ರಾಷ್ಟ್ರೀಯ ಲೋಕ ಅದಾಲತ್‌; ದಾಖಲೆಯ 14 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥ

ಬೆಂಗಳೂರು: ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ನವೆಂಬರ್‌ 12ರಂದು ನಡೆಸಲಾದ ರಾಷ್ಟ್ರೀಯ ಲೋಕ ಅದಾಲತ್‌ ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 14.77 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‌ಎಲ್‌ಎಸ್‌ಎ)ದ ವತಿಯಿಂದ ಹಮ್ಮಿಕೊಂಡಿದ್ದ ಲೋಕ ಅದಾಲತ್‌ ನಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಒಂದೇ ದಿನದಲ್ಲಿ ಸೌಹಾರ್ದಯುತವಾಗಿ ಅತಿ ಹೆಚ್ಚು ಪ್ರಕರಣಗಳ ಇತ್ಯರ್ಥಗೊಂಡಿದ್ದು, ಇದು ಈವರೆಗಿನ ಲೋಕ ಅದಾಲತ್‌ಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆಯಲ್ಲಿ ಇದು ಹೊಸ ದಾಖಲೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೆಎಸ್‌ಎಲ್‌ಎಸ್‌ಎ ಕಾರ್ಯಾಧ್ಯಕ್ಷ ನ್ಯಾಯಮೂರ್ತಿ ಬಿ.ವೀರಪ್ಪ, ಲೋಕ ಅದಾಲತ್‌ನಲ್ಲಿ 13,00,784 ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು 1,75,900 ಬಾಕಿ ಪ್ರಕರಣಗಳು ಸೇರಿದಂತೆ ಒಟ್ಟು 14,77,285 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಎಲ್ಲಾ ಪ್ರಕರಣಗಳಿಗೆ ಪರಿಹಾರವಾಗಿ 1,282 ಕೋಟಿ ರೂಪಾಯಿ ನೀಡಲಾಗಿದೆ ಎಂದರು.

‘ಹೈಕೋರ್ಟ್‌ನ 8 ಪೀಠಗಳು ಸೇರಿ ರಾಜ್ಯದಾದ್ಯಂತ 1,021 ಪೀಠಗಳು ಅದಾಲತ್ ನಡೆಸಿ ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 1,76,501 ಹಾಗೂ 13,00,784 ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಸಾರ್ವಜನಿಕರಿಗೆ ₹1,282 ಕೋಟಿ ಪರಿಹಾರ ಕೊಡಿಸಲಾಗಿದೆ’ ಎಂದರು.

‘ರಾಜಿ ಸಂಧಾನದ ಮೂಲಕ 10,994 ಚೆಕ್‌ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು ₹ 328.94 ಕೋಟಿ ಪರಿಹಾರ ಕೊಡಿಸಲಾಗಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವೊಂದರಲ್ಲಿ ₹32 ಕೋಟಿ ಪರಿಹಾರ ಮೊತ್ತದೊಂದಿಗೆ ಪ್ರಕರಣ ಇತ್ಯರ್ಥಪಡಿಸಲಾಗಿದೆ’ ಎಂದು ತಿಳಿಸಿದರು.

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾವಿರ ಕೋಟಿ ರೂ. ಗಳಿಗೂ ಅಧಿಕ ಬಾಕಿ ವಸೂಲಾತಿ ಪ್ರಕರಣಗಳ ಬಗ್ಗೆ ಲೋಕ ಅದಾಲತ್‌ ನೋಟಿಸು ನೀಡಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 4,18,775 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, 23,89,38,021 ರೂ. ದಂಡ ಸಂಗ್ರಹಿಸಲಾಗಿದೆ.

ಲೋಕ ಅದಾಲತ್‌ನಲ್ಲಿ ಒಟ್ಟು 3,384 ಮೋಟಾರು ಅಪಘಾತ ಪ್ರಕರಣಗಳನ್ನು ಪರಿಹಾರದೊಂದಿಗೆ ಇತ್ಯರ್ಥ ಪಡಿಸಲಾಗಿದೆ. ಕೊಪ್ಪಳದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದಲ್ಲಿ (ಎಂಎಸಿಟಿ) ಬಾಕಿ ಇದ್ದ ಪ್ರಕರಣವೊಂದರಲ್ಲಿ 55 ಲಕ್ಷ ರೂ. ಪರಿಹಾರ ಪಾವತಿಸಿ ಇತ್ಯರ್ಥಪಡಿಸಲಾಗಿದ್ದರೆ, ಕೋಲಾರದ ಮುಳಬಾಗಿಲು ತಾಲೂಕಿನ ಎಂಎಸಿಟಿಯಲ್ಲಿನ ಪ್ರಕರಣವನ್ನು 14 ಲಕ್ಷ ರೂ. ಪರಿಹಾರದೊಂದಿಗೆ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

ಲೋಕ ಅದಾಲತ್‌ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ 10,994 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 328,94,26,020 ರೂ. ಪರಿಹಾರ ಕೊಡಿಸಲಾಗಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಬಾಕಿ ಇದ್ದ ಒಂದು ಪ್ರಕರಣವನ್ನು 32 ಕೋಟಿ ರೂ ಪರಿಹಾರ ಮೊತ್ತದೊಂದಿಗೆ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಸಂಬಂಧಿಸಿದ ಒಟ್ಟು 175 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 11 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗಿದೆ. ಜತೆಗೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಬಾಕಿ ಉಳಿದಿರುವ 123 ಪ್ರಕರಣಗಳ ವಿಲೇವಾರಿಯೊಂದಿಗೆ 4 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *