ಸಂಕಗಳನ್ನುಅಸ್ತ್ರವಾಗಿಸಿಕೊಳ್ಳುವುದು ಸಾಮ್ರಾಜ್ಯಶಾಹಿಯ ಒಂದು ಸಂಪೂರ್ಣ ಹೊಸ ತಂತ್ರ. ಮೂರನೇ ಜಗತ್ತಿನ ದೇಶವೊಂದು ಸಾಮ್ರಾಜ್ಯಶಾಹಿಯ ಆದೇಶವನ್ನು ಧಿಕ್ಕರಿಸುವ ಧೈರ್ಯ ಮಾಡಿದರೆ, ಗಾಜಾದಲ್ಲಿ ಚಿತ್ರ-ವಿಚಿತ್ರ ರೂಪದಲ್ಲಿ ಏನು ನಡೆಯುತ್ತಿದೆಯೋ ಅದನ್ನು ಬೇರೆಡೆಯಲ್ಲಿಯೂ ಸಹ ಆಗು ಮಾಡಬಹುದು. ಅದನ್ನು ಮಿಲಿಟರಿ ಹಸ್ತಕ್ಷೇಪದ ಮೂಲಕವೇ ಸಾಧಿಸಬೇಕು ಎಂದೇನಿಲ್ಲ, ಸುಂಕ-ಭಯೋತ್ಪಾದನೆಯ ಮೂಲಕವೂ ಸಾಧಿಸಬಹುದು ಎಂಬುದನ್ನು ಸಾಮ್ರಾಜ್ಯಶಾಹಿಯು ಎತ್ತಿ ತೋರಿಸುತ್ತಿದೆ. ಇದರಿಂದ ಕಲಿಯಬೇಕಾದ ಪಾಠವೆಂದರೆ, ಪ್ರಧಾನವಾಗಿ ಆಂತರಿಕ-ಮಾರುಕಟ್ಟೆ ಆಧರಿತ, ಸ್ವಾವಲಂಬನೆಯ, ನಿಯಂತ್ರಣ ನೀತಿಗಳ ಅಭಿವೃದ್ಧಿ ಕಾರ್ಯತಂತ್ರವು ವಸಾಹತೀಕರಣದಿಂದ ಹೊರಬರುವಲ್ಲಿ ಒಂದು ಅಗತ್ಯ ಪೂರಕ ಅಂಶವಾಗುತ್ತದೆ ಎಂಬುದು. ಆದ್ದರಿಂದ, ಭಾರತದಂತಹ ಒಂದು ದೇಶವು ತನ್ನ ಅಭಿವೃದ್ಧಿ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳುವುದು ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೋದಿ ಸರ್ಕಾರವು ಏನನ್ನೂ ಮಾಡುತ್ತಿಲ್ಲ ಮಾತ್ರವಲ್ಲ, ವಾಸ್ತವವಾಗಿ ಅಮೆರಿಕವನ್ನು ಸಂತುಷ್ಟಗೊಳಿಸಲು ರಿಯಾಯಿತಿಗಳನ್ನು ನೀಡಲು ಪ್ರಯತ್ನಿಸುತ್ತಿದೆ.
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಆಮದು ಮಾಡಿಕೊಳ್ಳುವ ಸರಕುಗಳ ದೇಶೀಯ ಉತ್ಪಾದಕರಿಗೆ ರಕ್ಷಣೆ ಒದಗಿಸಬೇಕು ಎಂದು ಒಂದು ದೇಶದ ಸರ್ಕಾರವು ಬಯಸಿದರೆ, ಆಗ ಅದು ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಸುಂಕಗಳನ್ನು ವಿಧಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರದ ಪಠ್ಯಪುಸ್ತಕಗಳು ನಮಗೆ ತಿಳಿಸುತ್ತವೆ. ಆದರೆ, ಡೊನಾಲ್ಡ್ ಟ್ರಂಪ್‌ರ ಸುಂಕಗಳು ಇನ್ನೂ ವ್ಯಾಪಕವಾದೊಂದು ಉದ್ದೇಶವನ್ನು ಈಡೇರಿಸುತ್ತವೆ: ಒಂದು ಮಿಲಿಟರಿ ಹಸ್ತಕ್ಷೇಪವು, ಅಥವಾ ಒಂದು ದಂಗೆಯು ಅಥವಾ ಒಂದು ಭಯೋತ್ಪಾದಕ ದಾಳಿಯು ಉಂಟುಮಾಡುವ ಪರಿಣಾಮದ ರೀತಿಯಲ್ಲಿ, ಡೊನಾಲ್ಡ್ ಟ್ರಂಪ್ ಅವರ ಸುಂಕಗಳು ರಫ್ತುದಾರ ದೇಶಗಳನ್ನು ಟ್ರಂಪ್ ಅವರ ಇಚ್ಛೆಗೆ ತಕ್ಕಂತೆ ಬಗ್ಗುವಂತೆ ಮಾಡುತ್ತವೆ. ಉದಾಹರಣೆಗೆ, ಭಾರತದ ಉಡುಪುಗಳ ಮೇಲೆ ಹೇರಿದ ಶೇ. 50ರಷ್ಟು ಸುಂಕಗಳಿಂದಾಗಿ ಭಾರತದ ರಫ್ತುದಾರರಿಗೆ ಹೊಡೆತ ಬೀಳುತ್ತದೆ. ಈ ಸುಂಕಗಳನ್ನು ಅಮೇರಿಕನ್ ಉಡುಪು ಉತ್ಪಾದಕರ ರಕ್ಷಣೆಗಾಗಿ ಟ್ರಂಪ್ ಹೇರಿರುವುದಲ್ಲ. ಬದಲಾಗಿ, ಅವರ ಇಚ್ಛೆಗೆ ತಕ್ಕಂತೆ ಭಾರತವನ್ನು ಮಣಿಸುವಂತೆ ಮಾಡುವುದಕ್ಕಾಗಿ.
