ಉತ್ತರ ಪ್ರದೇಶ ಚುನಾವಣಾ ಪ್ರಚಾರ ಕರ್ನಾಟಕದಲ್ಲಿ ಯಾಕೆ? ಎಂದು ಪ್ರಶ್ನಿಸಿದ ನ್ಯಾಯವಾದಿಗೆ ಬೆದರಿಕೆ ಹಾಕಿದ ಯುಪಿ ಪೊಲೀಸರು!

ಬೆಂಗಳೂರು : ಕರ್ನಾಟಕದಲ್ಲಿ ಉತ್ತರ ಪ್ರದೇಶ ಚುನಾವಣೆಯ ಪ್ರಚಾರ ನಡೆಯುತ್ತಿದೆ ಎಂದು ಜಾಹಿರಾತು ಫಲಕದ ಛಾಯಾಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಕ್ಕೆ ನ್ಯಾಯವಾದಿಯೊಬ್ಬರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ನಗರದ ತುಂಬ ಸದ್ದು ಮಾಡುತ್ತಿದೆ.

ಹೌದು ನಗರದ ವಿಮಾನನಿಲ್ದಾಣದ ಸಮೀಪ ಉತ್ತರಪ್ರದೇಶ ಸರಕಾರದ ಸಾಧನೆಗಳ ಕುರಿತ ಬೃಹತ್ ಜಾಹೀರಾತುಫಲಕದ ಛಾಯಾಚಿತ್ರವನ್ನು ಹಾಕಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರದೊಂದಿಗೆ ‘ದೇಶದಲ್ಲಿ ಉತ್ತರಪ್ರದೇಶ ನಂ.1′ ಹಾಗೂ ʼನಾಲ್ಕು ಲಕ್ಷ ಯುವಕರಿಗೆ ಸರಕಾರಿ ಉದ್ಯೋಗ’ ಎಂಬ ಘೋಷಣೆಗಳ ಫಲಕದ ಜಾಹಿರಾತು ಹಾಕಲಾಗಿದೆ. ಬೆಂಗಳೂರಿನ ನ್ಯಾಯವಾದಿ ಶಿಶಿರ ರುದ್ರಪ್ಪ ಅವರು ಟ್ವಿಟ್ಚರ್ನಲ್ಲಿ ಶೇರ್ ಮಾಡಿದ್ದರು. ಉತ್ತರಪ್ರದೇಶದ ಚುನಾವಣಾ ಪ್ರಚಾರ ಕರ್ನಾಟಕದಲ್ಲಿ ಆರಂಭವಾಗಿದೆ ಎಂಬ ಫೋಟೋಶೀರ್ಷಿಕೆಯನ್ನು ಕೂಡಾ ಅವರು ಬರೆದಿದ್ದರು.

 

ಟ್ವಿಟ್ಟರ್ ನಲ್ಲಿ ಈ ಫೋಟೋ ಪ್ರಕಟವಾದ ಬಳಿಕ ಉತ್ತರ ಪ್ರದೇಶ ಸರಕಾರದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಶಿಶಿರ್ ಸಿಂಗ್ ಪ್ರತಿಕ್ರಿಯಿಸುತ್ತಾ, ಕರ್ನಾಟಕದಲ್ಲಿ ಅಂತಹ ಯಾವುದೇ ಜಾಹೀರಾತನ್ನು ನೀಡಲಾಗಿಲ್ಲ ಮತ್ತು ಈ ಛಾಯಾಚಿತ್ರವು ನಕಲಿಯೆಂದು ತಿಳಿಸಿದ್ದರು.

ಈ ಟ್ವಿಟ್ಟರ್ ಬಳಕೆದಾರನ ವಿರುದ್ಧ ಸೂಕ್ತ ಕಾನೂನುಕ್ರಮವನ್ನು ಕೈಗೊಳ್ಳಲಾಗುವುದೆಂದು ಉತ್ತರಪ್ರದೇಶದ ಸರಕಾರದ ಸೈಬರ್ ಪೊಲೀಸ್ ಘಟಕವು ಎಚ್ಚರಿಕೆ ನೀಡಿತ್ತು.

