ಸಿ.ಸಿದ್ದಯ್ಯ
ಕುಸ್ತಿಪಟುಗಳ ಪ್ರತಿಭಟನೆಗಳ ನಂತರ ಸರ್ಕಾರ, ಮಹಿಳಾ ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ಬಂಟ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಒಕ್ಕೂಟದ ನೂತನ ಸಮಿತಿಯನ್ನು ವಿಸರ್ಜನೆ ಮಾಡಿ, ಹೊಸದಾಗಿ ತಾತ್ಕಾಲಿಕ ಸಮಿತಿ ರಚನೆ ಮಾಡಿದೆ. ಆದರೆ ಇದಿಷ್ಟೇ ಸಾಲದು, ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕಿದೆ. ಮತ್ತು ಕ್ರೀಡಾ ಸಂಸ್ಥೆಗಳನ್ನು ನಿಜವಾಗಿಯೂ ಮಹಿಳೆಯರನ್ನು ಒಳಗೊಳ್ಳುವ, ಹೆಚ್ಚು ಪ್ರಜಾಸತ್ತಾತ್ಮಕವಾದ, ಪಾರದರ್ಶಕವಾದ ಮತ್ತು ಜವಾಬುದಾರ ಸಂಸ್ಥೆಗಳಾಗಿ ಮಾಡಬೇಕಾಗಿದೆ ಎಂದು ಕ್ರೀಡಾ ಪ್ರೇಮಿಗಳು ಮತ್ತು ನ್ಯಾಯವನ್ನು ಪ್ರೀತಿಸುವ ಜನರು ಹೇಳುತ್ತಿದ್ದಾರೆ. ಕುಸ್ತಿ
ಕುಸ್ತಿಪಟುಗಳ ಪ್ರತಿಭಟನೆಗೆ ವಿವಿಧ ವಲಯಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕ್ರೀಡಾ ಸಚಿವಾಲಯವು, ಡಿಸೆಂಬರ್ 21 ರಂದು ಆಯ್ಕೆಯಾಗಿದ್ದ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ನೂತನ ಕಾರ್ಯಕಾರಿ ಸಮಿತಿಯನ್ನು ಡಿಸೆಂಬರ್ 24ರಂದು ವಿಸರ್ಜಿಸಿದೆ. 3 ದಿನಗಳ ನಂತರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಸಿ) ಡಿಸೆಂಬರ್ 27ರಂದು ಭೂಪಿಂದರ್ ಸಿಂಗ್ ಬಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿಯನ್ನು ನೇಮಕ ಮಾಡಿದೆ. ಎಂ.ಎಂ. ಸೋಮಯ ಮತ್ತು ಮಂಜುಷಾ ಕನ್ವರ್ ಅವರು ತಾತ್ಕಾಲಿಕ ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಪ್ರಕಟಿಸಲಾಗಿದೆ.
ಡಬ್ಲ್ಯುಎಫ್‌ಐ ನಲ್ಲಿ ನ್ಯಾಯಸಮ್ಮತತೆ, ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಈ ತಾತ್ಕಾಲಿಕ ಸಮಿತಿಯನ್ನು ನೇಮಿಸಲಾಗಿದೆ ಎಂದು ಐಒಸಿ ಹೇಳಿದೆ. ಡಬ್ಲ್ಯುಎಫ್‌ಐ ಗೆ ಇತ್ತೀಚೆಗೆ ಆಯ್ಕೆಯಾದ ಅಧ್ಯಕ್ಷರು ಮತ್ತು ಅಧಿಕಾರಿಗಳು ಕುಸ್ತಿಯ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಐಒಸಿ ಮುಖ್ಯಸ್ಥೆ ಪಿಟಿ ಉಷಾ ಪತ್ರವೊಂದರಲ್ಲಿ ಪ್ರಸ್ತಾಪಿಸಿದ್ದರು. ಐಒಸಿ ಪ್ರಸ್ತಾಪಿಸಿದ ಉತ್ತಮ ಆಡಳಿತದ ತತ್ವಗಳಿಗೆ ವಿರುದ್ಧವಾಗಿ ಅದು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಸರ್ವಾಧಿಕಾರದ ರೀತಿಯಲ್ಲಿ ವರ್ತಿಸಿತು ಎಂದು ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.
ನಿವೃತ್ತಿ ಘೋಷಿಸಿದ ಸಾಕ್ಷಿ ಮಲಿಕ್
ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸ್ನೇಹಿತ ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್‌ಐ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಈ ಆಯ್ಕೆಗೆ ಕುಸ್ತಿಪಟುಗಳು ಬೇಸರ ವ್ಯಕ್ತಪಡಿಸಿದರು. ಈ ಬೆಳವಣಿಗೆ ಬಗ್ಗೆ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ನಿವಾಸದಿಂದಲೇ ಡಬ್ಲ್ಯುಎಫ್‌ಐ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎಂದು ವಿನೇಶ್ ಫೋಗಟ್ ಆಕ್ರೋಶ ವ್ಯಕ್ತಪಡಿಸಿದರು. ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಘೋಷಿಸಿದರು. ಖ್ಯಾತ ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಬಜರಂಗ್ ಪುನಿಯಾ ಮತ್ತು ರವೀಂದರ್ ಸಿಂಗ್ ಯಾದವ್ ತಮಗೆ ಕೇಂದ್ರ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಹೇಳಿದರು.
ಬಹುಶಃ, ಈ ಒತ್ತಡದ ಸನ್ನಿವೇಶಗಳಿಂದಾಗಿ ಕೇಂದ್ರವು ಹೊಸ ಸಮಿತಿಯನ್ನು ವಿಸರ್ಜಿಸಿ, ಹೊಸದಾಗಿ ತಾತ್ಕಾಲಿಕ ಸಮಿತಿಯನ್ನು ನೇಮಿಸಿದೆ. ಸಂಜಯ್ ಸಿಂಗ್ ಅಧ್ಯಕ್ಷರಾಗಿದ್ದ ಸಮಿತಿಯ ವಿಸರ್ಜನೆಗೆ ಕ್ರೀಡಾ ಸಚಿವಾಲಯವು ಉಲ್ಲೇಖಿಸಿರುವ ಕಾರಣಗಳು ಕೇವಲ ನೆಪಮಾತ್ರವಾಗಿದೆ.
ಕ್ರಮಕ್ಕೆ ಒತ್ತಾಯಿಸಿ ತಿಂಗಳುಗಳ ಕಾಲ ಪ್ರತಿಭಟನೆ
ಈ ಹಿಂದೆಯೂ ಕುಸ್ತಿಪಟುಗಳಿಂದ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಮತ್ತು ಕೋಚ್‌ಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಪ್ರತಿಭಟಿಸಿದ್ದರು.
ಜನವರಿ 18, 2023 ರಿಂದ, ಅವರು ತಿಂಗಳುಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ಕ್ರೀಡಾಪಟುಗಳೊಂದಿಗೆ ಒಟ್ಟಾಗಿ ಪ್ರತಿಭಟಿಸಿದರು. ಇದು 2023 ರ ಅತ್ಯಂತ ಗಮನಾರ್ಹವಾದ ಪ್ರತಿಭಟನಾ ಚಳುವಳಿಗಳಲ್ಲಿ ಒಂದಾಗಿದೆ. ಇಬ್ಬರು ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ಪ್ರದರ್ಶಿಸಿದ ಅದ್ಭುತ ದೃಢತೆ ಮತ್ತು ಧೈರ್ಯವು ಭಜರಂಗ್ ಪೂನಿಯಾ ಅವರೊಂದಿಗೆ ಮಹಿಳಾ ಸಂಘಟನೆಗಳು, ರೈತ ಸಂಘಗಳು, ಕ್ರೀಡಾಪಟುಗಳು, ವಿವಿಧ ಸಾಮಾಜಿಕ ಸಂಘಟನೆಗಳು, ಖಾಪ್ ಪಂಚಾಯತ್‌ಗಳು, ವಿದ್ಯಾರ್ಥಿಗಳು, ಮತ್ತು ಯುವ ಮೋರ್ಚಾಗಳು ಸೇರಿದಂತೆ ದೊಡ್ಡ ದೊಡ್ಡ ಸಂಘಟನೆಗಳಿಂದ ಅಭೂತಪೂರ್ವ ಸೌಹಾರ್ದವನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಆದರೆ, ಮೋದಿ ಸರ್ಕಾರ ಇವರ ನೋವಿನ ದ್ವನಿಗೆ ಕಿವಿಗೊಡಲಿಲ್ಲ. ಮುಂದುವರಿದು, ಕ್ರೀಡಾಪಟುಗಳು ಮೇ 28ರಂದು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ತೆರಳಿ ತಮ್ಮ ಪ್ರತಿಭಟನಾ ದನಿ ಎತ್ತಲು ಯತ್ನಿಸಿದರು. ಕೇಂದ್ರ ಸರಕಾರದ ಅಡಿಯಲ್ಲಿರುವ ದಿಲ್ಲಿ ಪೋಲೀಸ್ ಕಠೋರವಾಗಿ ವರ್ತಿಸಿ ಅವರನ್ನು ತಡೆದಿತ್ತು. ಇದು ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಕ್ರೀಡಾ ಪಟುಗಳ ಬಗ್ಗೆ ಮೋದಿ ಸರ್ಕಾರ ಕಠೋರ ನಡವಳಿಕೆ ಎಂದು ವ್ಯಾಪಕ ಟೀಕೆಗೆ ಒಳಗಾಯಿತು.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರವೇ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾಗಿ ತಿಂಗಳುಗಳೇ ಕಳೆದರೂ ಸೂಕ್ತ ತನಿಖೆಯಾಗಿಲ್ಲ, ಕ್ರಮಕೈಗೊಂಡಿಲ್ಲ. ಸಹಜವಾಗಿ, ಕುಸ್ತಿಪಟುಗಳ ಆಂದೋಲನವು ದೊಡ್ಡದಾಗಿತ್ತು. ಅವರು ತಮ್ಮ ಪದಕಗಳನ್ನು ಗಂಗೆಯ ನೀರಿನಲ್ಲಿ ಮುಳುಗಿಸುವ ಮಟ್ಟಕ್ಕೆ ಹೋದರು. ರೈತ ಮುಖಂಡರ ಮಧ್ಯಪ್ರವೇಶ ಮತ್ತು ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮತ್ತು ಬ್ರಿಜ್‍ಭೂಷಣ್ ನಿಕಟವರ್ತಿಗಳಾರೂ ಡಬ್ಲ್ಯುಎಫ್‍ಐ ನಲ್ಲಿ ಇರುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದ್ದರಿಂದ ಆಂದೋಲನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಆದರೆ ಸರಕಾರ ಈ ಆಶ್ವಾಸನೆಯಂತೆ ನಡೆದುಕೊಳ್ಳಲಿಲ್ಲ.
“ರೋಪು ಇತ್ತು.. ರೋಪು ಇರುತ್ತದೆ”
2021 ರಿಂದ ಡಬ್ಲ್ಯುಎಫ್‌ಐ ಚುನಾವಣೆಗಳು ಅನೇಕ ವಿವಾದಗಳಿಂದಾಗಿ ನಡೆದಿಲ್ಲ. ಕೊನೆಗೂ ಡಿಸೆಂಬರ್ 21ರಂದು ಚುನಾವಣೆ ನಡೆದು ಬ್ರಿಜ್ ಭೂಷಣ್ ಕಟ್ಟಾಳು ಸಂಜಯ್ ಕುಮಾರ್ ಸಿಂಗ್ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರನ್ನು ಸೋಲಿಸಿ ವಿಜಯಶಾಲಿಯಾದರು. ನಂತರ 15 ಪುರುಷರೇ ಇರುವ ಸಮಿತಿ ರಚನೆಯಾಗಿದೆ, ಇವರಲ್ಲಿ 13 ಮಂದಿ ಬ್ರಿಜ್ ಭೂಷಣ್ ಅವರ ನಿಷ್ಠಾವಂತರು.
ಈ ಫಲಿತಾಂಶದಲ್ಲಿ ಆಶ್ಚರ್ಯವೇನೂ ಇಲ್ಲ ಎನ್ನುತ್ತಾರೆ ಸ್ವತಃ ಹರ‍್ಯಾಣದ ಕ್ರೀಡಾಪಟುವೂ ಆಗಿರುವ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಜಗ್ಮತಿ ಸಂಗ್ವಾನ್. ಏಕೆಂದರೆ ಬೇರೆ ಬೇರೆ ರಾಜ್ಯಗಳ 50 ಮತದಾರರ ಮೇಲೆ, ಬಲವಾದ ರಾಜಕೀಯ ಕೃಪಾಪೋಷಣೆ ಇರುವ ಬ್ರಿಜ್ ಭೂಷಣ್ ಪ್ರಭಾವ ಚಲಾಯಿಸುವುದು ಕಷ್ಟವೇನಲ್ಲ. ಆದರೂ, ಇಂತಹ ಸನ್ನಿವೇಶದಲ್ಲೂ ಅಧಿಕಾರಮತ್ತ ಕೂಟದ ಸವಾಲನ್ನು ಎದುರಿಸಿ ಒಬ್ಬ ಮಹಿಳಾ ಕುಸ್ತಿಪಟು ಸ್ಪರ್ಧಿಸುವ ಧೈರ್ಯ ಮಾಡಿದ್ದು ನಿಜಕ್ಕೂ ಗಮನಾರ್ಹ ಎನ್ನುತ್ತಾರೆ ಜಗ್ಮತಿ.
