ಎನ್‌ಸಿಇಆರ್‌ಟಿ ‘ಹಗುರ’ಗೊಳಿಸಿದ್ದು ವಿದ್ಯಾರ್ಥಿಗಳ ಪಾಠಗಳ ಹೊರೆಯನ್ನೋ ಅಥವ ಆಳುವವರ ಪಾಪಪ್ರಜ್ಞೆಯ ಹೊರೆಯನ್ನೋ

                                                                                                                         – ವೇದರಾಜ್ ಎನ್.ಕೆ.

“ಹಿಂದೂಗಳು ಪ್ರತೀಕಾರಕ್ಕಿಳಿಯಬೇಕು ಎಂದು ಬಯಸುವವರು, ವಿಶೇಷವಾಗಿ ಮುಸ್ಲಿಮರಿಗೆ ಪಾಕಿಸ್ತಾನ ಇರುವಂತೆ ಭಾರತ ಹಿಂದೂಗಳ ದೇಶವಾಗಬೇಕು ಎನ್ನುವವರು ಇದನ್ನು(ಗಾಂಧೀಜಿ ನಿಲುವನ್ನು) ಇಷ್ಟಪಡಲಿಲ್ಲ. ಅವರು ಗಾಂಧೀಜಿ ಮುಸ್ಲಿಮರು ಮತ್ತು ಪಾಕಿಸ್ತಾನದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಈ ಜನ ತಪ್ಪುದಾರಿಯತ್ತ ನಿರ್ದೇಶಿಸಲ್ಪಟ್ಟವರು ಎಂದು ಗಾಂಧೀಜಿ ಯೋಚಿಸಿದರು. ಭಾರತವನ್ನು ಹಿಂದೂಗಳಿಗೆ ಮಾತ್ರ ಎಂದು ಮಾಡುವ ಯಾವುದೇ ಪ್ರಯತ್ನ ಭಾರತವನ್ನು ಧ್ವಂಸ ಮಾಡುತ್ತದೆ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಹಿಂದೂ-ಮುಸ್ಲಿ ಐಕ್ಯತೆಗೆ ಅವರ ಅಚಲ ಬದ್ಧತೆ ಹಿಂದೂ ಉಗ್ರಗಾಮಿಗಳನ್ನು ಎಷ್ಟೊಂದು ಉದ್ರೇಕಿಸಿತೆಂದರೆ, ಗಾಂಧೀಜಿಯ ಹತ್ಯೆಗೆ ಅವರು ಹಲವು ಪ್ರಯತ್ನಗಳನ್ನು ಮಾಡಿದರು.”

ಇದು ಎನ್‌ಸಿಇಆರ್‌ಟಿ(ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ) ಪ್ರಕಟಿಸಿದ್ದ ೧೨ನೇ ತರಗತಿಯ ರಾಜಕೀಯಶಾಸ್ತ್ರ ಪಠ್ಯದಲ್ಲಿ “ಸ್ವಾತಂತ್ರ‍್ರ್ಯಾ ನಂತರದ ಭಾರತದಲ್ಲಿ ರಾಜಕೀಯ” ಎಂಬ ಅಧ್ಯಾಯದಲ್ಲಿ ಇದ್ದ ವಾಕ್ಯ. ಈ ಪಠ್ಯಪುಸ್ತಕದ ಈ ವರ್ಷದ ಆವೃತ್ತಿಯಲ್ಲಿ ಇದು ಕಾಣೆಯಾಗಿದೆ. ಅದೇ ಪಠ್ಯಪುಸ್ತಕದಲ್ಲಿ ಕಿತ್ತುಹಾಕಲ್ಪಟ್ಟಿರುವ ಇನ್ನೊಂದು ಪರಿಚ್ಛೇದವನ್ನು ನೋಡಿ: “ಗಾಂಧೀಜಿಯ ಸಾವು ದೇಶದಲ್ಲಿನ ಕೋಮು ಪರಿಸ್ಥಿತಿಯ ಮೇಲೆ ಸುಮಾರಾಗಿ ಜಾದೂವಿನಂತಹ ಪರಿಣಾಮ ಬೀರಿತು. ದೇಶ ವಿಭಜನೆಗೆ ಸಂಬಂಧಪಟ್ಟ ಕ್ರೋಧ ಮತ್ತು ಹಿಂಸಾಚಾರ ಇದ್ದಕ್ಕಿದ್ದಂತೆ ಇಳಿಯಿತು. ಸರಕಾರ ಕೋಮುವಾದಿ ದ್ವೇಷವನ್ನು ಹರಡುವ ಸಂಘಟನೆಗಳ ಮೇಲೆ ಕಠಿಣ ಕ್ರಮಗಳಿಗಿಳಿಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಘಟನೆಗಳನ್ನು ಸ್ವಲ್ವ ಸಮಯದ ವರೆಗೆ ನಿಷೇಧಿಸಲಾಯಿತು. ಕೋಮುವಾದಿ ರಾಜಕೀಯ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಲಾರಂಭಿಸಿತು.………”(ಒತ್ತು ನಮ್ಮದು).