ಶಿಶಿರ್‌ ಸಿಂಗ್ ಅವರ ಟ್ವೀಟ್ ಗೆ ತಕ್ಷಣವೇ ಪ್ರತಿಕ್ರಿಯಿಸಿದ ಶಿಶಿರ ಅವರು, ಟ್ವಿಟ್ಟರ್ ನಲ್ಲಿ ವಿವಾದಿತ ನಾಮಫಲಕವಿರುವ ಸ್ಥಳದ ವಿಡಿಯೋ ಪ್ರಸಾರ ಮಾಡಿದ್ದರು. ಅದಕ್ಕೆ ಪೂರಕವಾದ ಸಾಕ್ಷಾಧಾರಗಳನ್ನು ಕೂಡಾ ಅವರು ವಿಡಿಯೋದಲ್ಲಿ ತೋರಿಸಿದ್ದರು.

ಮಂಗಳವಾರದಂದು ವಿವಾದಾತ್ಮಕ ಫಲಕವನ್ನು ತೆಗೆದುಹಾಕಲಾಗುತ್ತಿರುವ ವಿಡಿಯೋವನ್ನು ಕೂಡಾ ಶಿಶಿರ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದರು. “ಇದೀಗ ಜಾಹೀರಾತುಫಲಕವನ್ನು ತೆಗೆದುಹಾಕಲಾಗಿದೆ. ಆ ದೃಶ್ಯವನ್ನು ವಿಡಿಯೋದಲ್ಲಿ ಸೆರೆಹಿಡಿಯುವಲ್ಲಿ ನನ್ನ ತಂಡವು ಯಶಸ್ವಿಯಾಗಿದೆ” ಎಂದವರು ಹೇಳಿದ್ದರು.

ಈ ಮಧ್ಯೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರವು, ವಿವಾದಿತ ಜಾಹೀರಾತಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದೆ. ಕೇವಲ ಟ್ವಟ್ಟರ್ನಲ್ಲಿ ಜಾಹೀರಾತು ಫಲಕದ ಚಿತ್ರವನ್ನು ಶೇರ್ ಮಾಡಿದ್ದ ಕಾರಣಕ್ಕಾಗಿ ಶಿಶಿರ ಅವರಿಗೆ ಕಾನೂನುಕ್ರಮದ ಬೆದರಿಕೆ ಒಡ್ಡಿರುವುದಕ್ಕಾಗಿ ಉತ್ತರಪ್ರದೇಶ ಸರಕಾರ ಹಾಗೂ ಆ ರಾಜ್ಯದ ಪೊಲೀಸರ ವಿರುದ್ಧ ಟ್ವಿಟ್ಟರ್ನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಈಗಾಗಲೆ ರಾಜ್ಯದಲ್ಲಿ ಭಾಷಾ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಿಂದಿ ಹೇರಿಕೆ ವಿರುದ್ಧ ಹೋರಾಟವೂ ನಡೆಯುತ್ತಿದೆ. ಈ ವೇಳೆ ಇಂತಹ ವಿವಾದಾತ್ಮಕ ಜಾಹಿರಾತು ಹಾಕಿದವರು ಯಾರು? ಇತ್ತೀಚೆಗೆ ಯುಪಿ ಅರಕಾರ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಮಾಡಿದೆ. ಇದನ್ನೂ ರಾಜ್ಯದಲ್ಲೂ ಹೇರುವ ಹುನ್ನಾರವೇ? ಎಂಬ ಪ್ರಶ್ನೆಯೂ ಎದ್ದಿದೆ. ಈ ಜಾಹಿರಾತು ಫಲಕ ಸರಕಾರ, ಬಿಬಿಎಂಪಿ, ದೇವನಹಳ್ಳಿ ತಾಲ್ಲೂಕ ಆಡಳಿತದ ಗಮನಕ್ಕೆ ಬಾರದೆ ಹಾಕಲಾಗಿತ್ತೆ? ಅಥವಾ ಸರಕಾರ ನೋಡಿ ಮೌನವಾಗಿತ್ತೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Donate Janashakthi Media

Leave a Reply

Your email address will not be published. Required fields are marked *