ರಾಂಚಿ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಲಾಗಿದೆ.
ಮೇವು ಹಗರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ಬಿಹಾರದ ಮಾಜಿ ಮುಖ್ಯಮಂತ್ರಿಯಾಗಿರುವ ಲಾಲೂ ಪ್ರಸಾದ್ ಯಾದವ್ 2017ರ ಡಿಸೆಂಬರ್ 23ರಿಂದ ಜೈಲಿನಲ್ಲಿದ್ದರು.
ಇದನ್ನು ಓದಿ: ರೆಮಿಡಿಸಿವರ್ ಔಷಧ ಅಭಾವದಿಂದ ಸಾವಿನ ಪ್ರಮಾಣ ಹೆಚ್ಚಳ, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದ 73 ವರ್ಷದ ಲಾಲು ಪ್ರಸಾದ್ ಯಾದವ್ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ದೀರ್ಘವಾಗಿ ವಿಚಾರಣೆ ನಡೆದು ಶಿಕ್ಷೆ ವಿಧಿಸಲಾಯಿತು. ಈ ಹಿಂದೆ ಮೂರು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದ್ದರೂ ಸಹ ಅವರು ಬಿಡುಗಡೆಯಾಗಲು ಸಾಧ್ಯವಾಗಿರಲಿಲ್ಲ.
ಇಂದು ಜಾರ್ಖಂಡ್ ಹೈಕೋರ್ಟ್ ʻಡುಮ್ಕಾ ಖಜಾನೆʼ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ 1991 ಮತ್ತು 1996 ರ ನಡುವೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಜಾರ್ಖಂಡ್ ನಗರ ಖಜಾನೆಯಿಂದ 3.13 ಕೋಟಿ ರೂ. ವಿತ್ ಡ್ರಾ ಮಾಡಿದ ಆರೋಪ ಅವರ ಮೇಲಿತ್ತು.
ಇದನ್ನು ಓದಿ: ಸಾರಿಗೆ ನೌಕರರ ಹೋರಾಟಕ್ಕೆ ಆಂಧ್ರ ಸಾರಿಗೆ ನೌಕರರ ಸಂಘದ ಬೆಂಬಲ
ಮೇವು ಹಗರಣದ ಆರೋಪದ ಮೇಲೆ ಲಾಲೂ ಪ್ರಸಾದ್ ಯಾದವ್ ರವರಿಗೆ 14 ವರ್ಷ ಜೈಲು ಶಿಕ್ಷೆ ಮತ್ತು ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ 60 ಲಕ್ಷ ರೂ. ದಂಡ ವಿಧಿಸಲಾಗಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ಪ್ರಸ್ತುತ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.