ಇದು ಟ್ರಂಪ್ ಸುಂಕ ನೀತಿಯಲ್ಲಿರುವ ವಿಪರೀತಗಳನ್ನು ವಿವರಿಸುತ್ತದೆ. ಭಾರತದ ರಫ್ತುಗಳ ವಿರುದ್ಧ ಟ್ರಂಪ್ ಹೇರಿರುವ ಶೇ. 50ರ ವರೆಗಿನ ಸುಂಕಗಳು, ರಷ್ಯಾದ ಇಂಧನವನ್ನು ಭಾರತ ಖರೀದಿಸಿದ್ದಕ್ಕಾಗಿ ವಿಧಿಸಿದ ಒಂದು ಶಿಕ್ಷೆ ಎಂದು ಭಾವಿಸಲಾಗಿದೆ. ಚೀನಾವು ರಷ್ಯಾ ಇಂಧನದ ಅತಿದೊಡ್ಡ ಖರೀದಿದಾರ ದೇಶ. ರಷ್ಯಾದಿಂದ ಭಾರತವು ಕೊಳ್ಳುವುದಕ್ಕಿಂತ ಅತಿ ಹೆಚ್ಚು ಪ್ರಮಾಣದ ಇಂಧನವನ್ನು ಚೀನಾ ಕೊಳ್ಳುತ್ತದೆ. ಆದಾಗ್ಯೂ, ಚೀನಾದ ಬಹುತೇಕ ಆಮದುಗಳ ಮೇಲೆ ಅಮೆರಿಕಾ ವಿಧಿಸುವ ಸುಂಕ ದರವು ಶೇ. 50ಕ್ಕಿಂತಲೂ ಕಡಿಮೆ ಇದೆ. ಈ ಸುಂಕ-ಭೇದದ ಕಾರಣವೆಂದರೆ, ಭಾರತವನ್ನು ಲಘುವಾಗಿ ತೆಗೆದುಕೊಳ್ಳಬಹುದು, ಚೀನಾವನ್ನಲ್ಲ ಎಂಬುದು. ಅಮೆರಿಕ ತೊಂದರೆ ಕೊಟ್ಟರೆ, ಚೀನಾ ಪ್ರತೀಕಾರ ಕೈಗೊಳ್ಳಬಲ್ಲದು. ಉದಾಹರಣೆಗೆ, ಅಪರೂಪದ ಭೂ-ಖನಿಜಗಳ ರಫ್ತನ್ನು ಚೀನಾ ನಿಲ್ಲಿಸಿತು. ಆದರೆ, ಭಾರತವು ಯಾವುದೇ ಪ್ರತೀಕಾರದ ಬೆದರಿಕೆಯನ್ನೂ ಹಾಕಲಿಲ್ಲ. ಈ ವಿಷಯದಲ್ಲಿ ಬ್ರೆಜಿಲ್ ಕೂಡ ಭಾರತಕ್ಕಿಂತ ಬಹಳ ಭಿನ್ನವಾಗಿದೆ. ಅದು ಅಮೆರಿಕದ ವಿರುದ್ಧ ಶೇ. 50 ಸುಂಕ ವಿಧಿಸುವ ಮೂಲಕ ಪ್ರತೀಕಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಮತ್ತಿನ್ನೊಂದು ಏಕೈಕ ದೇಶವಾಗಿದೆ.
ಇದನ್ನೂ ಓದಿ: ದಸರಾಕ್ಕೇ ಬಂದ ‘ದೀಪಾವಳಿ ಉಡುಗೊರೆ
ಬ್ರೆಜಿಲ್ ದೇಶದ ಸರಕುಗಳ ಮೇಲೆ ಶೇ. 50 ಸುಂಕ ವಿಧಿಸುವ ಟ್ರಂಪ್ ಅವರು ಹೇಳುವ ಕಾರಣವು ಇನ್ನೂ ವಿಚಿತ್ರವಾಗಿದೆ. ಅದು ಚುನಾವಣೆಯಲ್ಲಿ ಸೋತಿರುವ ಅದರ ನವ-ಫ್ಯಾಸಿಸ್ಟ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸೊನಾರೊರನ್ನು ವಿಚಾರಣೆಗೆ ಗುರಿಪಡಿಸಿದ್ದಕ್ಕಾಗಿ ವಿಧಿಸಿದ ಶಿಕ್ಷೆ ಎಂದು ಭಾವಿಸಲಾಗಿದೆ ಮತ್ತು ಆತನನ್ನು ಗೌರವಯುತವಾಗಿ ಖುಲಾಸೆಗೊಳಿಸಬೇಕು ಎಂಬುದು ಟ್ರಂಪ್ ಅಪೇಕ್ಷೆ. ಇದು ಮತ್ತೊಂದು ದೇಶದ ನ್ಯಾಯ ವ್ಯವಸ್ಥೆಯಲ್ಲಿ ಮಾಡಿದ ವಿಸ್ಮಯಕಾರೀ ºಸ್ತಕ್ಷೇಪವಾಗುತ್ತದೆ. ಇದಕ್ಕೆ ಟ್ರಂಪ್ ಅವರ ಜಗಳಗಂಟಿತನವು ಕಾರಣವಾಗಿರಲಾರದು. ಭಾರತವನ್ನು ಮತ್ತು ಬ್ರೆಜಿಲನ್ನು ಪ್ರತ್ಯೇಕಿಸಿ ಅವುಗಳ ಮೇಲೆ ಶೇ. 50 ಸುಂಕ ವಿಧಿಸುವ ಟ್ರಂಪ್‌ರ ನಿಜ ಕಾರಣವೆಂದರೆ, ಮೂರನೇ ಜಗತ್ತಿನ ಈ ಎರಡು ದೊಡ್ಡ ದೇಶಗಳು ಯುಎಸ್ ಸಾಮ್ರಾಜ್ಯಶಾಹಿಯ ವಿರುದ್ಧವಾಗಿ ರಚಿಸುವ ಯಾವುದೇ ಸಂಯುಕ್ತ ರಂಗವನ್ನು ಮುರಿಯುವುದೇ ಆಗಿರಬೇಕು.