ಕಳೆದ ವರ್ಷ, ಕೊವಿಡ್ ಕಾಲದಲ್ಲಿ ಮಕ್ಕಳ ಶಿಕ್ಷಣಕ್ಕೆ ಬಂದ ಕಂಟಕದ ಹಿನ್ನೆಲೆಯಲ್ಲಿ ಕೋವಿಡೋತ್ತರ ಕಾಲದಲ್ಲಿ ಮಕ್ಕಳ ಓದಿನ ಹೊರೆಯನ್ನು ಹಗುರಗೊಳಿಸಲೆಂದು ಮತ್ತು ‘ತರ್ಕಬದ್ಧ’ (ಸಿಲಬಸ್ ರೇಶನಲೈಸೇಷನ್)ಗೊಳಿಸಲೆಂದು ಎನ್‌ಸಿಇಆರ್‌ಟಿ ಶಾಲಾ ಪಠ್ಯಗಳಲ್ಲಿ ಕೆಲವನ್ನು ಕೈಬಿಡುವ ಯೋಜನೆಯನ್ನು ಪ್ರಕಟಿಸಿತ್ತು. ಅದರಲ್ಲಿ ಮೊಗಲ್ ದರ್ಬಾರಿನ ವೃತ್ತಾಂತಗಳು, ಕೈಗಾರಿಕಾ ಕ್ರಾಂತಿ, ಶೀತಲ ಸಮರ ಮತ್ತು ಗುಜರಾತಿನ ೨೦೦೨ರ ಹಿಂಸಾಚಾರಗಳ ಬಗ್ಗೆ ಉಲ್ಲೇಖಗಳನ್ನು ತೆಗೆದು ಹಾಕುವುದಾಗಿ ಪ್ರಕಟಿಸಲಾಗಿತ್ತು. ಆದರೆ ಈಗ ಮುದ್ರಣಗೊಂಡು ಬಂದಿರುವ ಪುಸ್ತಕಗಳಲ್ಲಿ ಇವಲ್ಲದೆ, ಇನ್ನೂ ಹಲವಾರು ಅಂಶಗಳನ್ನು ಕೈಬಿಡಲಾಗಿದೆ ಎಂದು ಎಪ್ರಿಲ್ ೫ರಂದು ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದೆ. ಆಗ ಗಮನಕ್ಕೆ ಬಂದಿರುವ ಇಂತಹ ಕೈಬಿಟ್ಟಿರುವ ಅಂಶಗಳ ಪಟ್ಟಿ ಹೀಗಿದೆ.

ಇದನ್ನೂ ಓದಿ : ಪಠ್ಯಪುಸ್ತಕಗಳಲ್ಲಿ ಇತಿಹಾಸವನ್ನೇ ವಿರೂಪಗೊಳಿಸುವ ಪ್ರಯತ್ನಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು- ಸಿಪಿಐ(ಎಂ) ಪೊಲಿಟ್‍ಬ್ಯುರೊ

• ‘ಭಾರತದ ಇತಿಹಾಸದ ವಿಷಯಗಳು-ಭಾಗ ೨’ ರಲ್ಲಿ “ರಾಜರುಗಳು ಮತ್ತು ರಾಜವೃತ್ತಾಂತಗಳು; ಮೊಗಲ್ ದರ್ಬಾರುಗಳು(ಕ್ರಿಶ. ೧೬-೧೭ನೇ ಶತಮಾನ)” ಎಂಬ ಅಧ್ಯಾಯವನ್ನು ೧೨ನೇ ತರಗತಿ ಪಠ್ಯದಿಂದ ತೆಗೆಯಲಾಗಿದೆ.

