ಮೈಸೂರು: ‘ಕುಟುಂಬ ರಾಜಕಾರಣ ಯಾರು ಮಾಡುತ್ತಾರೆ ಎಂಬುದು ಇಡೀ ರಾಜ್ಯ ಹಾಗೂ ದೇಶಕ್ಕೆ ಗೊತ್ತು. ಅದನ್ನು ನಾನು ಹೇಳುವ ಅಗತ್ಯ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ದ್ವೇಷವಿಲ್ಲ. ಕೇವಲ ತತ್ವ ಸಿದ್ದಾಂತದ ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಿದರು.
ಇತ್ತೀಚಿಗೆ ಹೆಚ್ ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
‘ಸಿದ್ಧಸೂತ್ರ ಕಾಂಗ್ರೆಸ್ ಫ್ಯಾಮಿಲಿ’ ಎಂದು ಎಚ್‌ಡಿಕೆ ಹೇಳಿದ್ದಕ್ಕೆ, ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ನಾನು ಯಾರ ಮೇಲು ಟೀಕೆ ಮಾಡುತ್ತಿಲ್ಲ. ಕೇವಲ ವಿಚಾರಧಾರಿತ ವಿಷಯಗಳ ಬಗ್ಗೆ ಮಾತ್ರ ನಾನು ಟೀಕಿಸುತ್ತಿರುವೆ. ಜೆಡಿಎಸ್ನವರು ಜಾತ್ಯಾತೀತ ಎಂದು ಹೇಳಿಕೊಳ್ತಾರೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆ ಬಗ್ಗೆ ನಾನು ಮಾತನಾಡಿದರೆ ಅವರ ಮೇಲೆ ದ್ವೇಷ ಸಾಧಿಸುತ್ತಿದ್ದೇನೆಂದು ಹೇಳುತ್ತಾರೆ.
‘ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಮೀಸಲಾತಿ ವಿರೋಧಿಗಳು. ಅವರು ಸ್ಥಳೀಯ ಸಂಸ್ಥೆಗಳಿಗೆ ಏನು ಕೊಡುಗೆ ನೀಡಿಲ್ಲ. ಡಿಸೆಂಬರ್ 10ರ ಪರಿಷತ್ ಚುನಾವಣೆಯಲ್ಲಿ ಮತಹಾಕುವ ವೇಳೆ ಮತದಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಒಂದು ಗಂಟೆಗಳ ಸುದ್ದಿಗೋಷ್ಠಿ ನಡೆಸಿದ ನಾನು, ಒಂದೇ ಒಂದು ಮಾತನ್ನ ಜೆಡಿಎಸ್ ಬಗ್ಗೆ ಮಾತನಾಡಿಲ್ಲ. ಕೇವಲ ವಿಚಾರಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದೆ. ಅದು ಕೇವಲ ಬಿಜೆಪಿ ಬಗ್ಗೆ ಮಾತ್ರವೇ ಆಗಿತ್ತು. ಅಲ್ಲಿಗೆ ನಿಮಗೆ ಗೊತ್ತಾಗುತ್ತೆ ನಾನು ಅನಗತ್ಯವಾಗಿ ಜೆಡಿಎಸ್ ಬಗ್ಗೆ ಮಾತಾಡಲ್ಲ ಅಂತ ಎಂದರು.