ಕೇರಳದ ಥ್ರಿಕ್ಕಕಾರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಯುಡಿಎಫ್ 2021ರ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಹೆಚ್ಚಿನ ಅಂತರದಿಂದ ಗೆಲುವು ಪಡೆದಿದೆ. ಇದು ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಎಲ್.ಡಿ.ಎಫ್. ಸರಕಾರದ ಬಗ್ಗೆ ಜನಗಳ ಅಸಮಾಧಾನವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ, ಹಲವು ಮಾಧ್ಯಮಗಳಲ್ಲಿಯೂ ಹೀಗೆಂದೇ ವಿಶ್ಲೇಷಣೆ ಮಾಡಲಾಗಿದೆ. ಆದರೆ ಇದು ಸರಿಯಾದ ವಿಶ್ಲೇಷಣೆ ಅಲ್ಲ. ಎಡ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಗೆಲುವು ಸಾಧಿಸಲು ಮತ್ತು ಬಹುಮತವನ್ನು ಹೆಚ್ಚಿಸಿಕೊಳ್ಳಲು ಯುಡಿಎಫ್‍ಗೆ ಸಾಧ್ಯವಾಗಿದೆ ಎಂದು ಸಿಪಿಐ(ಎಂ) ಕೇರಳ ರಾಜ್ಯ ಸಮಿತಿ ಹೇಳಿದೆ.
ವಾಸ್ತವವಾಗಿ ಎಲ್‍ಡಿಎಫ್ 2244 ಹೆಚ್ಚು ಮತಗಳನ್ನು ಗಳಿಸಿದೆ, ಅದರ ಮತಪ್ರಮಾಣ ಶೇ.33.32ರಿಂದ ಶೇ.35.28ಕ್ಕೆ ಏರಿಕೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 45,510 ಮತಗಳನ್ನು ಪಡೆದಿದ್ದ ಎಲ್‌ಡಿಎಫ್ ನ ಮತಗಳ ಸಂಖ್ಯೆ ಈ ಉಪಚುನಾವಣೆಯಲ್ಲಿ 47,754ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಮತ್ತು ಕೆಲವು ಮಾಧ್ಯಮಗಳು ಹೇಳುವಂತೆ ಎಲ್.ಡಿ.ಎಫ್.ನ ಜನಬೆಂಬಲ ಮತ್ತು ಮತ ನೆಲೆಗೆ ಧಕ್ಕೆಯಾಗಿಲ್ಲ ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತವೆ ಎಂದು ಸಿಪಿಐ(ಎಂ) ಹೇಳಿದೆ.
ಇದನ್ನು ಓದಿ: ಕೇರಳ ವಿಧಾನಸಭೆ ಉಪಚುನಾವಣೆ: ತ್ರಿಕ್ಕಕರ ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್ ಪಕ್ಷ
ಯುಡಿಎಫ್‌ನ ಮತಗಳು 59,839 ರಿಂದ 72,770 ಕ್ಕೆ ಏರಿರುವುದು ಅದಕ್ಕೆ ಬಿಜೆಪಿಯಿಂದ ಮತ್ತು ಟ್ವೆಂಟಿ20 ನಂತಹ ಗುಂಪುಗಳಿಂದ ಹೆಚ್ಚುವರಿ ಮತಗಳು ಹರಿದುಬಂದಿದ್ದರಿಂದ. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 21,249 ಮತ್ತು 2021ರ ವಿಧಾನಸಭೆ ಚುನಾವಣೆಯಲ್ಲಿ 15,483 ಮತಗಳನ್ನು ಪಡೆದಿದ್ದು, ಬಿಜೆಪಿ ಮತಗಳು ಯುಡಿಎಫ್ ಪರವಾಗಿ ಹೋಗುತ್ತಿವೆ ಎಂಬ ಅಂಶವನ್ನು ಸಾಬೀತುಪಡಿಸಿದೆ. ಈ ಪ್ರವೃತ್ತಿ ಈ ಉಪಚುನಾವಣೆಯಲ್ಲಿಯೂ ಕಂಡುಬಂದಿದೆ.
ಕಳೆದ ಚುನಾವಣೆಯಲ್ಲಿ ಟ್ವೆಂಟಿ20ಗೆ 13,897 ಮತಗಳು ಬಂದಿದ್ದವು. ಆದರೆ ಈ ಉಪಚುನಾವಣೆಯಲ್ಲಿ ಅದು ಅಭ್ಯರ್ಥಿಯನ್ನೂ ಹಾಕಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 14,329 ಮತಗಳ ಬಹುಮತ ಪಡೆದಿದ್ದ ಯುಡಿಎಫ್ ಉಪಚುನಾವಣೆಯಲ್ಲಿ ತನ್ನ ಬಹುಮತವನ್ನು 25,016ಕ್ಕೆ ಹೆಚ್ಚಿಸಿಕೊಳ್ಳಲು ಇದು ಮತ್ತೊಂದು ಕಾರಣವಾಗಿದೆ ಎಂದಿರುವ ಸಿಪಿಐ(ಎಂ) ರಾಜ್ಯಸಮಿತಿ ಈ ಕ್ಷೇತ್ರದ ಮತದಾರರ ತೀರ್ಪನ್ನು ಪಕ್ಷ ಒಪ್ಪಿಕೊಳ್ಳುತ್ತದೆ ಮತ್ತು ಇದುವರೆಗೆ ಯಾವಾಗಲೂ ಯುಡಿಎಫ್‌ನ್ನೇ ಬೆಂಬಲಿಸಿರುವ ಕ್ಷೇತ್ರದಲ್ಲಿ ತನ್ನ ಉಪಚುನಾವಣೆ ಚಟುವಟಿಕೆಗಳನ್ನು ಪರೀಕ್ಷಿಸುವುದಾಗಿ ಹೇಳಿದೆ.