ಲಕ್ನೋ: ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಜಿಲ್ಲೆಯ ಖೇರಿ ಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಮತ್ತೆ ಎರಡು ದಿನ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಅಕ್ಟೋಬರ್ 03ರಂದು ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು. ರೈತರ ಮೇಲೆ ವಾಹನವೊಂದು ವೇಗವಾಗಿ ಹರಿದು ಹೋದ ಹಿನ್ನೆಲೆ ಈ ಸಾವು ಸಂಭವಿಸಿದೆ. ಈ ವಾಹನದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಕೂಡಾ ಇದ್ದರು ಎಂಬ ಅರೋಪವಿದೆ.
ಇದನ್ನು ಓದಿ: ಲಖಿಂಪುರ ಖೇರಿ ಹಿಂಸಾಚಾರ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್
ರೈತರ ಆರೋಪದ ಆಧಾರದಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆಶಿಶ್ ಮಿಶ್ರಾನನ್ನು ಹಲವು ದಿನಗಳ ಬಳಿಕ ಬಂಧನ ಮಾಡಿದ್ದರು. ಅದೂ ಕೂಡ ಸುಪ್ರೀಂಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡ ನಂತರದಲ್ಲಿ. ಆಶಿಶ್ ಮಿಶ್ರಾನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ನಡೆಸಿದ್ದರು. ಈಗ ಪೊಲೀಸರು ಮತ್ತೆ ಆಶಿಶ್ ಮಿಶ್ರಾನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಪೊಲೀಸ್ ವಿಶೇಷ ತನಿಖಾ ತಂಡಕ್ಕೆ ಹೊಸ ಸಾಕ್ಷಿಗಳು ದೊರೆತ ಹಿನ್ನೆಲೆಯಲ್ಲಿ ಈಗ ಮತ್ತೆ ಆಶಿಶ್ ಮಿಶ್ರಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದೆ ಎಂದು ವರದಿಗಳು ಇವೆ. ಆಶಿಶ್ ಮಿಶ್ರಾ ಮಾತ್ರವಲ್ಲದೇ ಉಳಿದ ಆರೋಪಿಗಳನ್ನು ಕೂಡಾ ಪೊಲೀಸರ ವಶಕ್ಕೆ ಒಪ್ಪಿಸಬೇಕೆಂದು ನ್ಯಾಯಾಲಯಕ್ಕೆ ಅನುಮತಿ ಕೋರಿದ್ದಾರೆ. ಈ ಹಿನ್ನೆಲೆ ಆರೋಪಿಗಳಾದ ಅಕಿಂತ್ ದಾಸ್, ಶೇಖರ್ ಭಾರ್ತಿ ಹಾಗೂ ಲತೀಫ್ ಅನ್ನು ಕೂಡಾ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆಶಿಶ್ ಮಿಶ್ರಾನ ಬಂಧನವಾದ ಬಳಿಕ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಆಶಿಶ್ ಮಿಶ್ರಾನನ್ನು ವಶಕ್ಕೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾನನ್ನು ಪೊಲೀಸರು ಮೂರು ದಿನಗಳು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದರು.
ಇದನ್ನು ಓದಿ: ಲಖಿಂಪುರ ಖೇರಿ ಹಿಂಸಾಚಾರದಲ್ಲಿ ದಾಳಿಗೆ ಪ್ರತಿ ದಾಳಿ ಮಾಡಿದವರು ತಪ್ಪಿತಸ್ಥರು ಹೇಗಾಗುತ್ತಾರೆ: ರಾಕೇಶ್ ಟಿಕಾಯತ್
ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾರ ಹೆಸರು ಕೇಳಿಬರುತ್ತಿದ್ದಂತೆ ಅವನ ತಂದೆ ಕೇಂದ್ರದ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ “ನನ್ನ ಮಗ ಆ ಸಂದರ್ಭದಲ್ಲಿ ಆ ಸ್ಥಳದಲ್ಲಿ ಇರಲಿಲ್ಲ. ಬೇರೆ ಕಡೆಯಲ್ಲಿ ಒಂದು ಸಮಾರಂಭದಲ್ಲಿ ಇದ್ದ” ಎಂದು ಹೇಳಿದ್ದರು. ಅದಕ್ಕೆ ನಮ್ಮಲ್ಲಿ ಬೇಕಾದಷ್ಟು ಸಾಕ್ಷಿ ಇದೆ ಎಂದು ಕೂಡಾ ಹೇಳಿಕೊಂಡಿದ್ದರು. ಆದರೆ ಆಶಿಶ್ ಮಿಶ್ರಾ ಮೊಬೈಲ್ ಲೋಕೇಶನ್ ಈ ಹಿಂಸಾಚಾರ ನಡೆದ ಪ್ರದೇಶದಲ್ಲೇ ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೇ ಅಕ್ಟೋಬರ್ 03ರಂದು ಘಟನೆ ನಡೆದ ನಂತರದಲ್ಲಿ ಆಶಿಶ್ ಮಿಶ್ರಾ ತಲೆಮರೆಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಸೇರಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ರೈತರ ಮೇಲೆ ಹರಿದ ಕಾರಿನಲ್ಲಿ ಆರೋಪಿಗಳು ಇದ್ದರು ಎಂಬ ಮಾಹಿತಿ ಸಿಕ್ಕಿದೆ. ಬಂಧಿತರನ್ನು ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಷ್ಟ್ ಹಾಗೂ ಸತ್ಯ ಪ್ರಕಾಶ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳನ್ನು ಲಖಿಂಪುರ ಖೇರಿ ಪೊಲೀಸರು ಹಾಗೂ ಎಸ್‌ಡಬ್ಲ್ಯೂಎಟಿ ತಂಡದ ಅಪರಾಧ ವಿಭಾಗವು ಬಂಧಿಸಿದೆ.