ಬೆಂಗಳೂರು, ಮೇ 17: ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕತೆಯನ್ನು ಕ್ರಿಯಾಶೀಲಗೊಳಿಸುವ ನೆಪದಲ್ಲಿ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವ ಹಾಗೂ ಹಲವು ಪ್ರಮುಖ ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ಅಮಾನತ್ತುಗೊಳಿಸುವ ಉದ್ದೇಶವನ್ನು ಹೊಂದಿದೆ. ಈಗಾಗಲೆ ಉತ್ತರ ಪ್ರದೇಶ, ಮಧ್ಯಪ್ರದೇಶ ಸರ್ಕಾರಗಳು ಈ ನಿಟ್ಟಿನಲ್ಲಿ ಸುಗ್ರಿವಾಜ್ಞೆ ತರುವ ತೀರ್ಮಾನ ಮಾಡಿವೆ.
ಈ ಬಗ್ಗೆ ವಿವರಿಸಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ರವರು ʻʻಕಾರ್ಮಿಕರು ಸುಧೀರ್ಘ ಕಾಲದ ಹೋರಾಟ ಹಾಗು ತ್ಯಾಗ ಬಲಿದಾನಗಳ ಮೂಲಕ ಪಡೆದ ಎಲ್ಲಾ ಹಕ್ಕುಗಳನ್ನು ಕಿತ್ತೆಸೆಯುವ ಬಂಡವಾಳಶಾಹಿ ಪರ ನೀತಿಗಳನ್ನು ವಿರೋದಿಸುವ ಪ್ರತಿಭಟನೆಯಲ್ಲಿ ಕಾರ್ಮಿಕ ವರ್ಗ ಒಟ್ಟಾಗುವುದು ಅನಿವಾರ್ಯವಾಗಿದ್ದು ನಾಳೆ(18.05.2020) ಕರ್ನಾಟಕ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆʼʼ ಎಂದು ತಿಳಿಸಿದರು.
1. ಪ್ರತಿ ಕಾರ್ಖಾನೆ ಹಾಗು ವಾಣಿಜ್ಯ ಸಂಸ್ಥೆಗಳ ಎದುರು ದೈಹಿಕ ಅಂತರವನ್ನು ಕಾಪಾಡಿಕೊಂಡು ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ಆಡಳಿತ ವರ್ಗದ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಬೇಕು.
2. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಇಲಾಖೆಯ ಕಚೇರಿಗಳ ಎದುರು ದೈಹಿಕ ಅಂತರವನ್ನು ಪಾಲಿಸಿಕೊಂಡು ಪ್ರದರ್ಶನ ನಡೆಸಿ ಮನವಿಪತ್ರಗಳನ್ನು ಸಲ್ಲಿಸಬೇಕು.
3. ರಾಜ್ಯದ ಕಾರ್ಮಿಕ ಆಯುಕ್ತರ ಕಚೇರಿ ಎದುರು ಇದೇ ರೀತಿಯ ಪ್ರದರ್ಶನವನ್ನು ಬೆಳಿಗ್ಗೆ 11.00ಗಂಟೆಗೆ ನಡೆಸಲು ಎಲ್ಲಾ ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ.
ಪ್ರತಿಭಟನೆಗೆ ರಾಜ್ಯದ ಎಲ್ಲಾ ಕಾರ್ಮಿಕರು ಒಂದುಗೂಡಿ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಲು ಹೋರಾಟಕ್ಕೆ ಮುಂದಾಗಲು ಕರೆ ನೀಡಿದರು.