ಬೆಂಗಳೂರು – ಬಾಕಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಪ್ರಣಾಳಿಕೆ, ಅತೃಪ್ತರ ಸಂಧಾನ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಚರ್ಚೆ ನಡೆಯಿತು.
ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಬೆಳಗ್ಗೆ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಮೀರ್ ಅಹ್ಮದ್‍ಖಾನ್ ಸೇರಿದಂತೆ ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ಬಾಕಿ ಇರುವ 14 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಇಂದು ಚರ್ಚೆ ನಡೆಸಲಾಗಿದೆ. ಅದರಲ್ಲಿ ನಾಲ್ಕೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವ ಕಡೆಗೂ ಚರ್ಚೆ ನಡೆಸಲಾಗಿದೆ. ಪುಲಕೇಶಿನಗರ ಕ್ಷೇತ್ರಕ್ಕೆ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದ್ದಾರೆ. ಸಭೆಗೂ ಮುನ್ನಾ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ರಹಸ್ಯವಾಗಿ ಸಮಾಲೋಚನೆ ನಡೆಸಿರುವ ಸಿದ್ದರಾಮಯ್ಯ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವುದರಿಂದ ತಪ್ಪು ಸಂದೇಶ ರವಾನೆಯಾಗಲಿದೆ. ಈ ವಿಷಯವಾಗಿ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದೇ ರೀತಿ ಹರಿಹರ ಕ್ಷೇತ್ರದ ರಾಮಪ್ಪ, ಲಿಂಗಸೂರಿನ ಡಿ.ಎಸ್.ಹೊಳಗೇರಿ, ಶಿಡ್ಲಘಟ್ಟದ ವಿ.ಮುನಿಯಪ್ಪ ಅವರಿಗೂ ಟಿಕೆಟ್ ನೀಡಬೇಕಾಗುತ್ತದೆ. ಇಲ್ಲವಾದರೆ ಕಾಂಗ್ರೆಸ್‍ನಲ್ಲಿ ಶಾಸಕರು ಸರಿಯಾಗಿ ಕೆಲಸ ಮಾಡಿಲ್ಲ, ಅದಕ್ಕಾಗಿ ಟಿಕೆಟ್ ನಿರಾಕರಿಸಲಾಗಿದೆ ಎಂದು ಬಿಂಬಿಸಲಾಗುತ್ತದೆ. ಅದು ಆಗಬಾರದು. ಈವರೆಗೂ ಎಲ್ಲಾ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಉಳಿದ ನಾಲ್ವರಿಗೂ ಟಿಕೆಟ್ ನೀಡುವುದು ಸೂಕ್ತ ಎಂಬ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಆಪರೇಷನ್ ಹಸ್ತದ ಮೂಲಕ ತೆನೆ, ಕಮಲದ ನಾಯಕರಿಗೆ ಗಾಳ ಹಾಕಿದ ಕಾಂಗ್ರೆಸ್
ಆದರೆ ಸಭೆಯಲ್ಲಿ ಪುಲಕೇಶಿನಗರ, ಹರಿಹರದ ಟಿಕೆಟ್ ವಿಷಯವಾಗಿ ಕಾವೇರಿದ್ದ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್‍ಖಾನ್ ಸಭೆಯಿಂದ ಹೊರ ನಡೆದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಆಪ್ತ ಅಖಂಡರಿಗೆ ನಾಲ್ಕನೆ ಪಟ್ಟಿಯಲ್ಲೂ ಟಿಕೆಟ್ ಅನುಮಾನ ಎಂದು ಹೇಳಲಾಗಿದೆ. ಬಹುತೇಕ ಬಿಬಿಎಂಪಿ ಸದಸ್ಯ ಆನಂದ್ ಅಥವಾ ಪ್ರಸನ್ನಕುಮಾರ್ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ನಡುವೆ ಡಿ.ಕೆ.ಶಿವಕುಮಾರ್ ಆಪ್ತ ಸಂಪತ್ ರಾಜ್ ಪ್ರಬಲ ಲಾಬಿ ನಡೆಸುತ್ತಿದ್ದು, ಅವರಿಗೆ ಪುಲಕೇಶಿನಗರದ ಬದಲಿಗೆ ಸಿ.ವಿ.ರಾಮನ್‍ನಗರ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆಗಳಿವೆ.
ಇಂದು ಕಾಂಗ್ರೆಸ್‍ನ ನಾಲ್ಕನೆ ಪಟ್ಟಿ ಬಿಡುಗಡೆಯಾಗಲಿದ್ದು, ಅದರಲ್ಲಿ ನಾಲ್ಕು ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಹೆಸರುಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಉಳಿದವರಿಗೆ ಮೌಕಿಕವಾಗಿ ಸೂಚನೆ ನೀಡಲಿದ್ದು, ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನೂ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಚರ್ಚೆ ನಡೆದ್ದು, ಈವರೆಗೂ ಘೋಷಿಸಲಾಗಿರುವ ನಾಲ್ಕು ಭರವಸೆಗಳ ಜೊತೆಗೆ ಮತ್ತಷ್ಟು ಜನಾಕರ್ಷಣೆಯ ಭರವಸೆಗಳ ಕುರಿತು ಚರ್ಚೆ ನಡೆಸಲಾಗಿದೆ. ನಿರುದ್ಯೋಗ ನಿವಾರಣೆ, ಮೂಲಸೌಕರ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತಿತರ ವಿಷಯಗಳಿಗೆ ಒತ್ತು ನೀಡುವಂತೆ ಹಿರಿಯ ನಾಯಕರು ಸೂಚಿಸಿದ್ದಾರೆ. ಟಿಕೆಟ್ ವಂಚಿತ ಆಕಾಂಕ್ಷಿಗಳ ಬಂಡಾಯವನ್ನು ತಣಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹಿರಿಯ ನಾಯಕರು ತಂಡೋಪ ತಂಡವಾಗಿ ಅತೃಪ್ತರ ಜೊತೆ ಚರ್ಚೆ ನಡೆಸಬೇಕು. ಗರಿಷ್ಠ ಪ್ರಮಾಣದಲ್ಲಿ ಬಂಡಾಯ ಅಭ್ಯರ್ಥಿಗಳ ನಾಮಪತ್ರವನ್ನು ವಾಪಾಸ್ ತೆಗೆಸಬೇಕು. ಇದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಮಾಲೋಚಕರಾಗಬೇಕು ಎಂದು ನಿರ್ಣಯಿಸಲಾಗಿದೆ.