ಮೈಸೂರು | ಯೋಜನಾ ವರದಿ ಸಲ್ಲಿಸಲು ಡಿ.15 ಕೊನೆಯ ದಿನಾಂಕ

ಮೈಸೂರು: ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳು ವರದಿಯನ್ನು ಡಿ.15ರೊಳಗೆ ಕೊಡಬೇಕು’ ‘ಜಿಲ್ಲಾ ಯೋಜನಾ ವರದಿಗಳನ್ನು ಬಜೆಟ್‌ ಸಿದ್ಧಪಡಿಸುವ ಮೊದಲು ಸಮಿತಿಗೆ ಸಲ್ಲಿಸಬೇಕು. ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮೈಸೂರು ವಿಭಾಗದ 8 ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.  ‘ವಿಕೇಂದ್ರೀಕರಣ ವ್ಯವಸ್ಥೆಯನ್ನು ಸೈದ್ಧಾಂತಿಕವಾಗಿ ನಾವು ಒಪ್ಪಿಕೊಂಡಿದ್ದರೂ ಜಿಲ್ಲಾ ಯೋಜನಾ ವರದಿ ತಯಾರಿಕೆ ಸಮಿತಿ‌ ಸಭೆಗಳು ನಿಗದಿತವಾಗಿ ನಡೆಯಬೇಕು. ಆ ವರದಿಯಲ್ಲಿ ಸುಸ್ಥಿರ ಅಭಿವೃದ್ಧಿ, ಜಿಡಿಪಿ, ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು. ‘ಆಯಾ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು. 

ಇದನ್ನೂ ಓದಿ : ಕೆಲಸದ ಜಾಗಗಳಲ್ಲಿ ಲಿಂಗ ತಾರತಮ್ಯ ಮಾಡಬಾರದು :ಮುಕ್ತ ಮನಸ್ಸಿನಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸಬೇಕು

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್, ‘ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಯೋಜನಾ ಸಮಿತಿ ಸಭೆಯನ್ನು ನ.4ರಿಂದ 15ರವರೆಗೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕು. ಲಭ್ಯವಿರುವ ಅನುದಾನದ ಆಧಾರದ ಮೇಲೆ ಯೋಜನೆ ರೂಪಿಸಿ ಅನುಷ್ಠಾನದ ನಂತರ ಉಂಟಾಗುವ ಉತ್ತಮ ಬೆಳವಣಿಗೆಯ ಬಗ್ಗೆ ಅರ್ಥ ಮಾಡಿಕೊಂಡು ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಸುಸ್ಥಿರ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಶಿಕ್ಷಣ, ಕೃಷಿ, ಪೌಷ್ಟಿಕ ಆಹಾರ ಸೇರಿದಂತೆ ಹಲವು ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಮಾಹಿತಿ ನೀಡಿದರು.

ಮಾನವ ಯೋಜನೆ ಸಂಯೋಜನೆಯ ಹಿರಿಯ ನಿರ್ದೇಶಕ ಬಸವರಾಜು ಎಸ್. ಅವರು ಮಾನವ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಹೇಗೆ? ಯಾವ ಯಾವ ಜಿಲ್ಲೆಗಳು ಹೆಚ್ಚು ಪ್ರಗತಿ ಸಾಧಿಸಿದೆ, ಯಾವ ಕ್ಷೇತ್ರ ಹಿಂದುಳಿದಿದೆ ಎಂಬಿತ್ಯಾದಿ ವಿಷಯ ಮಂಡಿಸಿದರು.

ಸರ್ಕಾರದ ಕಾರ್ಯದರ್ಶಿ ರಮಣ್‌ದೀಪ್ ಚೌದರಿ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮಂಗಳೂರು ಜಿಲ್ಲೆಯ ಸಿಇಒಗಳು, ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ : ನಾಟಕ| ಸಂಪತ್ತಿಗೆ ಸವಾಲ್‌ | ಮೀಡಿಯಾ ಕ್ಲಬ್‌ ಕೊಪ್ಪಳ |ಪಿ.ಬಿ. ಧುತ್ತರಗಿ Janashakthi Media

Donate Janashakthi Media

Leave a Reply

Your email address will not be published. Required fields are marked *