ಸಾಮ್ರಾಜ್ಯಶಾಹಿಯ ಹೊಸ ಅಸ್ತç
ಸುಂಕಗಳನ್ನು ಅಸ್ತçವಾಗಿಸಿಕೊಳ್ಳುವುದು ಸಾಮ್ರಾಜ್ಯಶಾಹಿಯ ಒಂದು ಸಂಪೂರ್ಣ ಹೊಸ ತಂತ್ರವೇ ಸರಿ. ವಸಾಹತುಶಾಹಿಯಿಂದ ಹೊರಬಂದ ನಂತರ ಮೂರನೆಯ ಜಗತ್ತಿನ ಬಹತೇಕ ದೇಶಗಳು ಸ್ವಾವಲಂಬನೆಯನ್ನು ಉತ್ತೇಜಿಸುವ, ದೇಶೀಯ ಮಾರುಕಟ್ಟೆಯನ್ನು ವಿಸ್ತರಿಸುವ ಮತ್ತು ಉತ್ಪಾದನೆಯನ್ನು ಹಾಗೂ ತಾಂತ್ರಿಕ ಸಾಮರ್ಥ್ಯಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಸಾಧನವಾಗಿ ಸಾರ್ವಜನಿಕ ವಲಯವನ್ನು ಬಳಸಿಕೊಳ್ಳುವ ‘ನಿಯಂತ್ರಣ’ ನೀತಿಗಳ ಒಂದು ಕಾರ್ಯತಂತ್ರವನ್ನು ಅನುಸರಿಸಿದವು. ಇದರ ವಿರುದ್ಧವಾಗಿ ಸಾಮ್ರಾಜ್ಯಶಾಹಿಯು ಇನ್ನಿಲ್ಲದ ಹೋರಾಟವನ್ನು ಹರಿಯಬಿಟ್ಟಿತು, ಆರಂಭದಲ್ಲಿ, ಪೂರ್ವ ಏಷ್ಯಾದಲ್ಲಿ, “ನಾಲ್ವರ ಪಟಾಲಂ” ಎಂದು ಕರೆಯಲ್ಪಡುವ ಹಾಂಗ್ ಕಾಂಗ್, ಸಿಂಗಾಪುರ್, ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳ ತಥಾಕಥಿತ ಯಶಸ್ಸನ್ನು ಒಳಗೊಂಡ ಒಂದು ಸೈದ್ಧಾಂತಿಕ ಅಂಶ ಇದರ ಒಂದು ಭಾಗವಾಗಿತ್ತು. ವಿಶ್ವ ಬ್ಯಾಂಕ್ ಅಭಿವೃದ್ಧಿ ಕಾರ್ಯತಂತ್ರಗಳಲ್ಲಿ “ಅಂತರ್ಮುಖಿ” ಮತ್ತು “ಬಹಿರ್ಮುಖಿ” ಎಂಬ ವ್ಯತ್ಯಾಸವನ್ನು ಮಾಡಿ, ಪೂರ್ವ ಏಷ್ಯಾದ ಈ ನಾಲ್ವರ “ಬಹಿರ್ಮುಖಿ” ಕಾರ್ಯತಂತ್ರದ ಯಶಸ್ಸನ್ನು ಹೊಗಳುವ ಮೂಲಕ ಅದರ ಶ್ರೇಷ್ಠತೆಯನ್ನು ಪ್ರಚುರಪಡಿಸುವ ಕಾರ್ಯವನ್ನು ಆರಂಭಿಸಿತು.