• ಅದೇ ತರಗತಿಯ “ಸಮಕಾಲೀನ ವಿಶ್ವರಾಜಕೀಯ”ದಲ್ಲಿ “ಶೀತಲ ಸಮರದ  ಯುಗ” ಮತ್ತು “ವಿಶ್ವ ರಾಜಕೀಯದಲ್ಲಿ ಅಮೆರಿಕಾದ ಪ್ರಾಬಲ್ಯ” ಎಂಬ ಅಧ್ಯಾಯಗಳನ್ನು ತೆಗೆಯಲಾಗಿದೆ.

• “ಭಾರತದಲ್ಲಿ ಸ್ವಾತಂತ್ರ‍್ಯಾನಂತರದ ರಾಜಕೀಯ”ದಲ್ಲಿ “ ತುರ್ತು ಪರಿಸ್ಥಿತಿ ಕುರಿತ ವಿವಾದಗಳು” ಮತ್ತು “ಗುಜರಾತ್ ಗಲಭೆಗಳು” ಅಧ್ಯಾಯಗಳನ್ನು ತೆಗೆಯಲಾಗಿದೆ.

• ೧೧ನೇ ತರಗತಿಯ”ಜಾಗತಿಕ ಇತಿಹಾಸದ ವಿಷಯಗಳು” ಪುಸ್ತಕದ “ಮಧ್ಯ ಇಸ್ಲಾಮಿನ ನಾಡುಗಳು”, “ಸಂಸ್ಕೃತಿಗಳ ಮುಖಾಮುಖಿ” ಅಧ್ಯಾಯಗಳನ್ನು ತೆಗೆಯಲಾಗಿದೆ.

• ೮ನೇ ತರಗತಿಯ ಪಠ್ಯಕ್ರಮದಲ್ಲಿ “ಸ್ವಾತಂತ್ರ‍್ಯಾನಂತರದ ಭಾರತ” ಅಧ್ಯಾಯವನ್ನು ತೆಗೆಯಲಾಗಿದೆ.

• ೧೦ನೇ ತರಗತಿಗೆ, “ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ”, “ಜನಪ್ರಿಯ ಹೋರಾಟಗಳು ಮತ್ತು ಆಂದೋಲನಗಳು” ಹಾಗೂ “ಪ್ರಜಾಪ್ರಭುತ್ವದ ಸವಾಲುಗಳು” ಅಧ್ಯಾಯಗಳನ್ನು ತೆಗೆಯಲಾಗಿದೆ.

• ೭ನೇ ತರಗತಿಯ ಪಠ್ಯಪುಸ್ತಕದಲ್ಲಿ “ನಮ್ಮ ಹಿಂದಿನ ಕಾಲಗಳು-೨”ರಲ್ಲಿದ್ದ ಹುಮಾಯೂನ್, ಶಾಹಜಹಾನ್, ಅಕ್ಬರ್, ಜಹಾಂಗೀರ್ ಮತ್ತು ಔರಂಗಜೇಬ ಈ ಮೊಗಲ ಸಾಮ್ರಾಟರ ಸಾಧನೆಗಳನ್ನು ಉಲ್ಲೇಖಿಸುವ ಎರಡು ಪುಟಗಳ ತಖ್ತೆಯನ್ನು ತೆಗೆಯಲಾಗಿದೆ.

