ಕೋಲಾರಕ್ಕೆ ಅಚ್ಚರಿ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್ ಕೆ.ವಿ ಗೌತಮ್‌ಗೆ ಟಿಕೆಟ್‌

ಕೋಲಾರ : ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಹಠಕ್ಕೆ ಬಿದ್ದಿದ್ದ ಆಹಾರ ಸಚಿವ ಕೆ. ಎಚ್​​ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್​​ ರಮೇಶ್‌ಕುಮಾರ್‌ ಸೂಚಿಸಿದ ಅಭ್ಯರ್ಥಿಗೆ ಹೈಕಮಾಂಡ್‌ ಸೊಪ್ಪುಹಾಕದೆ, ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ.  ಬೆಂಗಳೂರು ಮೂಲಕದ ಕೆ.ವಿ ಗೌತಮ್ ಅವರು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ, ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕೋಲಾರದಲ್ಲಿ ಅಭ್ಯರ್ಥಿಯಾಗಿ ಕೆವಿ ಗೌತಮ್‌ ಅವರ ಹೆಸರನ್ನು ಒಪ್ಪಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಲ್ಲೇಶ್‌ ಬಾಬು ಕಣಕ್ಕಿಳಿದಿದ್ದಾರೆ.

ಟಿಕೆಟ್‌ ಆಯ್ಕೆಯ ಕಗ್ಗಂಟಿನ ನಡುವೆ ಬೆಂಗಳೂರು ಕೇಂದ್ರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿರುವ ಕೆವಿ ಗೌತಮ್‌ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಕೋಲಾರದಲ್ಲಿ ಪ್ರಾತಿನಿಧ್ಯಕ್ಕಾಗಿ ರಮೇಶ್‌ ಕುಮಾರ್‌ ಹಾಗೂ ಮುನಿಯಪ್ಪ ಅವರ ತಿಕ್ಕಾಟದ ನಡುವೆ ಎರಡೂ ಬಣಗಳಿಗೆ ಒಪ್ಪಿಗೆಯಾಗಬಲ್ಲ ಮೂರು ಹೆಸರನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ ಕೆವಿ ಗೌತಮ್‌ ಅವರ ಹೆಸರೇ ಪ್ರಮುಖವಾಗಿತ್ತು. ಕೊನೆಗೆ ಇದೇ ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ ಅಂತಿಮ ಮಾಡಿದೆ.

ಇದನ್ನೂ ಓದಿಕೋಲಾರದಲ್ಲಿ ನಿಲ್ಲದ ಕೈ ಕಸರತ್ತು : ಐವರು ಶಾಸಕರಿಂದ ರಾಜೀನಾಮೆ ಬೆದರಿಕೆ!

ಸಚಿವ ಕೆಎಚ್​ ಮುನಿಯಪ್ಪ ರಮೇಶ್ ಕುಮಾರ್ ಬಣದ ಕಿತ್ತಾಟದಲ್ಲಿ ಮೂರನೇಯವರಿಗೆ ಲಾಭ ಆಗಿದೆ ಎಂಬ ಮಾತು ಕೇಳಿ ಬಂದಿದೆ. ಕೋಲಾರದಲ್ಲಿ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಸೂಕ್ತ ಅಭ್ಯರ್ಥಿ ಎಂದು ಮುನಿಯಪ್ಪ ಅವರು ಟಿಕೆಟ್ ಗೆ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಇದೀಗ ಹೈಕಮಾಂಡ್‌ ಕೆ.ವಿ ಗೌತಮ್‌ಗೆ  ಟಿಕೆಟ್ ಕೊಟ್ಟು, ಮುನಿಯಪ್ಪ ಅವರನ್ನ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿಸಿದೆ. ಇತ್ತ ಕೊನೆಗೂ ರಮೇಶ್ ಕುಮಾರ್ ಬಣ ಮುನಿಯಪ್ಪ ಅಳಿಯನಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಕೋಲಾರ ಬಣ ಕಿತ್ತಾಟಕ್ಕೆ ಹೈಕಮಾಂಡ್ ತೆರೆ ಎಳೆದಿದೆ. ಇದರೊಂದಿಗೆ ರಾಜ್ಯದ 28 ಕ್ಷೇತ್ರಗಳಿಗೂ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.

 

 

Donate Janashakthi Media

Leave a Reply

Your email address will not be published. Required fields are marked *