“ಬಹಿರ್ಮುಖಿ” ಕಾರ್ಯತಂತ್ರವನ್ನು ಅನುಸರಿಸಿದ ಪೂರ್ವ ಏಷ್ಯಾದ “ನಾಲ್ವರ ಪಟಾಲಂ” ಸಾಧಿಸಿದ ರಫ್ತು ಮತ್ತು ಜಿಡಿಪಿ ಬೆಳವಣಿಗೆ ದರಗಳ ಪ್ರತ್ಯಕ್ಷ ಅನುಭವವನ್ನು ಎಲ್ಲ ದೇಶಗಳೂ ಅನುಕರಿಸಬಹುದು ಎಂಬ ಒಂದು ಸಂಪೂರ್ಣ ಅಪ್ರಾಮಾಣಿಕ ಬೌದ್ಧಿಕ ವಾದವನ್ನು ಬಳಸಲಾಯಿತು. ಈ ವಾದವು ಅಸಂಬದ್ಧವಾಗಿದೆ. ಏಕೆಂದರೆ, ಎಲ್ಲ ದೇಶಗಳ ರಫ್ತು ಬೆಳವಣಿಗೆಯ ದರವನ್ನು ಒಟ್ಟಾಗಿ ತೆಗೆದುಕೊಂಡರೆ ಅದರ ಮೇಲೆ ವಿಶ್ವ ಮಾರುಕಟ್ಟೆಯ ಬೆಳವಣಿಗೆಯ ದರದ ನಿರ್ಬಂಧ ಇರುತ್ತದೆ. ಹಾಗಾಗಿ, ಕೆಲವು ದೇಶಗಳ ವೇಗದ ಬೆಳವಣಿಗೆಯು ಉಳಿದ ದೇಶಗಳ ನಿಧಾನಗತಿಯ ಬೆಳವಣಿಗೆಯೊಂದಿಗೆ ಇರಬೇಕಾಗುತ್ತದೆ. ಆದರೆ, ಪ್ರತಿಯೊಂದು ದೇಶವೂ ಒಂದು “ಸಣ್ಣ ದೇಶ”ವೆಂದೂ, ಅದು ತನಗೆ ಬಯಸಿದಷ್ಟನ್ನು ರಫ್ತು ಮಾಡಬಹುದು ಎಂಬ ಊಹನೆಯ ಮೂಲಕ ಈ ತರ್ಕವನ್ನು ತಳ್ಳಿಹಾಕಲಾಯಿತು.
ಈ ಚರ್ಚೆಯನ್ನು ಎರಡು ಅಂಶಗಳು ಸಾಮ್ರಾಜ್ಯಶಾಹಿಯ ತರ್ಕದ ಕಡೆಗೆ ತಿರುಗಿಸಿದವು. ಮೊದಲನೆಯದು, ಚೀನಾದ ರಫ್ತು ಯಶಸ್ಸು. ಅದು ಸಂಪೂರ್ಣವಾಗಿ ಒಂದು ವಿಭಿನ್ನ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ಮತ್ತು ಒಂದು ವಿಭಿನ್ನ ಅಭಿವೃದ್ಧಿ ದಿಕ್ಪಥದಲ್ಲಿ ಬೇರೂರಿದ್ದರೂ ಸಹ, “ಬಹಿರ್ಮುಖಿ” ಕಾರ್ಯತಂತ್ರದ ಶ್ರೇಷ್ಠತೆಯನ್ನು ಅದು ದೃಢೀಕರಿಸುತ್ತದೆ ಎಂದು ಜಗತ್ತಿಗೆ ಪ್ರಸ್ತುತಪಡಿಸಲಾಯಿತು. ಎರಡನೆಯದು, ಮೆಟ್ರೋಪಾಲಿಟನ್(ಮುಂದುವರೆದ ಬಂಡವಾಳಶಾಹಿ) ದೇಶಗಳು ಬಂಡವಾಳದ ಚಟುವಟಿಕೆಗಳನ್ನು ಮೂರನೆಯ ಜಗತ್ತಿನ ದೇಶಗಳಿಗೆ ಸ್ಥಳಾಂತರಿಸಲು ಸಿದ್ಧವಾಗಿವೆ ಎಂದು ತೋರಿಸಿಕೊಂಡಿರುವುದು; ಇಂತಹ ಸ್ಥಳಾಂತರವು ಬಂಡವಾಳಶಾಹಿಯನ್ನು ಮೂರನೆಯ ಜಗತ್ತಿನ ದೇಶಗಳಿಗೆ ಹರಡುತ್ತದೆ ಮತ್ತು ಈ ಮೂಲಕ ಎರಡು ಜಗತ್ತುಗಳ ನಡುವಿನ ಇಬ್ಬಾಗವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ ಎಂದು ವಾದಿಸಲಾಯಿತು. ಇಲ್ಲಿ, ಈ ಮೆಟ್ರೋಪಾಲಿಟನ್ ದೇಶಗಳು ತಮ್ಮ ದೇಶೀಯ ಅರ್ಥವ್ಯವಸ್ಥೆಗಳಲ್ಲಿ ನಿರುದ್ಯೋಗವನ್ನು ಉಂಟುಮಾಡುವ ಈ ಸ್ಥಳಾಂತರವನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳದೇ ಸದಾ ಸುಮ್ಮನೇ ಕುಳಿತುಕೊಳ್ಳ್ಳುತ್ತವೆ ಎಂದು ಊಹಿಸಿಕೊಂಡAತೆ ಕಾಣುತ್ತದೆ.