• ೬ನೇ ತರಗತಿ “ರಾಜಮನೆತನಗಳು, ರಾಜರುಗಳು ಮತ್ತು ಆರಂಭಿಕ ಗಣತಂತ್ರ” ಎಂಬ ಅಧ್ಯಾಯದಲ್ಲಿ ವರ್ಣಗಳ ಆನುವಂಶಿಕ ಸ್ವರೂಪ, ಅಸ್ಪೃಶ್ಯರೆಂದು ಜನಗಳ ವರ್ಗೀಕರಣ ಮತ್ತು ವರ್ಣ ವ್ಯವಸ್ಥೆಗೆ ತಿರಸ್ಕಾರ ಕುರಿತ ವಾಕ್ಯಗಳನ್ನು ತೆಗೆಯಲಾಗಿದೆ.   (‘ಐತಿಹಾಸಿಕ” ಬದಲಾವಣೆಗಳು- ಎನ್‌ಸಿಇಆರ್‌ಟಿ ಕೈಬಿಟ್ಟಿರುವುದೇನು? ಬಿಸಿನೆಸ್ ಸ್ಟಾಂಡರ್ಡ್, ಎಪ್ರಿಲ್ ೫)

ಹೀಗೆ ‘ಹಗುರ’ಗೊಂಡಿರುವ ಇತಿಹಾಸ ಪುಸ್ತಕಗಳನ್ನು ಓದಿ ಈಗಿನ ಹುಡುಗರು- ಮೊಗಲರು ಎನ್ನುವವರು ಇರಲೇ ಇಲ್ಲ, ಆರೆಸ್ಸೆಸ್ ನಿಷೇಧಕ್ಕೆ ಒಳಗಾಗಲೇ ಇಲ್ಲ, ಗುಜರಾತಿನಲ್ಲಿ ೨೦೦೨ರಲ್ಲಿ ಏನೂ ಆಗಿರಲಿಲ್ಲ ಎಂದೆಲ್ಲ ನಂಬಿಕೊಂಡೇ ಬೆಳೆಯುತ್ತಾರೆ ಎಂದಿದ್ದಾರೆ ಒಬ್ಬ ಪತ್ರಕರ್ತರು. (ಲೀಫ್‌ಲೆಟ್, ಎಪ್ರಿಲ್ ೫). ‘ಇವೆಲ್ಲ “ಮತ್ತೆ-ಮತ್ತೆ ಬರುವ”, “ಅಪ್ರಸ್ತುತ”ವಾದ ವಿಷಯಗಳು, ಆದ್ದರಿಂದಾಗಿ ಕೈಬಿಡಲಾಗಿದೆ, ಇವನ್ನೆಲ್ಲ ಕಳೆದ ವರ್ಷವೇ ಪ್ರಕಟಿಸಿದ್ದೇವೆ, ಈಗೇಕೆ ಗದ್ದಲ’ ಎಂದು ಈ ಬಗ್ಗೆ ಕೇಳಿದಾಗ ಎನ್‌ಸಿಇಆರ್‌ಟಿ ನಿರ್ದೇಶಕರು ಹೇಳಿದ್ದಾರಂತೆ. ಅಲ್ಲಿ
ಘೋಷಿಸಿರದಿರುವ ಅಂಶಗಳನ್ನು ಕೈಬಿಟ್ಟಿರುವದರ ಬಗ್ಗೆ ಕೇಳಿದಾಗ ಕಣ್ತಪ್ಪಿನಿಂದ ಇರಬಹುದು ಎಂದರಂತೆ. ಇದಾದ ಮೇಲೆ ಮಾಧ್ಯಮಗಳಲ್ಲಿ ಹೀಗೆ ‘ಕಣ್ತಪ್ಪಿನಿಂದ’ ಕೈಬಿಟ್ಟ ಅಂಶಗಳ ಬಗ್ಗೆ ಇನ್ನಷ್ಟು ಸುದ್ದಿಗಳು ಪ್ರಕಟವಾಗಿವೆ. ಭಾರವೆನಿಸಿದ ‘ಆಝಾದ್’ ಹೆಸರು ಇವುಗಳಲ್ಲಿ ಇತ್ತೀಚಿನದ್ದೆಂದರೆ, ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಮ್ ಆಝಾದ್‌ರವರ ಹೆಸರನ್ನು ಕೈಬಿಟ್ಟಿರುವುದು ಮತ್ತು ಜಮ್ಮು- ಕಾಶ್ಮೀರ ಸ್ವಾಯತ್ತತೆಯ ಆಶ್ವಾಸನೆಯ ಮೇಲೆ ಭಾರತಕ್ಕೆ ಸೇರ್ಪಡೆಯಾದ ಅಂಶವನ್ನು ೧೧ನೇ ತರಗತಿಯ ರಾಜಕೀಯಶಾಸ್ತç ಪಠ್ಯದಿಂದ ತೆಗೆದು ಹಾಕಿರುವುದು (ದಿ ಹಿಂದು, ಎಪ್ರಿಲ್ ೧೩).