ಬ್ರಿಜ್‌ಭೂಷಣ್ ಗ್ಯಾಂಗ್ ಈ ‘ವಿಜಯ’ದ ನಂತರ ಮೆರೆದ ಅಹಂಕಾರ, ತೋರಿದ ಬಲಪ್ರದರ್ಶನ ಅವರಿಗೇ ಮುಳುವಾಗಿರುವಂತೆ ಕಾಣುತ್ತದೆ. ಡಿಸೆಂಬರ್ 22ರಂದು ಹಾಲಿ ಚುನಾಯಿತ ಡಬ್ಲ್ಯುಎಫ್‍ಐ ಅಧ್ಯಕ್ಷ ಮತ್ತು ಆತನಿಗಿಂತಲೂ ಹೆಚ್ಚು ಮಾಲೆಗಳನ್ನು ಧರಿಸಿದ್ದ ಮಾಜಿ ಅಧ್ಯಕ್ಷ ಒಟ್ಟಾಗಿ ವಿಜಯದ ಸಂಕೇತ ಪ್ರದರ್ಶಿಸುವ ಚಿತ್ರ ಮತ್ತು ಬ್ರಿಜ್ ಭೂಷಣ್‌ರ ಎಂಪಿ ಬಂಗಲೆಯಲ್ಲಿ ಆತನ ಮಗ ಪ್ರದರ್ಶಿಸಿದ “ದಬ್ದಬಾ ತೋ ಹೈ .. ದಬ್ದಬಾ ತೋ ರಹೇಗಾ”(ರೋಪು ಅಂತೂ ಇತ್ತು.. ರೋಪು ಅಂತೂ ಇರುತ್ತದೆ) ಎಂಬ ಫಲಕದ ಚಿತ್ರ ಇಡೀ ದೇಶದ ಗಮನ ಸೆಳೆದಿದೆ. ಸಾಲದ್ದಕ್ಕೆ ಕಿರಿಯ ಕುಸ್ತಿಪಟುಗಳ ರಾಷ್ಟ್ರೀಯ ಸ್ಪರ್ಧಾಕೂಟವನ್ನು ಬ್ರಿಜ್‍ಭೂಷಣ್ ಅವರ ಲೋಕಸಭಾ ಕ್ಷೇತ್ರವಾದ ಗೊಂಡ್‍ನ ಸಮೀಪವೇ ನಡೆಸುವುದಾಗಿ ಡಬ್ಲ್ಯುಎಫ್‍ಐ ಚುನಾವಣೆ ಗೆದ್ದ ದಿನವೇ ಸಂಜಯ್ ಸಿಂಗ್ ಪ್ರಕಟಿಸಿದರು. ಇತ್ತ ಸಾಕ್ಷಿ ಮಲಿಕ್ ಪತ್ರಿಕಾ ಸಮ್ಮೇಳನದಲ್ಲಿ ತನ್ನ ಕುಸ್ತಿ ಬೂಟುಗಳನ್ನು ಮೇಜಿನ ಮೇಲಿಟ್ಟು ನಾನು ಕುಸ್ತಿ ಬಿಡುತ್ತಿದ್ದೇನೆ ಎಂದು ಸಾರಿದ ಚಿತ್ರ ಮತ್ತು ನಂತರ ಅವರ ಸಹ-ಹೋರಾಟಗಾರರ ಕ್ರಮಗಳು ಕೊನೆಗೂ ಕೇಂದ್ರ ಕ್ರೀಡಾ ಸಚಿವಾಲಯದ ಮೇಲೆ ಒತ್ತಡ ತಂದವು ಎನ್ನಲಾಗಿದೆ. ಆದರೂ ಈಗಲೂ ಅದು ಕ್ರಮ ಕೈಗೊಂಡದ್ದು, ಮೇಲೆ ಹೇಳಿದಂತೆ, ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಕಾರಣ ಕೊಟ್ಟು ಎಂಬುದನ್ನು ಗಮನಿಸಬೇಕು. ಅಲ್ಲದೆ, ಈಗ ಸಂಜಯ್ ಸಿಂಗ್ ಕ್ರೀಡಾ ಸಚಿವಾಲಯದ ಕ್ರಮವನ್ನು ಪ್ರಶ್ನಿಸುತ್ತಿದ್ದಾರೆ, ಕಾನೂನಿನ ಕ್ರಮದ ಬೆದರಿಕೆಯನ್ನೂ ಹಾಕಿದ್ದಾರೆ.
