ಬೆಂಗಳೂರು : ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.
ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಯಕರಾಗಿದ್ದ ಹಿರಿಯ ಪತ್ರಕರ್ತ ಕೆ ವಿ ಪ್ರಭಾಕರ್ ಅವರನ್ನು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೆ, ಕೆ ವಿ ಪ್ರಭಾಕರ್ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನೂ ಕೂಡಾ ನೀಡಲಾಗಿದೆ.
ಇದನ್ನೂ ಓದಿ:– ಸರ್ಕಾರ ರಚನೆಗೆ ಕಾಂಗ್ರೆಸ್ ನಿಂದ ಹಕ್ಕು ಮಂಡನೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಸಂದರ್ಭದಲ್ಲಿ ವಿಶೇಷಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಎಂ ವೆಂಕಟೇಶಯ್ಯ ಅವರನ್ನು ಮುಖ್ಯಮಂತ್ರಿಯವರ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಖ್ಯಮಂತ್ರಿಯವರ ವಿಶೇಷಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಲಾಗಿದೆ.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕೆ.ವಿ ಪ್ರಭಾಕರ್, ಕಳೆದ ಹತ್ತು ವರ್ಷಗಳಿಂದಲೂ ಸಿದ್ದರಾಮಯ್ಯ ಬಳಿ ಮಾಧ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ಹೊಸ ಸರ್ಕಾರ ಆಡಳಿತಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಮೊನ್ನೇ ಅಷ್ಟೇ ಅಲೋಕ್ ಮೋಹನ್ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ಸರ್ಕಾರ ನೇಮಕಗೊಳಿಸಿತ್ತು. ಇದೀಗ ಸಿಎಂ ಆಪ್ತ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.