ಸೋರುತಿಹುದು ಮೆಟ್ರೋ ಮಾಳಿಗೆ : ವಿಡಿಯೋ ವೈರಲ್

ಬೆಂಗಳೂರು: ಭಾನುವಾರ ಸಂಜೆ ಕೇವಲ 20 ನಿಮಿಷಗಳ ಕಾಲ ಸುರಿದ ಭಾರೀ ಮಳೆಗೆ ವೈಟ್‌ಫೀಲ್ಡ್ ಕಾಡುಗೋಡಿ ಮೆಟ್ರೋ ನಿಲ್ದಾಣದ ಚಾವಣಿಯಿಂದ ಮಳೆ ನೀರು ಸೋರಿಕೆಯಾಗಿ, ನಿಲ್ದಾಣದಲ್ಲಿ ನೀರು ತುಂಬಿಕೊಂಡಿದ್ದು ಕಂಡು ಬಂದಿತು.

ಕಾಡುಗೋಡಿ-ಕೆಆರ್ ಪುರ ಮೆಟ್ರೋ ಮಾರ್ಗಕ್ಕೆ ಮಾರ್ಚ್ 25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ನಿಲ್ದಾಣ ಉದ್ಘಾಟನೆಗೊಂಡು ಕೆಲವೇ ದಿನಗಳು ಕಳೆದಿದ್ದು, ಈ ನಡುವಲ್ಲೇ ಮೆಟ್ರೋ ನಿಲ್ದಾಣದ ಚಾವಣಿಯಿಂದ ಮಳೆ ನೀರು ಸೋರಿಕೆಯಾಗಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಮಳೆಯ ಪರಿಣಾಮ ಮೆಟ್ರೋ ನಿಲ್ದಾಣದ ವಿವಿಧ ಭಾಗಗಳಲ್ಲಿ ನೀರು ತುಂಬಿಕೊಂಡಿರುವುದು ಹಾಗೂ ಪ್ರಯಾಣಿಕರ ಸಂಕಷ್ಟ ಅನುಭವಿಸುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳನ್ನು ‘ವೈಟ್‌ಫೀಲ್ಡ್ ರೈಸಿಂಗ್’ ಗುಂಪು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದು ‘ವೈಟ್‌ಫೀಲ್ಡ್ ರೈಸಿಂಗ್’ ಗುಂಪಿನ ಸದಸ್ಯರೊಬ್ಬರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಂಜೆ 5.35 ರ ಸುಮಾರಿಗೆ ನಲ್ಲೂರಹಳ್ಳಿಯಲ್ಲಿ ಮೆಟ್ರೋ ರೈಲು ಹತ್ತಿದ್ದೆ. ರೈಲು ಹತ್ತಿದ ಕೆಲವೇ ನಿಮಿಷಗಳಲ್ಲಿ ಮಳೆ ಆರಂಭವಾಗಿತ್ತು. ವೈಟ್‌ಫೀಲ್ಡ್ ಕಾಡುಗೋಡಿಗೆ ಸಂಜೆ 5.43 ಕ್ಕೆ ತಲುಪಿದ್ದೆ. ಈ ವೇಳೆ ಮಹಿಳೆಯೊಬ್ಬರು ಪ್ಲಾಟ್‌ಫಾರ್ಮ್ ನೆಲವನ್ನು ಒರೆಸುತ್ತಿರುವುದು ಕಂಡು ಬಂದಿತ್ತು. ಈ ವೇಳೆ ಮಳೆ ನೀರು ಮೆಟ್ರೋ ನಿಲ್ದಾಣದಲ್ಲಿ ತುಂಬಿರುವುದು ನನ್ನ ಅರಿವಿಗೆ ಬಂದಿತ್ತು. ನಡೆದುಕೊಂಡು ಹೋಗುತ್ತಿರುವಾದ ನಿಲ್ದಾಣದ ಮೇಲ್ಚಾವಣಿಯಿಂದಲೂ ಮಳೆ ನೀರು ಬೀಳುತ್ತಿರುವುದು ಕಂಡು ಬಂದಿತ್ತು ಎಂದು ಹೇಳಿದ್ದಾರೆ.

ಈಗಲೇ ಪರಿಸ್ಥಿತಿ ಹೀಗಿದೆ ಎಂದರೆ, ಮುಂಬರುವ ಮಾನ್ಸೂನ್ ನಲ್ಲಿ ಪರಿಸ್ಥಿತಿ ಹೇಗಾಗಬೇಕು ಎಂಬುದರ ಕುರಿತು ಜನತೆ ಚರ್ಚೆಗಳನ್ನು ಆರಂಭಿಸಿದ್ದಾರೆ. ಕಾಡುಗೋಡಿಯಲ್ಲಿ ಭಾನುವಾರ 20 ನಿಮಿಷಗಳಲ್ಲಿ 27.5 ಮಿ.ಮೀ (2.7 ಸೆಂ.ಮೀ) ಮಳೆ ದಾಖಲಾಗಿದೆ ಎಂದು ಖಾಸಗಿ ಹವಾಮಾನ ಮುನ್ಸೂಚಕ ಆದರ್ಶಗೌಡ ಅವರು ಮಾಹಿತಿ ನೀಡಿದ್ದಾರೆ.

ಕನಿಷ್ಠ 50 ಮಿಮೀ ಮಳೆಯಾಗದ ಹೊರತು ಅದನ್ನು ಭಾರೀ ಮಳೆ ಎಂದು ಕರೆಯಲಾಗುವುದಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಕಡಿಮೆಯಾದರೂ ಕಾಡುಗೋಡಿಯಲ್ಲಿ ಮಾತ್ರ ದಿಢೀರ್ ಮಳೆಯಾಗಿತ್ತು, ವರ್ತೂರಿನಲ್ಲಿ ಸುಮಾರು 6 ಮಿಮೀ ಮಳೆಯಾಗಿದೆ ಎಂದು ಹೇಳಿದ್ದಾರೆ. ಈ ನಡುವೆ ಮೆಟ್ರೋ ನಿಲ್ದಾಣದಲ್ಲಿ ಮಳೆ ನೀರು ಸೋರಿಕೆ ಕುರಿತ ಪ್ರಶ್ನೆಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.

 

Donate Janashakthi Media

Leave a Reply

Your email address will not be published. Required fields are marked *