ಬೆಂಗಳೂರಿನ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ನಗರದ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಬಹುಮಹಡಿ ಮನೆ ಕುಸಿತವಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್​ನಲ್ಲಿನ ಮನೆ ಕುಸಿತಗೊಂಡಿದೆ. ಸುರೇಶ್ ಎಂಬುವವರಿಗೆ ಸೇರಿದ ಹಳೇ ಮನೆ ಕುಸಿತವಾಗಿದೆ.  1974ರಲ್ಲಿ ಈ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಮೊದಲೇ ಅನುಮಾನ ಇದ್ದ ಕಾರಣ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಕಟ್ಟಡ ಕುಸಿತ ಸ್ಥಳಕ್ಕೆ ಎನ್​ಡಿಆರ್​ಎಫ್​ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಟ್ಟಡ ಕುಸಿಯುವ ಮಾಹಿತಿ ಮೊದಲೇ ಗೊತ್ತಾದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಕಟ್ಟಡ ಕುಸಿತ ಆಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕುಸಿದು ಬಿದ್ದ ಕಟ್ಟಡದ ಸುತ್ತಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಗ್ನಿಶಾಮಕದ ದಳದ ಸಿಬ್ಬಂದಿ ಬೆಸ್ಕಾಂ ಲೈನ್ ಬಂದ್ ಮಾಡಿಸಿದ್ದರು. ಇಟ್ಟಿಗೆ ಮತ್ತು ಮಣ್ಣಿನಿಂದ ನಿರ್ಮಾಣ ಮಾಡಿದ್ದ ಕಟ್ಟಡ ಇದಾಗಿದೆ. ಇಟ್ಟಿಗೆಗಳು ಹಾಳಾಗಿದ್ದು, ಮಣ್ಣಿನಿಂದ ನಿರ್ಮಿಸಿದ್ದ ಕಟ್ಟಡ ಕುಸಿತವಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

ಕಟ್ಟಡ ಮಾಲೀಕನ ವಿರುದ್ಧ ಎಫ್​ಐಆರ್ ದಾಖಲು
ಬೆಂಗಳೂರಿನ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಕಟ್ಟಡದ ಮಾಲೀಕ ಸುರೇಶ್ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ಘಟನೆ ಬಳಿಕ ಸುರೇಶ್ ಸ್ಥಳಕ್ಕೆ ಬರದೆ ನಾಪತ್ತೆಯಾಗಿದ್ದಾರೆ. ಆಡುಗೋಡಿ ಠಾಣೆಯಲ್ಲಿ ಸುರೇಶ್ ವಿರುದ್ದ ಕೇಸ್ ದಾಖಲು ಮಾಡಲಾಗಿದೆ. ಆಡುಗೋಡಿ ಪೊಲೀಸರಿಂದ ಸುರೇಶ್​ಗಾಗಿ ಶೋಧಕಾರ್ಯ ನಡೆದಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಐಪಿಎಸ್ 336 ರ ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಿಕೊಂಡಿದ್ದಾರೆ.  ರಾತ್ರಿ ವೇಳೆ ಕಟ್ಟಡ ಬಿದ್ದಿದ್ದರೆ ಹೆಚ್ಚು ಜನ ಸಾಯುತ್ತಿದ್ದರು. 40ಕ್ಕೂ ಹೆಚ್ಚು ಜನ ಆ ಮನೆಯಲ್ಲಿ ವಾಸವಿದ್ದಾರೆ ಅವರೆಲ್ಲ  ಸಾಯುತ್ತಿದ್ದರೆಂದು ಸ್ಥಳೀಯರ ಮಾಹಿತಿ ನೀಡಿದ್ದಾರೆ. ಕಟ್ಟಡ ಮೊದಲೇ ವಾಲಿತ್ತು, ತೆರವಿಗೆ ಮನವಿ ಮಾಡಿದ್ದೆವು. ಮನವಿ ಮಾಡಿದ್ರೂ ಯಾರೂ ಈ ಕಟ್ಟಡ ತೆರವುಗೊಳಿಸಿರಲಿಲ್ಲ. ಇಲ್ಲಿನ ಜನರನ್ನು ತೆರವುಗೊಳಿಸಿದ್ರಿಂದ ದೊಡ್ಡ ದುರಂತ ತಪ್ಪಿದೆ. ತುಂಬಾ ಹಳೇ ಕಟ್ಟಡ, ಜನರು ವಾಸಿಸಲು ಯೋಗ್ಯವಾಗಿರಲಿಲ್ಲ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *