ಬೆಂಗಳೂರು: ಲಖಿಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ಮಾಡುವ ವೇಳೆ ಸಚಿವ ಅಜಯ್ ಮಿಶ್ರಾ ಪುತ್ರ ರೈತರ ಮೇಲೆ ಕಾರು ಹರಿಸಿ ಕೊಲೆ ಮಾಡಿದ್ದಾನೆ. ರೈತರನ್ನು ಹತ್ಯೆ ಮಾಡಿದ ಸಚಿವರ ಪುತ್ರನ ಮೇಲೆ ಯಾವುದೇ ಕ್ರಮತೆಗೆದುಕೊಳ್ಳದ ಬಿಜೆಪಿ ಸರ್ಕಾರ ರಾಜಮರ್ಯಾದೆ ಕೊಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸೋಮುವಾರ ಬೆಂಗಳೂರು ನಗರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಘಟನೆಯನ್ನು ಖಂಡಿಸಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಇದನ್ನು ಓದಿ: ಲಖಿಂಪುರ ಹಿಂಸಾಚಾರ ಖಂಡಿಸಿ ಮಹಾರಾಷ್ಟ್ರ ಬಂದ್: ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧ
ಮುಂದುವರೆದು ಮಾತನಾಡಿದ ಬಿ.ಕೆ.ಹರಿಪ್ರಸಾದ್ ಸೋನಿಯಾ ಗಾಂಧಿ ನಿರ್ದೇಶನದ ಮೇರೆಗೆ ದೇಶ್ಯಾದ್ಯಂತ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಗಣಿಸಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಅಂಬಾನಿಯ ಮೊಮ್ಮಗನನ್ನು ನೋಡಲು ಸಮಯವಿರುತ್ತದೆ, ಆದರೆ ರೈತರ ಸಮಸ್ಯೆ ಕೇಳಲು ಸಮಯವಿಲ್ಲ. ರೈತರು ಸತ್ತರೂ ಕೂಡ ಸಾಂತ್ವಾನ ಹೇಳುವ ಕೆಲಸ ಮಾಡಲಿಲ್ಲ, ಇದು ನಾಚಿಕೆಗೇಡಿನ ವಿಷಯ. ರೈತರ ಹತ್ಯೆ ಆರೋಪವಿರುವುದರಿಂದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಮಾತನಾಡಿ ಪ್ರಧಾನಿಗಳು ತಮ್ಮ ಹೆಸರನ್ನು ನರೇಂದ್ರ ಮೋದಿ ಬದಲು ಮೌನೇಂದ್ರ ಮೋದಿ ಎಂದು ಬದಲಾಯಿಸಿಕೊಂಡರೆ ಉತ್ತಮ. ಕೋವಿಡ್ ಸಂಧರ್ಭದಲ್ಲಿ ಸಾಕಷ್ಟು ಜನ ಮೃತಪಟ್ಟರು. ಅದರ ಬಗ್ಗೆ ಬಿಜೆಪಿ ಧ್ವನಿ ಎತ್ತಲಿಲ್ಲ. ರೈತರ ಹತ್ಯೆಯಾಗಿದೆ, ಆಗಲೂ ಧ್ವನಿಯೆತ್ತಿಲ್ಲ. ಪ್ರಧಾನಿ ಮೋದಿಯಿಂದ ರೈತರಿಗೂ ನ್ಯಾಯ ಸಿಗಲ್ಲ. ಸಾಮಾನ್ಯ ಜನರಿಗೂ ನ್ಯಾಯ ಸಿಗಲ್ಲ. ಹಾಗಾಗಿ ಮೌನೇಂದ್ರ ಮೋದಿ ಎಂದು ಬದಲಿಸಿಕೊಳ್ಳಲಿ ಎಂದು ತಿಳಿಸಿದರು.
ಬೆಂಗಳೂರು ನಗರ ಘಟಕದಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇರೆಡೆ ಕಾರ್ಯಕ್ರಮದಲ್ಲಿ ಇದ್ದಾರೆ. ಈಗಾಗಲೇ ಪಕ್ಷದ ವತಿಯಿಂದ ಮೊನ್ನೆಯೂ ಪ್ರತಿಭಟನೆ ನಡೆಸಲಾಗಿದೆ. ರಾಜ್ಯಾದ್ಯಂತ ಇಂದು ಸಹ ಪ್ರತಿಭಟನೆ ನಡೆಯುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಶಾಸಕರಾದ ರಿಜ್ವಾನ್ ಅರ್ಷದ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್, ಬೆಂಗಳೂರು ಮೂರು ಜಿಲ್ಲಾಧ್ಯಕ್ಷರಾದ ರಾಜಕುಮಾರ್, ಕೃಷ್ಣಪ್ಪ, ಜಿ.ಶೇಖರ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.