ಈ ಪುಸ್ತಕದ ಹಿಂದಿನ ಆವೃತ್ತಿಯಲ್ಲಿ ಮೊದಲ ಅಧ್ಯಾಯದಲ್ಲಿ ಹೀಗಿತ್ತು- “ಸಂವಿಧಾನಸಭೆ ವಿವಿಧ ವಿಷಯಗಳ ಮೇಲೆ ಎಂಟು ಪ್ರಮುಖ ಸಮಿತಿಗಳನ್ನು ಹೊಂದಿತ್ತು. ಸಾಮಾನ್ಯವಾಗಿ, ಈ ಸಮಿತಿಗಳ ಅಧ್ಯಕ್ಷತೆಯನ್ನು ಜವಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಆಝಾದ್ ಅಥವಾ ಅಂಬೇಡ್ಕರ್ ವಹಿಸುತ್ತಿದ್ದರು. ಇವರುಗಳು ಹಲವಾರು ವಿಷಯಗಳ ಬಗ್ಗೆ ಪರಸ್ಪರ ಒಮ್ಮತವಿದ್ದ ವ್ಯಕ್ತಿಗಳೇನೂ ಆಗಿರಲಿಲ್ಲ. ಅಂಬೇಡ್ಕರ್ ಕಾಂಗ್ರೆಸ್ ಮತ್ತು ಗಾಂಧಿಯ ಕಟು ವಿಮರ್ಶಕರಾಗಿದ್ದರು, ಅವರು ಪರಿಶಿಷ್ಟ ಜಾತಿಗಳ ಉದ್ಧಾರಕ್ಕೆ ಸಾಕಷ್ಟು ಮಾಡಿಲ್ಲ ಎಂದು ಆಪಾದಿಸುತ್ತಿದ್ದರು. ಪಟೇಲ್ ಮತ್ತು ನೆಹರು ಹಲವು ವಿಷಯಗಳ ಬಗ್ಗೆ ಪರಸ್ಪರ ಭಿನ್ನಮತ ಹೊಂದಿದ್ದರು. ಆದರೂ ಅವರೆಲ್ಲರೂ ಒಟ್ಟಾಗಿ ಕೆಲಸ ಮಾಡಿದರು.”
ಈಗ ಪ್ರಕಟವಾಗಿರುವ ‘ಹಗುರ’ ಆವೃತ್ತಿಯಲ್ಲಿ ಆಝಾದ್‌ರವರ ಹೆಸರು ಕಾಣೆಯಾಗಿದೆ, ‘ಸಾಮಾನ್ಯವಾಗಿ, ಈ ಸಮಿತಿಗಳ ಅಧ್ಯಕ್ಷತೆಯನ್ನು ಜವಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಅಥವಾ ಅಂಬೇಡ್ಕರ್ ವಹಿಸುತ್ತಿದ್ದರು’ ಎಂದಿದೆ! ಈ ಪಠ್ಯಪುಸ್ತಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕಳೆದ ವರ್ಷದ ಪ್ರಕಟಣೆಯಲ್ಲಿ ಹೇಳಲಾಗಿತ್ತು. ಆದರೆ ನಂತರ ಆಝಾದ್‌ರವರ ಹೆಸರು ಬಹಳ ಭಾರವಾಗಿ ಕಂಡಿರಬೇಕು!