ಕೈತಿರುಚುವ ಶಕ್ತಿ ಒದಗಿಸಿದ ನವ-ಉದಾರವಾದ
ಈ ಎಲ್ಲ ಅಂಶಗಳೂ ವಾದವನ್ನು ‘ನಿಯಂತ್ರಣ’ ನೀತಿಗಳ ವಿರುದ್ಧವಾಗಿ ವಾಲುವಂತೆ ಮಾಡಿದವು. ನಿಜ, ಇದರ ಭೌತಿಕ ಆಧಾರವಿದ್ದದ್ದು ದೊಡ್ಡ ಬಂಡವಳಿಗರ ವರ್ಗಹಿತಾಸಕ್ತಿಯಲ್ಲಿ; ಈ ವರ್ಗ ಜಾಗತಿಕವಾಗುವುದರಿಂದ ತಮ್ಮ ಭಾಗ್ಯ ಅರಳುತ್ತದೆ ಎಂಬ ಆಕರ್ಷಣೆಗೊಳಗಾಯಿತು. ಇದರೊಂದಿಗೆ, ನಗರಗಳ ಮೇಲ್ಮಧ್ಯಮ ವರ್ಗದ ಹಿತಾಸಕ್ತಿಗಳು ಸೇರಿಕೊಂಡವು. ಏಕೆಂದರೆ ಇವರ ಮಕ್ಕಳು ಹೆಚ್ಚೆಚ್ಚಾಗಿ ದೇಶದಿಂದ ಹೊರಹೋಗಿ ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ನೆಲೆಗೊಳ್ಳಲಾರಂಭಿಸಿದರು. ಇವರು ತಮಗೆ ತಮ್ಮ ದೇಶದ ಕಾರ್ಮಿಕರು ಮತ್ತು ರೈತರಿಗಿಂತ ಹೆಚ್ಚಾಗಿ ಆ ಮೆಟ್ರೋಪಾಲಿಟನ್ ದೇಶಗಳೇ ನಿಕಟವಾಗಿವೆ ಎಂದು ಕಾಣಲಾರಂಭಿಸಿದರು ಮತ್ತು ಈಗಲೂ ಕಾಣುತ್ತಿದ್ದಾರೆ.

ಈ ಮಧ್ಯೆ, ವಿಶೇಷವಾಗಿ ತೈಲ ಆಘಾತಗಳ ನಂತರ ಮೂರನೆಯ ಜಗತ್ತಿನ ಹಲವಾರು ದೇಶಗಳು ಎದುರಿಸಿದ ಪಾವತಿ ಶೇಷದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಸಕ್ರಿಯಗೊಂಡವು. ‘ನಿಯಂತ್ರಣ’ ನೀತಿಗಳ ಆಳ್ವಿಕೆಯನ್ನು ಒಳಗಿನಿಂದಲೇ ಬುಡಮೇಲುಗೊಳಿಸುವ ಉದ್ದೇಶದಿಂದ ಅವು ತಮ್ಮ ಉದ್ಯೋಗಿಗಳನ್ನು ಮೂರನೆಯ ಜಗತ್ತಿನ ಹಲವಾರು ದೇಶಗಳ ಹಣಕಾಸು ಸಚಿವಾಲಯಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಆಯಕಟ್ಟಿನ ಸ್ಥಾನಗಳಲ್ಲಿ, ಆರಂಭಿಕವಾಗಿ ಆಫ್ರಿಕಾದ ದೇಶಗಳಲ್ಲಿ ಮತ್ತು ನಂತರ ಉಳಿದ ದೇಶಗಳಲ್ಲಿ, ಇರಿಸಿದವು. ಈ ಕ್ರಮವನ್ನು ಒಪ್ಪಿಕೊಳ್ಳಲು ಭಾರತವು ಅನೇಕ ವರ್ಷಗಳ ಕಾಲ ಹಿಂದೇಟು ಹಾಕಿತು. ಅಂತಿಮವಾಗಿ ಅದೂ ಸಹ 1991ರಲ್ಲಿ ಒಪ್ಪಿಕೊಂಡಿತು.
ನಂತರ ಜಾರಿಗೆ ಬಂದ ನವ ಉದಾರವಾದಿ ಆಳ್ವಿಕೆಯಲ್ಲಿ ಏನೆಲ್ಲ ಸಂಭವಿಸಿತು ಎಂಬುದನ್ನು ವಿವರಿಸುವುದು ಇಲ್ಲಿ ಅಗತ್ಯವಿಲ್ಲ. ಆದರೆ ಈಗ, ಮೂರನೆಯ ಜಗತ್ತಿನ ದೇಶಗಳಿಗೆ ಮೆಟ್ರೋಪಾಲಿಟನ್ ದೇಶಗಳ ಮಾರುಕಟ್ಟೆಗಳ ಅವಲಂಬನೆಯ ಆಮಿಷವೊಡ್ಡಿದ ಮತ್ತು “ನಿಯಮ-ಆಧಾರಿತ” ಅಂತಾರಾಷ್ಟ್ರೀಯ ವ್ಯವಸ್ಥೆಯ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡಿದ ಸಾಮ್ರಾಜ್ಯಶಾಹಿಯು ಈಗ ಸುಂಕಗಳನ್ನು ಹೇರುವ ಮೂಲಕ ಈ ದೇಶಗಳು ತನ್ನ ಆದೇಶವನ್ನು ಪಾಲಿಸುವಂತೆ ಕೈತಿರುಚಬಲ್ಲದಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಲಕ್ಷಾಂತರ ಮಹಿಳಾ ಕಾರ್ಮಿಕರೂ ಸೇರಿದಂತೆ ಲಕ್ಷ ಲಕ್ಷಗಟ್ಟಲೆ ಮೂರನೆಯ ಜಗತ್ತಿನ ಅದೃಷ್ಟಹೀನ ರೈತರಿಗೆ ಮತ್ತು ಕಾರ್ಮಿಕರಿಗೆ ದುರ್ಗತಿಯನ್ನುಂಟುಮಾಡುವ ಬೆದರಿಕೆಯನ್ನು ಅದು ಹಾಕಬಲ್ಲದು. ಈ ದುರ್ಗತಿಯು ಈಗಾಗಲೇ ಭಾರತದ ಹತ್ತಿ ರೈತರ ಬೆನ್ನು ಹತ್ತಿದೆ ಎಂಬುದು ಬೃಹತ್ ಕೃಷಿ ಸಬ್ಸಿಡಿಗಳನ್ನು ಬಳಸಿಕೊಂಡು ಬೆಳೆದ ಅಮೆರಿಕದ ಹತ್ತಿಯ ಮೇಲೆ ಭಾರತವು ವಿಧಿಸುತ್ತಿದ್ದ ಶೇ. 11ರ ಆಮದು ಸುಂಕವನ್ನು ಮೋದಿ ಸರ್ಕಾರವು ಇತ್ತೀಚೆಗೆ ತೆಗೆದುಹಾಕಿದ ಕ್ರಮದ ಮೂಲಕ ಸ್ಪಷ್ಟವಾಗಿದೆ. ಭಾರತದ ಜವಳಿ ಮತ್ತು ಉಡುಪು ರಫ್ತುಗಳ ಮೇಲೆ ಶೇ. 50ರಷ್ಟು ಅತಿ ಹೆಚ್ಚಿನ ಸುಂಕವನ್ನು ಹೇರುವ ಬೆದರಿಕೆಯು ಭಾರತದ ಮಟ್ಟಿಗೆ ಅಮೆರಿಕದ ಮಾರುಕಟ್ಟೆಯು ಮುಚ್ಚಿಹೋಗುವ ಮೂಲಕ ರೈತರ ಆತ್ಮಹತ್ಯೆಗಳು ಹೆಚ್ಚುತ್ತವೆ ಮತ್ತು ಲಕ್ಷಾಂತರ ಜವಳಿ ಕಾರ್ಮಿಕರು ಬೀದಿಗೆ ಬೀಳುತ್ತಾರೆ.
ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಮೂರನೇ ಜಗತ್ತಿನ ದೇಶವೊಂದು ಸಾಮ್ರಾಜ್ಯಶಾಹಿ ಆದೇಶವನ್ನು ಧಿಕ್ಕರಿಸುವ ಧೈರ್ಯ ಮಾಡಿದರೆ, ಗಾಜಾದಲ್ಲಿ ಚಿತ್ರ-ವಿಚಿತ್ರ ರೂಪದಲ್ಲಿ ಏನು ನಡೆಯುತ್ತಿದೆಯೋ ಅದನ್ನು ಬೇರೆಡೆಯಲ್ಲಿಯೂ ಸಹ ಆಗು ಮಾಡಬಹುದು. ಅದನ್ನು ಮಿಲಿಟರಿ ಹಸ್ತಕ್ಷೇಪದ ಮೂಲಕವೇ ಸಾಧಿಸಬೇಕು ಎಂದೇನಿಲ್ಲ. ಸುಂಕ-ಭಯೋತ್ಪಾದನೆಯ ಮೂಲಕವೂ ಅದನ್ನು ಸಾಧಿಸಬಹುದು ಎಂಬುದನ್ನು ಸಾಮ್ರಾಜ್ಯಶಾಹಿಯು ಮುಯ್ಯಿ ತೀರಿಸುವ ರೀತಿಯಲ್ಲಿ ಎತ್ತಿ ತೋರಿಸುತ್ತಿದೆ.
ಈ ಸುಂಕಗಳಿಂದ ಕಲಿಯಬೇಕಾದ ಪಾಠವೆಂದರೆ, ಪ್ರಧಾನವಾಗಿ ಆಂತರಿಕ-ಮಾರುಕಟ್ಟೆ ಆಧರಿತ, ಸ್ವಾವಲಂಬನೆಯ, ನಿಯಂತ್ರಣ ನೀತಿಗಳ ಅಭಿವೃದ್ಧಿ ಕಾರ್ಯತಂತ್ರವು ವಸಾಹತೀಕರಣದಿಂದ ಹೊರಬರುವಲ್ಲಿ ಒಂದು ಅಗತ್ಯ ಪೂರಕ ಅಂಶವಾಗುತ್ತದೆ ಎಂಬುದು. ಭಾರತ ಮತ್ತು ಮೂರನೇ ಜಗತ್ತಿನ ಇತರ ದೇಶಗಳು ವಸಾಹತುಶಾಹಿಯಿಂದ ವಿಮೋಚನೆಗೊಂಡ ತಕ್ಷಣವೇ ಅರಿತುಕೊಂಡಿದ್ದವು. “ಬಹಿರ್ಮುಖಿ”ಯಾಗಿ ಕಾಣುವ ಅಭಿವೃದ್ಧಿ ಕಾರ್ಯತಂತ್ರವು, , ಮೂರನೇ ಜಗತ್ತಿನ ದೇಶವೊಂದನ್ನು ಸಾಮ್ರಾಜ್ಯಶಾಹಿಯ ‘ಹುಕುಂ’ಗಳಿಗೆ ಒಳಪಡಿಸುತ್ತದೆ ಏಕೆಂದರೆ ಅದು ಸಾಮ್ರಾಜ್ಯಶಾಹಿ ದೇಶಗಳ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ.
