ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಕೊರತೆ; ನಾಗಲಕ್ಷ್ಮೀ ಚೌಧರಿ ಆಕ್ರೋಶ

ಬೆಂಗಳೂರು: ಸೆಪ್ಟೆಂಬರ್‌ 10ರಂದು ನಗರದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಇಲ್ಲಿನ ನಿರ್ಭಯ ಕೇಂದ್ರ, ಒನ್‌ಸ್ಟಾಪ್‌ ಸಖೀ ಸೆಂಟರ್‌ಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಸಿಸಿ

ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ನಿಲ್ದಾಣಕ್ಕೆ ತೆರಳಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ, ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಯಾವುದೇ ಸಿಸಿ ಕ್ಯಾಮೆರಾ ಅಳವಡಿಸದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

2018ರಿಂದಲೂ ಬಸ್‌ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ ಎಂಬ ಅಧಿಕಾರಿಗಳ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟು ದೊಡ್ಡ ಬಸ್‌ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಇಲ್ಲವಾದರೆ ರಾತ್ರಿ ವೇಳೆ ಮಹಿಳೆಯರು, ಮಕ್ಕಳ ಸುರಕ್ಷತೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನೇಪಾಳ – ಆದೊಂದು ಕ್ಷಿಪ್ರ ಕ್ರಾಂತಿಯೇ ?

ಇನ್ನು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ 37 ಸಿಸಿ ಕ್ಯಾಮೆರಾ ಮಾತ್ರ ಅಳವಡಿಸಿದ್ದು, ವಿಡಿಯೋ ಸ್ಟೋರೇಜ್‌ ಕೇವಲ ಒಂದು ವಾರ ಮಾತ್ರ ಇರಲಿದೆ. ಕನಿಷ್ಠ 20 ದಿನಗಳಿಗಾದರೂ ಬ್ಯಾಕಪ್‌ ಸ್ಟೋರೇಜ್‌ ಇಟ್ಟುಕೊಳ್ಳುವಂತೆ ತಿಳಿಸಿದರು. ಇಲ್ಲಿನ ಶೌಚಾಲಯದೊಳಗೆ ಮಾಸ್ಕ್ ಹಾಕಿಕೊಂಡೆ ತೆರಳಿದ ಅಧ್ಯಕ್ಷರು ಗಬ್ಬೆದ್ದು ನಾರುವ ಶೌಚಾಲಯದ ಅವ್ಯವಸ್ಥೆ ಕಂಡು ಗರಂ ಆದರು.

ನಿತ್ಯ ಶೌಚಾಲಯ ಸ್ವಚ್ಛಗೊಳಿಸಬೇಕು, ಮಹಿಳೆಯರ ಪ್ಯಾಡ್‌ಗಳ ವಿತರಣೆಗೆ ವೆಂಡಿಂಗ್‌ ಯಂತ್ರ ಅಳವಡಿಸಬೇಕು, ವಿಲೇವಾರಿಗೆ ಕಸದ ಬುಟ್ಟಿ ಇಡಬೇಕು, ತುರ್ತು ಸಹಾಯವಾಣಿ ಫ‌ಲಕ ಅಳವಡಿಸಬೇಕು, ಮಲ-ಮೂತ್ರ ವಿಸರ್ಜನೆಗೆ ಅಧಿಕ ಹಣ ವಸೂಲಿ ಮಾಡದಂತೆ ಕ್ರಮವಹಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗೆ ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದರು.

“ರೆಫ‌ರಲ್‌ ಆಸ್ಪತ್ರೆಯಲ್ಲಿ ಶುದ್ಧ ಕುಡಿವ ನೀರು ಕಲ್ಪಿಸಿ’

ರೆಫ‌ರಲ್‌ ಆಸ್ಪತ್ರೆಗೆ ಭೇಟಿ ನೀಡಿದ ನಾಗಲಕ್ಷ್ಮೀ ಚೌಧರಿ ಅವರು, ಇಲ್ಲಿನ ಗರ್ಭಿಣಿ, ಬಾಣಂತಿಯರ ಯೋಗ ಕ್ಷೇಮ ವಿಚಾರಿಸಿ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು, ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಗರಂ ಆದರು. ರೋಗಿಗಳಿಗೆ ಖಾಸಗಿ ಮೆಡಿಕಲ್‌ಗ‌ಳಿಂದ ಔಷಧಿ ತರುವಂತೆ ಚೀಟಿ ನೀಡಲಾಗುತ್ತಿದ್ದು, ಒಪಿಡಿ ವ್ಯವಸ್ಥೆಯೂ ಇಲ್ಲದಿರುವ ಬಗ್ಗೆ ಸಮಸ್ಯೆ ಆಲಿಸಿದ ಅವರು ಒಂದು ವಾರದೊಳಗೆ ಸಮಸ್ಯೆಗಳನ್ನು ಪರಿಹರಿಸಿ ವರದಿ ಸಲ್ಲಿಸುವಂತೆ ಆಸ್ಪತ್ರೆ ಅಧೀಕ್ಷಕರಿಗೆ ಸೂಚನೆ ನೀಡಿದರು.

ಕಂಡಕ್ಟರ್‌ ವಿರುದ್ಧ ಮಹಿಳೆಯರ ದೂರು

ಬೆಂಗಳೂರು-ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್‌ ಏರಿ ಮಹಿಳಾ ಪ್ರಯಾಣಿಕರ ಸಮಸ್ಯೆ ಆಲಿಸಿದ ನಾಗಲಕ್ಷ್ಮೀ ಚೌಧರಿ ಅವರಿಗೆ ನಿರ್ವಹಕರ ವಿರುದ್ಧ ಸಾಲು ಸಾಲು ದೂರುಗಳನ್ನು ಮುಂದಿಟ್ಟರು. ಉಚಿತ ಬಸ್‌ ಪ್ರಯಾಣದ ಕಾರಣಕ್ಕೆ ನಿರ್ವಾಹಕರು ಮಹಿಳೆಯರಿಗೆ ಅಗೌರವ ತೋರುತ್ತಾರೆ. ಸಂಜೆ ವೇಳೆ ಬಸ್‌ ವ್ಯವಸ್ಥೆ ಇರುವುದಿಲ್ಲ. ಕೆಲವು ನಿಲ್ದಾಣಗಳಲ್ಲಿ ಬಸ್‌ಗಳನ್ನೇ ನಿಲ್ಲಿಸುವುದಿಲ್ಲ ಎಂದು ದೂರಿದರು. ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವುದಾಗಿ ನಾಗಲಕ್ಷ್ಮೀ ಚೌಧರಿ ಭರವಸೆ ನೀಡಿದರು.

ಇದನ್ನೂ ನೋಡಿ: ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ …. ಏನ್ರೀ ದೇಶಪಾಂಡೆ ಇದು? ಅವಹೇಳನಕಾರಿ ಹೇಳಿಕೆಗೆ ಆಕ್ರೋಶJanashakthi Media

Donate Janashakthi Media

Leave a Reply

Your email address will not be published. Required fields are marked *