ಆಝಾದ್ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಸ್ವತಂತ್ರ ಭಾರತದ ಆರಂಭದ ಅಡಿಪಾಯ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಮೊದಲ ಶಿಕ್ಷಣ ಮಂತ್ರಿಯಾಗಿ ೧೪ ವರ್ಷದ ವರೆಗಿನ ಮಕ್ಕಳಿಗೆ ಪುಕ್ಕಟೆ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಮುಂತಾದ ಪ್ರಮುಖ ಪರಿಕಲ್ಪನೆಗಳನ್ನು ರೂಪಿಸುವಲ್ಲಿ ಮಾತ್ರವಲ್ಲ, ಐಐಟಿಗಳು, ಐಐಎಸ್‌ಸಿ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿಯೂ ಪ್ರಧಾನ ಪಾತ್ರ ವಹಿಸಿದವರು, ಆದರೆ ಸ್ವಾತಂತ್ರ್ಯ ಆಂದೋಲನದಿಂದ ದೂರ ನಿಂತಿದ್ದ ಈಗಿನ ಆಳುವ ಮಂದಿ ಅವರನ್ನು ರಾಜಕೀಯ ಕಥನಗಳಿಂದ ಹೊರಹಾಕಲು ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ ಎನ್ನುತ್ತಾರೆ ಇತ್ತೀಚೆಗೆ ಅವರ ಜೀವನ ವೃತ್ತಾಂತವನ್ನು ರಚಿಸಿರುವ ಇತಿಹಾಸತಜ್ಞ ಎಸ್. ಇರ್ಫಾನ್ ಹಬೀಬ್.

ಇದೇ ಪಠ್ಯಪುಸ್ತಕದ ೧೦ನೇ ಅಧ್ಯಾಯ “ಸಂವಿಧಾನದ ತಾತ್ವಿಕತೆ”ಯಲ್ಲಿ “ಭಾರತ ಒಕ್ಕೂಟಕ್ಕೆ ಜಮ್ಮು ಮತ್ತು ಕಾಶ್ಮೀರದ ಸೇರ್ಪಡೆ ಕಲಮು ೩೭೦ರ ಅಡಿಯಲ್ಲಿ ಅದರ ಸ್ವಾಯತ್ತತೆಯನ್ನು ಸುರಕ್ಷಿತಗೊಳಿಸುವ ಬದ್ಧತೆಯನ್ನು ಆಧರಿಸಿತ್ತು” ಎಂದಿದ್ದ ಪರಿಚ್ಛೇದವನ್ನು ಕೈಬಿಡಲಾಗಿದೆ ಎಂದು ಈ ಸುದ್ದಿ ಹೇಳಿದೆ. ಇತಿಹಾಸಕ್ಕಷ್ಟೇ ಸೀಮಿತವಾಗಿಲ್ಲ ಶಾಲಾಮಕ್ಕಳ ಓದನ್ನು ‘ಹಗುರ’ಗೊಳಿಸುವ ಹೆಸರಿನ ಈ ನಡೆ ಇತಿಹಾಸಕ್ಕಷ್ಟೇ ಸೀಮಿತವಾಗಿಲ್ಲ. ಕರ್ನಾಟಕದಲ್ಲಿ ಪಿಯು-೧ ಮತ್ತು ಪಿಯು-೨ರ ವಿಜ್ಞಾನ ಮತ್ತು ವಾಣಿಜ್ಯ ಕೋರ್ಸ್ಗಳಿಗೆ ಎನ್‌ಸಿಇಆರ್‌ಟಿ ಯ ಪಠ್ಯಕ್ರಮವನ್ನೇ ಅಳವಡಿಸಿಕೊಂಡಿರುವ ಪ್ರಿ- ಯೂನಿವರ್ಸಿಟಿ ಶಿಕ್ಷಣ ಇಲಾಖೆ, ೨೦೨೩-೨೪ರಲ್ಲಿ ಮೊದಲ ಪಿಯು(ಅರ್ಥಶಾಸ್ತ್ರ)ದ ಅಭಿವೃದ್ಧಿ ಅರ್ಥಶಾಸ್ತ್ರದ ಪಠ್ಯದಲ್ಲಿ ‘ಬಡತನ’ ಮತ್ತು ‘ಮೂಲರಚನೆ’ಯ ಅಧ್ಯಾಯಗಳನ್ನು ಕೈಬಿಟ್ಟಿದೆಯಂತೆ(ದಿ ಹಿಂದು, ಎಪ್ರಿಲ್ ೭).