‘ಬೇಟಿ ಖಿಲಾವೋ’ ಎಂಬುದು ‘ಬೇಟಿ ರುಲಾವೋ’ ಆಗದಿರಲಿ
ಈ ನಡುವೆ ಮೂಡಬರುತ್ತಿರುವ ಚಿತ್ರವೆಂದರೆ, ಒಂದೆಡೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಪಾಳಯ ಡಬ್ಲ್ಯುಎಫ್‌ಐ ಚುನಾವಣೆ ತಾವು ನಿರಪರಾಧಿಗಳು, ತಮ್ಮ ಮೇಲಿನ ಆಪಾದನೆಗಳು ರಾಜಕೀಯ ಪ್ರೇರಿತ ಎಂದು ಸಾಬೀತು ಪಡಿಸಿವೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆಯಲ್ಲಿ ನಿರಾಸೆಯ, ಹತಾಶೆಯ ವಾತಾವರಣದಲ್ಲಿಯೂ ಕುಸ್ತಿಪಟುಗಳು, ಕ್ರೀಡಾ ಪ್ರೇಮಿಗಳು ಮತ್ತು ನ್ಯಾಯವನ್ನು ಪ್ರೀತಿಸುವ ಜನರು ತಮಗೆ ಒಂದು ಹುಮ್ಮಸ್ಸು ನೀಡುವ ಬೆಳಕು ಕಾಣಿಸುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.
ಆದಾಗ್ಯೂ, ಹೆಚ್ಚು ಆಳವಾದ ಆತಂಕ ಮೂಡುವ ಸಂಗತಿಯೆಂದರೆ, ಇತ್ತೀಚಿನ ದಶಕಗಳಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಲಾರಂಭಿಸಿರುವ ಪಾಲಕರ ಮನಸ್ಸನ್ನು ಘಾಸಿಗೊಳಿಸಿರುವ ಈ ಬೆಳವಣಿಗೆಗಳು ಎನ್ನುತ್ತಾರೆ ಜಗ್ಮತಿ ಸಂಗ್ವಾನ್. ಕ್ರೀಡೆಗಳು ಒದಗಿಸುತ್ತಿರುವ ಉತ್ತಮ ಉದ್ಯೋಗಾವಕಾಶಗಳು ಮತ್ತು ಜತೆಗೆ ಪದಕ ಗೆಲ್ಲುವ ಹೆಮ್ಮೆಯ ಭಾವನೆಯಿಂದಾಗಿ, ಸಾಮಾಜಿಕ-ಸಾಂಸ್ಕೃತಿಕ ಕಟ್ಟುಕಟ್ಟಳೆಗಳನ್ನೂ ಬದಿಗೊತ್ತುವ ಸಕಾರಾತ್ಮಕ ಬೆಳವಣಿಗೆ ಗ್ರಾಮೀಣ ಪ್ರದೇಶಗಳಲ್ಲಿ, ಮುಖ್ಯವಾಗಿ ಹರ‍್ಯಾಣಾದಲ್ಲಿ ಕಂಡು ಬಂದಿತ್ತು. ಆದರೆ ಇತ್ತೀಚಿನ ಈ ಬೆಳವಣಿಗೆಗಳು ಈ ಹುಡುಗಿಯರ ಆತ್ಮವಿಶ್ವಾಸವನ್ನು ಅಲುಗಾಡಿಸಿ ಬಿಟ್ಟಿದೆ. ಇಂತಹ ಸನ್ನಿವೇಶದಲ್ಲಿ ಚುನಾಯಿತ ಸಮಿತಿಯ ವಿಸರ್ಜನೆ ಮಾತ್ರದಿಂದ ಮಹಿಳಾ ಕ್ರೀಡಾಪಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಭಾರೀ ನಂಬಿಕೆ ಕೊರತೆಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಈ ಕ್ರಮವು ಸಮಸ್ಯೆಯನ್ನು ಪರಿಹರಿಸಲು ಕೇವಲ ಮೇಲ್ನೋಟದ ಪ್ರಯತ್ನವೆಂದು ಸಾಬೀತಾಗಬಹುದು. ಸಮಿತಿ ವಿಸರ್ಜನೆಯಿಂದ ಕೇಂದ್ರ ಸರ್ಕಾರದ ಪಾತ್ರ ಮುಗಿಯಲಿಲ್ಲ. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಹಿಳಾ ಆಟಗಾರ್ತಿಯರಿಗೆ ಒಂದಿಷ್ಟು ಸಮಾಧಾನ ಸಿಗುತ್ತದೆ.
