪತ್ರವು ಒಂದಿಷ್ಟು ವಿಶ್ವಾಸಾರ್ಹತೆಯನ್ನು ಒದಗಿಸಿತಾದರೂ, ತನಿಖೆಯನ್ನು ಆರಂಭಿಸಲು ಸರಿಯಾದ ಆಧಾರವಿಲ್ಲದ ಕಾರಣ ಅದು ಬಿದ್ದುಹೋಯಿತು. ಮೇಲಾಗಿ, ವಿಶ್ವಾದ್ಯಂತ ಮಾನವ ಹಕ್ಕುಗಳನ್ನು ತುಳಿದು ಹಾಕುತ್ತಿರುವ ಅಮೆರಿಕಾದ ಆಡಳಿತವು, ತನ್ನ ದೇಶದೊಳಗಿನ ನಾಗರಿಕರ ಹಕ್ಕುಗಳ ವಿಷಯಕ್ಕೆ ಬಂದಾಗ ಅದು ಹೆಚ್ಚು ಸೂಕ್ಷ್ಮವಾಗಿ ವರ್ತಿಸುತ್ತದೆ. ಆದರೆ, ನ್ಯೂಯಾರ್ಕ್ ಟೈಮ್ಸ್ನ ಇದೇ ಲೇಖನವನ್ನು ಭಾರತದಲ್ಲಿ ಪ್ರಬೀರ್ ಮತ್ತು ಅವರ ಇನ್ನೊಬ್ಬ ಸಹೋದ್ಯೋಗಿಯ ಬಂಧನಕ್ಕೆ ಸಮರ್ಥನೆಯಾಗಿ ಬಳಸಲಾಗಿದೆ: ಭಾರತ ಸರ್ಕಾರವು ತನ್ನ ನೂತನ ಫ್ಯಾಸಿಸ್ಟ್ ತೆರನ ನ್ಯಾಯಶಾಸ್ತ್ರದೊಂದಿಗೆ ಸಾಮ್ರಾಜ್ಯಶಾಹಿ ಅಮೆರಿಕಾದ ಸರ್ಕಾರವೂ ಸಹ ಸಮರ್ಥಿಸಲಾಗದ ಕ್ರಮಗಳೊಂದಿಗೆ ಸಾಗಿದೆ. ಪ್ರಬೀರ್ ಅವರನ್ನು ಬಂಧಿಸಿದ ಸುಮಾರು ಆರು ತಿಂಗಳ ನಂತರ ಅವರ ವಿರುದ್ಧ ಸಿದ್ಧಪಡಿಸಿದ ಆರೋಪ-ಪಟ್ಟಿಯಲ್ಲಿ, ನ್ಯೂಯಾರ್ಕ್ ಟೈಮ್ಸ್ ಕೆಲವು ಕೊಂಕು ನುಡಿಗಳನ್ನು ಆರೋಪಗಳಾಗಿ ಪುನರಾವರ್ತಿಸುವುದರ ಜೊತೆಗೆ, ಸರ್ಕಾರದ ಕೋವಿಡ್ ನೀತಿಯ ಬಗ್ಗೆ ನ್ಯೂಸ್ಕ್ಲಿಕ್ ಮಾಡಿದ ಟೀಕೆ-ಟಿಪ್ಪಣಿಗಳನ್ನು ಮತ್ತು ರೈತರ ಆಂದೋಲನಕ್ಕೆ ನ್ಯೂಸ್ಕ್ಲಿಕ್ ನೀಡಿದ ಬೆಂಬಲವನ್ನು ಕಾನೂನಿನ ದೃಷ್ಟಿಯಲ್ಲಿ ಒಂದು ಅಪರಾಧವೆಂದು ಪರಿಗಣಿಸಲಾಗಿದೆ! ನ್ಯಾಯಾಂಗ
ಬಿನ್ನಹದ ನಿಲುವು ಬೇಡ
