ಕುಂದಾಪುರ: ಬಿಜೆಪಿಯ ಆಡಳಿತದ ವೈಫಲ್ಯದಿಂದ ಕಂಗೆಟ್ಟ ಕೇಂದ್ರ ಸರಕಾರವು ಸರಕಾರದ ವಿರುದ್ಧ ಹೋರಾಟ ನಡೆಸುವವರನ್ನು ಹತ್ಯೆ ಮಾಡುವ ಹೀನ ಕೃತ್ಯಕ್ಕೆ ಮುಂದಾಗುತ್ತಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ತಾಲೂಕು ಸಂಚಾಲಕ ಎಚ್.ನರಸಿಂಹ ಹೇಳಿದರು.
ಅವರು ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ಆಶ್ರಯದಲ್ಲಿ ನಡೆದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಹಾಗು ಓರ್ವ ಪತ್ರಕರ್ತರನ್ನು ಬಾರಿ ಗಾತ್ರದ ವಾಹನ ಹರಿಸಿ ಹತ್ಯೆ ನಡೆಸಲಾಗಿರುವುದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಹೇಳಿದರು. ಹುತಾತ್ಮರಾದ ರೈತರಿಗೆ ಹಾಗೂ ಜಮ್ಮು ಕಾಶ್ಮೀರದಲ್ಲಿ ಮಡಿದ ಸೈನಿಕರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಇದನ್ನು ಓದಿ: ಲಖಿಂಪುರ ಹಿಂಸಾಚಾರದಲ್ಲಿ ಮಡಿದ ರೈತರ ‘ಅಂತಿಮ ದರ್ಶನ’ಕ್ಕೆ ಎಸ್‌ಕೆಎಂ ನಾಯಕರ ಭೇಟಿ
ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಕೆ.ಶಂಕರ್ ಮಾತನಾಡಿ ಕೃತ್ಯದಲ್ಲಿ ತೊಡಗಿಸಿಕೊಂಡ ಬಿಜೆಪಿ ಕೇಂದ್ರ ಸಚಿವರ ಮಗ ಆಶೀಶ್ ಮಿಶ್ರಾ ಅವರನ್ನು ರಕ್ಷಿಸಿ ಅಮಾಯಕರ ಮೇಲೆ ದೂರು ದಾಖಲು ಮಾಡುವ ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ. ಕೊಲೆ ಮಾಡುವುದರ ಮೂಲಕ ಯಾವುದೇ ಹೋರಾಟವನ್ನು ಹತ್ತಿಕಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರೇಶ್ ಕಲ್ಲಾಗರ, ಚಂದ್ರಶೇಖರ, ವೆಂಕಟೇಶ ಕೋಣಿ ಮಾತನಾಡಿದರು. ಮಹಾಬಲವಡೇರ ಹೋಬಳಿ, ಬಲ್ಕೀಸ್, ನಿತನ್, ಸಂತೋಷ ಮತ್ತಿತರರು ಉಪಸ್ಥಿತರಿದ್ದರು.