ಇಲ್ಲಿ, ದೇಶವು ತನ್ನ ಆಹಾರ ಸ್ವಾವಲಂಬನೆಯನ್ನು ತ್ಯಜಿಸುವುದನ್ನು ಮತ್ತು ಅಮೆರಿಕದಿಂದ ಆಹಾರ ಧಾನ್ಯಗಳ ಆಮದಿನ ಮೇಲೆ ಅವಲಂಬಿತವಾಗುವುದನ್ನು ತಡೆದು ನಿಲ್ಲಿಸಿದ ಶ್ರೇಯಸ್ಸು ವರ್ಷಪೂರ್ತಿ ನಡೆದ ರೈತರ ಆಂದೋಲನಕ್ಕೆ ಸಲ್ಲುತ್ತದೆ. ಈ ಆಂದೋಲನಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕಾಗುತ್ತದೆ. ಏಕೆಂದರೆ, ಆಹಾರ ಧಾನ್ಯಗಳಿಗಾಗಿ ಅಮೆರಿಕದ ಆಮದುಗಳ ಮೇಲೆ ಅವಲಂಬನೆಯು ಭಾರತದ ಮೇಲೆ ತನ್ನ ಹತೋಟಿಯನ್ನು ಸಾಧಿಸುವಲ್ಲಿ ಸಾಮ್ರಾಜ್ಯಶಾಹಿಗೆ ಇನ್ನೂ ಒಂದು ಹೆಚ್ಚು ಶಕ್ತಿಶಾಲಿಯಾದ ಆಯುಧವಾಗುತ್ತಿತ್ತು. ಗಾಜಾದಲ್ಲಿ ನರಮೇಧದ ಒಂದು ಸಂಚನ್ನು ರೂಪಿಸಬಲ್ಲ ಮೆಟ್ರೋಪಾಲಿಟನ್ ಶಕ್ತಿಗಳು ತಮ್ಮ ಆಶಯಗಳಿಗೆ ವಿರುದ್ಧವಾಗಿ ವರ್ತಿಸಿದರೆ, ಭಾರತದಂತಹ ಮೂರನೇ ಜಗತ್ತಿನ ದೇಶಕ್ಕೆ ಆಹಾರ ಆಮದುಗಳನ್ನು ನಿರಾಕರಿಸುವ ಮೂಲಕ ಆಹಾರದ ಕೊರತೆಯನ್ನು ಉಂಟುಮಾಡಲು ಕೊಂಚವೂ ಅಳುಕುವುದಿಲ್ಲ.
ಅಭಿವೃದ್ಧಿ ಕಾರ್ಯತಂತ್ರದಲ್ಲಿ ಬದಲಾವಣೆ ಅಗತ್ಯ
ಆದ್ದರಿಂದ, ಭಾರತದಂತಹ ಒಂದು ದೇಶವು ತನ್ನ ಅಭಿವೃದ್ಧಿ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳುವುದು ಅಗತ್ಯವಾಗುತ್ತದೆ. ಈ ಬದಲಾವಣೆಯನ್ನು ಹಳೆಯ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಿಗೆ ಮರಳುವುದು ಎಂದು ಅರ್ಥೈಸಿಕೊಳ್ಳಬಾರದು. ಬದಲಿಗೆ, ಕೃಷಿ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ (ಭೂ-ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ), ದುಡಿಯುವ ಜನತೆಯ ಪರವಾಗಿ ವರಮಾನಗಳ ಮರುಹಂಚಿಕೆಯ ಮೂಲಕ ಮತ್ತು ಕಲ್ಯಾಣ ಪ್ರಭುತ್ವ ಕ್ರಮಗಳ ಭಾಗವಾಗಿ ಸಾಮಾಜಿಕ ವೇತನವನ್ನು ಹೆಚ್ಚಿಸುವ ಮೂಲಕ ಆಂತರಿಕ ಮಾರುಕಟ್ಟೆಯ ಗಾತ್ರವನ್ನು ಹೆಚ್ಚಿಸುವ ಒಂದು ‘ನಿಯಂತ್ರಣ’ ನೀತಿಗಳ ಕಾರ್ಯತಂತ್ರ ಎಂದು ಅರ್ಥೈಸಿಕೊಳ್ಳಬೇಕು.
ಈ ಕಾರ್ಯತಂತ್ರವನ್ನು ಆಗಸ್ಟ್ 15ರಂದು ಪ್ರಕಟಿಸಲಾದ ಸರಕು ಮತ್ತು ಸೇವಾ ತೆರಿಗೆ ರಿಯಾಯಿತಿಗಳೊಂದಿಗೆ ಮೋದಿ ಸರ್ಕಾರವು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅಸಂಬದ್ಧ ಮಾತಾಗುತ್ತದೆ. ಜಿಎಸ್‌ಟಿ ರಿಯಾಯಿತಿಗಳನ್ನು ಪ್ರಾಥಮಿಕವಾಗಿ ದುಡಿಯುವ ಜನರಿಗೆ ಮಾತ್ರವೇ ಒದಗಿಸಿಲ್ಲ ಮತ್ತು ಈ ರಿಯಾಯ್ತಿಗಳನ್ನು ಶ್ರೀಮಂತರ ಮೇಲೆ ತೆರಿಗೆ ಹೇರುವ ಮೂಲಕ ಸರಿದೂಗಿಸುತ್ತಿಲ್ಲ. ಈ ರಿಯಾಯಿತಿಗಳು ನಾನು ಹಿಂದಿನ ಲೇಖನದಲ್ಲಿ (ಸಂಚಿಕೆ 36 ನೋಡಿ) ಸೂಚಿಸಿದ್ದಕ್ಕಿಂತಲೂ ವಾಸ್ತವಿಕವಾಗಿ ಸ್ವಲ್ಪ ದೊಡ್ಡದಾಗಿವೆ (ಜಿಡಿಪಿಯ ಶೇ. 0.1 ರ ಬದಲು ಶೇ. 0.6 ಮತ್ತು 0.32 ಲಕ್ಷ ಕೋಟಿಗಳ ವೆಚ್ಚದ ಬದಲು 1.95 ಲಕ್ಷ ಕೋಟಿ ರೂ). ಆದರೂ, ಅವು ಇನ್ನೂ ಅತೀ ಅಲ್ಪವೇ. ಕಲ್ಯಾಣ ಪ್ರಭುತ್ವ ಕ್ರಮಗಳನ್ನು ಮುಂದಿಟ್ಟುಕೊಳ್ಳುವ ಒಂದು ಪರ್ಯಾಯ ಅಭಿವೃದ್ಧಿ ದಿಕ್ಪಥವನ್ನು ಕಾರ್ಯಗತಗೊಳಿಸಲು ಸರ್ಕಾರವು ಜಿಡಿಪಿಯ ಕನಿಷ್ಠ ಶೇ. 10ರಷ್ಟನ್ನಾದರೂ ಖರ್ಚು ಮಾಡಬೇಕಾಗುತ್ತದೆ.
ಜೊತೆಗೆ, ಟ್ರಂಪ್ ಹೇರಿದ ಸುಂಕಗಳಿಂದ ತೀವ್ರವಾಗಿ ತೊಂದರೆಗೊಳಗಾಗಲಿರುವ ಕಾರ್ಮಿಕರ ಸಂಕಷ್ಟಗಳನ್ನು ನಿವಾರಿಸಲು ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಾಮ್ರಾಜ್ಯಶಾಹಿಯು ಸುಂಕಗಳನ್ನು ಅಸ್ತçವಾಗಿಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಿದರೆ, ಸುಂಕಗಳು ಉಂಟುಮಾಡುವ ತೊಂದರೆಗಳನ್ನು ನಿವಾರಿಸಲು ರಫ್ತು ಸಬ್ಸಿಡಿಗಳಂತಹ ಕ್ರಮಗಳಷ್ಟೇ ಸಾಕಾಗುವುದಿಲ್ಲ. ಏಕೆಂದರೆ ಸುಂಕಗಳನ್ನು ಟ್ರಂಪ್ ಮತ್ತಷ್ಟು ಏರಿಸುತ್ತಾರೆ. ಆದಾಗ್ಯೂ, ಯುಎಸ್ ವಿರುದ್ಧವಾಗಿ ಚೀನಾ ಮತ್ತು ಬ್ರೆಜಿಲ್ ತೆಗೆದುಕೊಂಡ ಪ್ರತೀಕಾರದ ಸುಂಕಗಳ ಜೊತೆಗೆ ರಫ್ತು ಸಬ್ಸಿಡಿಗಳಂತಹ ಕ್ರಮಗಳನ್ನೂ ಸಹ ಪ್ರಯತ್ನಿಸಬಹುದು. ಅದಲ್ಲದೆ, ಸುಂಕಗಳಿಗೆ ಬಲಿಪಶುಗಳಾಗುವ ಸಾಧ್ಯತೆಯಿರುವ ಕೆಲಸಗಾರರಿಗೆ ಪರ್ಯಾಯ ಉದ್ಯೋಗಗಳನ್ನು ಹುಡುಕುವುದರ ಜೊತೆಗೆ ಪರ್ಯಾಯ ರಫ್ತು ಮಾರುಕಟ್ಟೆಗಳನ್ನು ಹುಡುಕುವ ಪ್ರಯತ್ನಗಳೂ ಸಹ ಕ್ರಿಯಾಶೀಲವಾಗಬೇಕು.
ಈ ನಿಟ್ಟಿನಲ್ಲಿ ಮೋದಿ ಸರ್ಕಾರವು ಏನನ್ನೂ ಮಾಡುತ್ತಿಲ್ಲ ಮಾತ್ರವಲ್ಲ, ವಾಸ್ತವವಾಗಿ ಅಮೆರಿಕವನ್ನು ಸಂತುಷ್ಟಗೊಳಿಸಲು ಭಾರತದ ರೈತರಿಗೆ ಹಾನಿಯನ್ನುಂಟುಮಾಡುವ ಅಮೆರಿಕದ ಸುಂಕ ರಹಿತ ಹತ್ತಿ ಆಮದುಗಳಿಗೆ ಅನುಮತಿ ನೀಡುವಂತಹ ಕೆಲವು ರಿಯಾಯಿತಿಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಅದಕ್ಕಿಂತಲೂ ಮಿಗಿಲಾಗಿ, ಗ್ರಾಮೀಣ ಭಾರತದಲ್ಲಿ ಸಂಕಷ್ಟದಲ್ಲಿರುವವರಿಗೆ ಒಂದು ಆಸರೆಯಾಗಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚವನ್ನು ಇಂತಹ ಒಂದು ವಿಷಮ ಪರಿಸ್ಥಿತಿಯಲ್ಲೂ ಕಡಿತಗೊಳಿಸುತ್ತಿದೆ.
ಇದನ್ನೂ ನೋಡಿ: ಬಿಹಾರದಲ್ಲಿ ಸರ್ (SIR) ಸೃಷ್ಟಿಸಿದ ಸುಳ್ಳು ಕಥೆಗಳು – ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