ಹಿಟ್ಲರನ ಆಳ್ವಿಕೆಯ ಆರಂಭದ ದಿನಗಳಲ್ಲಿ ಜರ್ಮನಿಯ ನ್ಯಾಯಾಂಗವು ಹರ್ಮನ್ ಗೋರಿಂಗ್ ಅವರನ್ನು ಒಬ್ಬ ಸಾಕ್ಷಿಯಾಗಿ ಪಾಟಿ ಸವಾಲಿಗೆ ಒಳಪಡಲು ಕರೆಸುವ ಮೂಲಕ ನಾಜಿಗಳು ತೊಡಗಿದ್ದ ಕಾರ್ಯದಲ್ಲಿ ಅಡ್ಡಗಾಲು ಹಾಕಿತು ಮತ್ತು ಅಲ್ಲಿನ ಸಂಸತ್ತಿಗೆ ಬೆಂಕಿ ಹಚ್ಚಿದ ಆರೋಪದಿಂದ ಜಾರ್ಜಿ ದಿಮಿತ್ರೋವ್ ಅವರನ್ನು ಖುಲಾಸೆಗೊಳಿಸಿತು. ಆದರೆ, ಭಾರತದಲ್ಲಿ ಕಾರ್ಯಾಂಗವು ಸಂವಿಧಾನಕ್ಕೆ ವಿರುದ್ಧವಾಗಿ ಒಂದು ಫ್ಯಾಸಿಸ್ಟ್ ತೆರನ ಮಾರ್ಗವನ್ನು ಮತ್ತು ಸಂವಿಧಾನ ವಿರೋಧಿಯಾದ ಒಂದು ಅಸಹ್ಯ ನ್ಯಾಯಶಾಸ್ತ್ರವನ್ನು ಪ್ರತಿಪಾದಿಸುತ್ತಿರುವಾಗಲೂ, ಭಾರತದ ನ್ಯಾಯಾಂಗವು ಬಗ್ಗೆ, ಇದುವರೆಗೂ, ಹೆಚ್ಚಾಗಿ ಬಿನ್ನಹದ ನಿಲುವನ್ನು ತೋರಿದೆ. ನಿಜ, ಜರ್ಮನಿಯಲ್ಲಿ ಹಿಟ್ಲರ್ ಪ್ರಾಬಲ್ಯ ಹೊಂದುವುದನ್ನು ತಡೆಯುವುದು ನ್ಯಾಯಾಂಗಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ, ಅದು ಅದರ ಕೈಗಳಲ್ಲಿ ಇರಲಿಲ್ಲ. ಆದರೆ, ಅದು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸ್ವಲ್ಪವಾದರೂ ಎದೆಗಾರಿಕೆಯನ್ನು ತೋರಿಸಿತು. ಭಾರತದ ನ್ಯಾಯಾಂಗವೂ ಇದೇ ರೀತಿಯ ಎದೆಗಾರಿಕೆಯನ್ನು ತೋರಬೇಕೆಂಬುದು ಜನತೆಯ ಬಯಕೆ.
ಭಾರತ ಸಂವಿಧಾನವನ್ನು ಕಾರ್ಯಾಂಗದ ತುಳಿತದಿಂದ ತಡೆಯುವಂತೆ ವಿದೇಶಗಳ ಹಲವಾರು ಗಣ್ಯ ಅಧ್ಯಯನಕಾರರು ಮತ್ತು ಲೇಖಕರು ಭಾರತದ ಪ್ರಭುತ್ವದ ಸಿಬ್ಬಂದಿಗೆ, ವಿಶೇಷವಾಗಿ ನ್ಯಾಯಾಂಗಕ್ಕೆ, ಇತ್ತೀಚೆಗೆ ಮಾಡಿರುವ ಮನವಿಯು ಈ ನಿರ್ದಿಷ್ಟ ಸಂದರ್ಭದಲ್ಲಿ ತುರ್ತಿನದಾಗಿದೆ.
ಇದನ್ನು ನೋಡಿ : ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ – ಅಜಂ ಶಾಹಿದ್