ಬಡತನ ಮತ್ತು ಮೂಲರಚನೆಯಂತ ಅಧ್ಯಾಯಗಳು ಭಾರತದ ಅರ್ಥವ್ಯವಸ್ಥೆಯನ್ನು ತಿಳಿಯಲು ಅತ್ಯಗತ್ಯವಾದ ವಿಷಯಗಳು. ಅವು ದೇಶದ ಭವಿಷ್ಯ ರೂಪಿಸಲಿರುವ ವಿದ್ಯಾರ್ಥಿಗಳು ತಿಳಿದಿರಬೇಕಾದ ವಿಷಯಗಳು. ಇವನ್ನು ಮುಚ್ಚಿಡುವ ಅಗತ್ಯವಾದರೂ ಏನು ಎಂದು ಹಲವು ಅಧ್ಯಾಪಕರುಗಳು ಪ್ರಶ್ನಿಸಿರುವುದಾಗಿಯೂ ಈ ಸುದ್ದಿ ಹೇಳುತ್ತದೆ.

ಇದೇ ಪತ್ರಿಕೆಯಲ್ಲಿ ಎಪ್ರಿಲ್ ೯ರಂದು ಪ್ರಕಟವಾಗಿರುವ ಮತ್ತೊಂದು ಸುದ್ದಿಯ ಪ್ರಕಾರ ೧೧ನೇ ತರಗತಿಯ ಸಮಾಜಶಾಸ್ತç ಪಠ್ಯಪುಸ್ತಕದಲ್ಲಿಯೂ ನಮ್ಮ ಸಮಾಜದ ಕಟು ವಾಸ್ತವತೆಗಳನ್ನು ತಿಳಿಸುವ ಅಂಶಗಳನ್ನು ಕೈಬಿಡಲಾಗಿದೆ. “ಸಮಾಜವನ್ನು ಅರ್ಥಮಾಡಿಕೊಳ್ಳುವುದು”  ಎಂಬ ಪುಸ್ತಕದಲ್ಲಿ ಹಲವು ವಿಷಯಗಳನ್ನು ಕೈಬಿಡಲಾಗಿದೆ. ಇವು ಕೂಡ ಎನ್‌ಸಿಇಆರ್‌ಟಿ ಕಳೆದ ವರ್ಷ ಪ್ರಕಟಿಸಿದ ಪಟ್ಟಿಯಲ್ಲಿ ಇರಲಿಲ್ಲ. ಅವುಗಳಲ್ಲಿ ಬಹು ಗಹನವಾದ ಎರಡು ಉದಾಹರಣೆಗಳನ್ನು ಈ ಸುದ್ದಿ-ವಿಶ್ಲೇಷಣೆಯಲ್ಲಿ ಕಾಣಬಹುದು. ಈ ಪುಸ್ತಕದ ಅಧ್ಯಾಯ ೩ “ಪರಿಸರ ಮತ್ತು ಸಮಾಜ’ದಲ್ಲಿ “ಪರಿಸರ ಪ್ರಶ್ನೆಗಳು ಸಾಮಾಜಿಕ ಪ್ರಶ್ನೆಗಳೂ ಕೂಡ ಏಕಾಗಿವೆ?’ ಎಂಬ ಶಿರೋನಾಮೆಯ ಅಡಿಯಲ್ಲಿ ಮೂರು ಪುಟಗಳನ್ನು ಸಾರಾ ಸಗಟಾಗಿ ಕೈಬಿಡಲಾಗಿದೆ. ನೀರಿನ ಹಾಹಾಕಾರವಿರುವ ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಹೇಗೆ ವಾಟರ್ ಪಾರ್ಕ್ಗಳು ಮತ್ತು ಅಮ್ಯೂಸ್‌ಮೆಂಟ್ ಸೆಂಟರ್‌ಗಳು ಹೆಚ್ಚುತ್ತಿವೆ ಎಂಬ ವಿರೋಧಾಭಾಸದ ಕುರಿತ ಪ್ರಖ್ಯಾತ ಪತ್ರಕರ್ತ ಪಿ.ಸಾಯಿನಾಥ್‌ರವರ ಲೇಖನದ ಭಾಗಗಳನ್ನು ತೆಗೆಯಲಾಗಿದೆ ಮತ್ತು ‘ನಗರೀಯ ಪರಿಸರ-ಎರಡು ನಗರಗಳ ಕತೆ’ ಎಂಬ ಉಪ ಶಿರೋನಾಮೆಯ ಅಡಿಯಲ್ಲಿದ್ದ ಇಡೀ ಭಾಗವನ್ನು ಕತ್ತರಿಸಲಾಗಿದೆ. ಇದು ಉತ್ತರ ದಿಲ್ಲಿಯ ಅಶೋಕ ವಿಹಾರ ಎಂಬ ಪ್ರದೇಶದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ತಿಕ್ಕಾಟಗಳನ್ನು ಕುರಿತಾದ ವಿಶ್ಲೇಷಣೆಯ ಒಂದು ಭಾಗ. ಪಕ್ಕದ ವಾಝಿರ್
ಪುರ್ ‘ಜುಗ್ಗಿ’ಯ ೧೮ ವರ್ಷದ ಒಬ್ಬ ಶ್ರಮಿಕ ಹುಡುಗನ ಕೊಲೆ ಮತ್ತು ಅದನ್ನು ಪ್ರತಿಭಟಿಸಲು ಬಂದ ಜುಗ್ಗಿ ನಿವಾಸಿಗಳ ಮೇಲೆ ಪೋಲಿಸ್ ಗೋಲೀಬಾರಿನಲ್ಲಿ ಇನ್ನೂ ನಾಲ್ವರ ಸಾವಿನ ಕುರಿತಾದ ವಾಕ್ಯಗಳನ್ನು ಕೈಬಿಡಲಾಗಿದೆ. ಅದೇ ಅಧ್ಯಾಯದಲ್ಲಿ ಭಾರತದಲ್ಲಿ ಮನೆಯೊಳಗಿನ ವಾಯುಮಾಲಿನ್ಯದಿಂದ, ಅದರೆ ಅಡುಗೆಯ ಬೆಂಕಿಗಳಿಗೆ ಸಂಬಂಧಪಟ್ಟಂತೆ ಸಂಭವಿಸುವ ಸಾವುಗಳ ಅಂಕಿ-ಅಂಶಗಳನ್ನು ತೆಗೆದು ಹಾಕಿ ಜಾಗತಿಕ ಅಂಕಿ-ಅಂಶಗಳನ್ನು ಹಾಕಲಾಗಿದೆ!

