ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ : ಮತ್ತೊಮ್ಮೆ ಸಂಕಷ್ಟಕ್ಕೀಡಾದ ಅರಣ್ಯವಾಸಿಗಳು

ಕುತ್ಲೂರು: ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಜುಲೈ 26 ರ ಬುಧವಾರ ಕುಸಿದಿದೆ. ಈ ಬಾರಿಯೂ ನಮ್ಮ ಸೇತುವೆಗೂ ಒಂದು ಹೆಸರಿಡಿ ಎಂದು ಅಲ್ಲಿ ವಾಸಿಸುವ ಸಂಕಷ್ಟಕ್ಕೀಡಾದ ಅರಣ್ಯವಾಸಿಗಳ ನೋವಿನ ಮಾತಾಗಿದೆ.

ಸುಮಾರು 30 ಅರಣ್ಯವಾಸಿ ಮಲೆಕುಡಿಯ ಮತ್ತು ಇತರ ಅರಣ್ಯವಾಸಿ ಕುಟುಂಬಗಳಿಗೆ ಸಂಪರ್ಕಿಸುವ ಸೇತುವೆ ಇದಾಗಿತ್ತು. ಸುಮಾರು 50 ವರ್ಷದ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಸೇತುವೆಯ ಮಧ್ಯದ ಪಿಲ್ಲರ್ ಕುಸಿದಿದೆ. ಅರಣ್ಯವಾಸಿಗಳು ಈ ಸೇತುವೆ ಮೂಲಕವೇ ಸಂಚಾರ ಮಾಡುತ್ತಿದ್ದರು. ಇದೀಗ ಸೇತುವೆ ಕುಸಿದಿರುವುದರಿಂದ ತೊಂದರೆಯಾಗಿದೆ. ಇನ್ನು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯ ನಿರ್ಮಾಣವಾಗಿದೆ.

ಇದನ್ನೂ ಓದಿ:ಬಡವರ ಸಾಗುವಳಿ ಭೂಮಿ ಕಿತ್ತುಕೊಳ್ಳುತ್ತಿರುವ ಬಿಜೆಪಿ ಸರ್ಕಾರ: ಬಿ.ಕೆ. ಹರಿಪ್ರಸಾದ್‌

ಅರಣ್ಯವಾಸಿಗಳಿಗೆ ಸಂಚಾರಿ ವಾಹನದ ಮೂಲಕ ಅಳಂಬ ಪ್ರದೇಶಕ್ಕೆ ಪಡಿತರ ವಿತರಣೆಯಾಗುತ್ತಿತ್ತು. ನಂತರ ಕಾಲ್ನಡಿಗೆಯ ಮೂಲಕವೇ ತಮ್ಮ ಮನೆಗಳಿಗೆ ಪಡಿತರವನ್ನು ಸಾಗಿಸುತ್ತಿದ್ದರು. ಇದೀಗ ಕಾಡಬಾಗಿಲು ಸೇತುವೆ ಕುಸಿತವಾಗಿರುವುದರಿಂದ ಇನ್ನು ಪಡಿತರ ಸೇರಿದಂತೆ ಇನ್ನಿತರ ವಸ್ತುಗಳನ್ನೂ ಕಾಲ್ನಡಿಗೆಯಲ್ಲೇ ಮೂರ್ನಾಲ್ಕು ಕಿಲೋಮೀಟರ್ ಹೆಚ್ಚುವರಿಯಾಗಿ ಹೊತ್ತೊಯ್ಯುವ ಅನಿವಾರ್ಯ ಬರಲಿದೆ. ತುರ್ತು ಸಂದರ್ಭಗಳಲ್ಲೂ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಹಲವು ವರ್ಷದ ಹಿಂದೆಯೇ ಬೀಳಬಹುದಾಗಿದ್ದ ಈ ಸೇತುವೆ ಇಂದಿನವರೆಗೂ ಉಳಿದಿತ್ತು. ಆದರೆ ಈ ಬಾರಿ ಸೇತುವೆ ಕುಸಿದೇ ಬಿಟ್ಟಿದೆ. ಪಶ್ಚಿಮ ಘಟ್ಟದಿಂದ ಹರಿದು ಬರುವ ನೀರು ಇಲ್ಲಿನ ಜನರನ್ನು ದಿಗ್ಭಂಧನಕ್ಕೆ ಒಳಪಡಿಸಲಿದೆ. ಮೂರು ವರ್ಷದ ಹಿಂದೆ ಕುಕ್ಕುಜೆ ಸಮೀಪದ ಸೇತುವೆ ಇದೇ ರೀತಿ ಕುಸಿತವಾಗಿತ್ತು. ನಂತರ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ಕಾಡಬಾಗಿಲು ಸೇತುವೆಯನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಕಾಡಬಾಗಿಲು ಸೇತುವೆಯನ್ನೂ ಹೊಸದಾಗಿ ನಿರ್ಮಿಸುವಂತೆಯೂ ಮನವಿ ಮಾಡಲಾಗಿತ್ತು. ಆದರೂ ಹೊಸ ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ. ಇದೀಗ ಸೇತುವೆ ಕುಸಿತ ಆಗಿರುವುದರಿಂದ ಸಂಪರ್ಕವೇ ಸಾಧ್ಯವಿಲ್ಲದಂತಾಗಿದೆ.

ಕಾಡಬಾಗಿಲು ಸೇತುವೆಯನ್ನು ತಕ್ಷಣವೇ ನಿರ್ಮಾಣ ಮಾಡಬೇಕು. ಅರಣ್ಯವಾಸಿಗಳಿಗೆ ಸಂಚರಿಸಲು ತೊಂದರೆಯಾಗದಂತೆ ಕ್ರಮ ವಹಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *