ಕೋಲಾರ: ಸರಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಕೇಳಿದಲ್ಲಿ ಅಂತವರ ವಿರುದ್ಧ ಧೈರ್ಯದಿಂದ ಎಸಿಬಿಗೆ ದೂರು ನೀಡುವ ಮೂಲಕ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್‌ಪೆಕ್ಟರ್ ಫಾರೂಖ್ ತಿಳಿಸಿದರು.
ತಾಲೂಕಿನ ಹೊರವಲಯದ ದೊಡ್ಡ ಹಸಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಸಾರ್ವಜನಿಕರ ಕುಂದುಕೊರತೆಗಳ ಸಭೆ, ಜಾಗೃತಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭ್ರಷ್ಟಾಚಾರ ನಿರ್ಮೂಲನೆಗೆ ಸಂಬಂಧಿಸಿದಂತೆ ಸರಕಾರದಿಂದ ಕಾಯಿದೆಯನ್ನು ಜಾರಿ ಮಾಡಿದ್ದು ಇದನ್ನು ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಬೇಕು ಇದಕ್ಕೆ ದೂರುದಾರರ ಹೆಸರು ಮಾಹಿತಿಯನ್ನು ಗೌಪ್ಯವಾಗಿಟ್ಟು ತಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜದಲ್ಲಿ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳವ ಪ್ರವೃತ್ತಿ ಬಿಡಬೇಕು ಕೆಲಸ ಮಾಡುವುದು ಸರಕಾರಿ ಅಧಿಕಾರಿಯ ಜವಾಬ್ದಾರಿಯಾಗಿದೆ ಭ್ರಷ್ಟಾಚಾರ ತಡೆಗಟ್ಟಿ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಒದಗಿಸಬೇಕು ಎಂಬ ಉದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳವನ್ನು ಸರಕಾರ ಸ್ಥಾಪಿಸಿದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳು ಇದ್ದಲ್ಲಿ ಮತ್ತು ನೌಕರರು ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಬಹುದು ಇದರ ಬಗ್ಗೆ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿಯ ಬಗ್ಗೆ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಹಾಕಬೇಕು ಎಂದರು.
ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್‌ಪೆಕ್ಟರ್ ಮಂಜುನಾಥ್ ಮಾತನಾಡಿ ಭ್ರಷ್ಟಾಚಾರ ಇತ್ತೀಚೆಗೆ ಬಹಳ ಹೆಮ್ಮರವಾಗಿ ಬೆಳೆದಿದೆ ಇದನ್ನು ಬೇರು ಸಮೇತ ತೆಗೆಯಬೇಕು ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಸರಕಾರಿ ನೌಕರರಿಗೆ ನಾವು ಕಟ್ಟುವ ತರಿಗೆ ಹಣದಲ್ಲಿ ಸರಕಾರದಿಂದ ಸಂಬಳ ಕೊಡತ್ತಾರೆ ನೌಕರರಿಗೆ ಹಣ ಕೊಡದೇ ನಮ್ಮ ಕೆಲಸ ಮಾಡಿಕೊಳ್ಳವ ಪ್ರವೃತ್ತಿ ನಮ್ಮಿಂದಲ್ಲೇ ಪ್ರಾರಂಭವಾಗಬೇಕು ಜಿಲ್ಲೆಯ ಯಾವುದೇ ಇಲಾಖೆಯಲ್ಲಿ ಲಂಚ ಕೇಳಿದರೆ ನಮ್ಮ ಸಂಸ್ಥೆಗೆ ದೂರು ನೀಡಬಹುದು ಎಂದರು.
ದಿಂಬ ಗ್ರಾಮದ ಟೈಲರ್ ಆನಂದ್ ಎಸಿಬಿಗೆ ದೂರು ನೀಡಿ ಮಾತನಾಡಿ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ಒಂದು ರೀತಿಯ ಕೆಲಸ ಶ್ರೀಮಂತರಿಗೆ ಒಂದು ರೀತಿಯ ಕೆಲಸ ನಡೆಯುತ್ತದೆ ಕಚೇರಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದರೆ ಸಾಕು ಪ್ರಭಾವಗಳಿಂದ ಒತ್ತಡಗಳು ತರುತ್ತಾರೆ ಪಂಚಾಯತಿಯಲ್ಲಿ ಕಾಮಗಾರಿಗಳು ಕೇವಲ ಪೋಟೋಗೆ ಸೀಮಿತವಾಗಿದೆ ಇದರ ಬಗ್ಗೆ ತನಿಖೆ ಮಾಡಬೇಕು ಎಂದು ದೂರಿದರು.
ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿ.ಆರ್ ಗೌಡ, ದೊಡ್ಡ ಹಸಾಳ ಗ್ರಾಪಂ ಉಪಾಧ್ಯಕ್ಷ ನಾರಾಯಣಸ್ವಾಮಿ, ಎಸಿಬಿ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.
ವರದಿ: ಅಮರೇಶ್ ಸಿ.