ಹಿಂದಿನ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳು ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಬರುವ ಕುತ್ತುಗಳನ್ನು ಕುರಿತಾದ ವರದಿಗಳನ್ನು ಓದಿ ಚರ್ಚಿಸಬೇಕಾಗಿತ್ತು ಎಂದು ಶಿಕ್ಷಣ ತಜ್ಞರು ನೆನಪಿಸುತ್ತಾರೆ ಹೀಗೆ ಎನ್‌ಸಿಇಆರ್‌ಟಿ ಘೋಷಿತಕ್ಕಿಂತ ಹೆಚ್ಚಾಗಿ ಅಘೋಷಿತ ಅಂಶಗಳನ್ನು ಕೈಬಿಟ್ಟಿರುವುದು ಅವು “ಮತ್ತೆ-ಮತ್ತೆ ಬರುವ”, “ಅಪ್ರಸ್ತುತ”ವಾದ ವಿಷಯಗಳು ಎಂಬ ಕಾರಣಕ್ಕೂ ಅಲ್ಲ, ಕಣ್ತಪ್ಪಿನಿಂದಲೂ ಅಲ್ಲ, ವಿದ್ಯಾರ್ಥಿಗಳಿಗೆ ಕಲಿಕೆಯ ಹೊರೆಯನ್ನು ಹಗುರಗೊಳಿಸಲಂತೂ ಅಲ್ಲವೇ ಅಲ್ಲ, ಕೋಮುವಾದಿ- ಕಾರ್ಪೊರೇಟ್ ನಂಟಿನ ಆಳ್ವಿಕೆಗೆ ಅನುಗುಣವಾಗಿರುವಂತೆ ಮಾಡಿರುವ ಬದಲಾವಣೆಗಳು ಎಂಬುದು ಕೈಬಿಟ್ಟಿರುವ ಅಂಶಗಳಲ್ಲಿ ಎದ್ದು ಕಾಣುತ್ತದೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆೆ.

Donate Janashakthi Media

Leave a Reply

Your email address will not be published. Required fields are marked *