ಕುಸ್ತಿಪಟುಗಳ ಆಂದೋಲನದಲ್ಲಿ ಮಹಿಳಾ ಸಂಘಟನೆಗಳು ಪ್ರಮುಖ ಪಾತ್ರವಹಿಸಿದ್ದು, ಈ ಸಂದರ್ಭದಲ್ಲಿ ಮಹಿಳಾ ಚಳವಳಿ ಸೇರಿದಂತೆ ಎಲ್ಲಾ ವಿಭಾಗಗಳು ಮಹಿಳೆಯರ ಸುರಕ್ಷತೆ ಮತ್ತು ಸ್ವಾಭಿಮಾನಕ್ಕಾಗಿ ಸಾಮೂಹಿಕವಾಗಿ ಮತ್ತು ಸ್ವತಂತ್ರವಾಗಿ ಹೋರಾಟವನ್ನು ತೀವ್ರವಾಗಿ ಮುಂದುವರಿಸಬೇಕಿದೆ. ಕ್ರೀಡಾ ಸಂಸ್ಥೆಗಳನ್ನು ನಿಜವಾಗಿಯೂ ಮಹಿಳೆಯರನ್ನು ಒಳಗೊಳ್ಳುವ, ಹೆಚ್ಚು ಪ್ರಜಾಸತ್ತಾತ್ಮಕವಾದ, ಪಾರದರ್ಶಕವಾದ ಮತ್ತು ಜವಾಬುದಾರ ಸಂಸ್ಥೆಗಳಾಗಿ ಕೆಲಸ ಮಾಡಬೇಕಾಗಿದೆ. ಇದರಲ್ಲಿ ಕುಸ್ತಿಪಟುಗಳ ಜಂತರ್ ಮಂತರ್ ಚಳುವಳಿಯನ್ನು ಕ್ರೋಡೀಕರಿಸಬೇಕಾಗಿದೆ, ಹಲವು ರೀತಿಗಳಲ್ಲಿ ವಿಸ್ತರಿಸಬೇಕಾಗಿದೆ ಎನ್ನುವ ಜಗ್ಮತಿ ಸಂಗ್ವಾನ್, ಪ್ರಧಾನ ಮಂತ್ರಿಗಳು ಕ್ರೀಡಾರಂಗದಲ್ಲಿ ಹೆಣ್ಣುಮಕ್ಕಳ ಪಾತ್ರವನ್ನು ಗುರುತಿಸುತ್ತ ‘ಬೇಟಿ ಬಚಾವೋ ಬೇಟೀ ಪಢಾವೋ’ ಘೋಷಣೆಯನ್ನು ‘ಬೇಟಿ ಖಿಲಾವೊ’( ಮಗಳನ್ನು ಆಡಿಸಿ)ಗೆ ವಿಸ್ತರಿಸಬೇಕು ಎಂದು ಸೂಚಿಸಿದ್ದರು ಎಂದು ನೆನಪಿಸುತ್ತಾರೆ. ಆದರೆ ನಾವು 2024ನ್ನು ಪ್ರವೇಶಿಸುತ್ತಿರುವಂತೆ, ಇದು ‘ಬೇಟಿ ರುಲಾವೋ’ (ಮಗಳನ್ನು ಅಳಿಸಿ) ಆಗದಂತೆ ಸಾಮೂಹಿಕವಾಗಿ ಖಾತ್ರಿ ಪಡಿಸಬೇಕು ಎಂದು ಅವರು ಹೇಳುತ್ತಾರೆ.