ಕುಶಿನಗರ: ಮದುವೆ ಸಂಭ್ರಮದಲ್ಲಿದ್ದವರು ಯಾರೂ ಸಹ ಊಹಿಸಲು ಅಸಾಧ್ಯವಾದ ಘಟನೆಯೊಂದು ನಡೆದಿದೆ. ಮದುವೆ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯುತ್ತಿದ್ದ ವೇಳೆ ಸುಮಾರು 13 ಮಂದಿ ಮಹಿಳೆಯರು ಮತ್ತು ಬಾಲಕಿಯರು ಆಕಸ್ಮಿಕವಾಗಿ ಬಾವಿಗೆ ಬಿದ್ದು ದುರಂತ ಸಾವನ್ನಪ್ಪಿರುವ ಘಟನೆಯು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಸಂಭವಿಸಿದೆ.
ಈ ಘಟನೆ ನಡೆದಿರುವುದು ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಗ್ರಾಮದಲ್ಲಿ. ಜರುಗಿದ್ದು, ಮಹಿಳೆಯರು ಮತ್ತು ಮಕ್ಕಳು ಕುಳಿತಿದ್ದ ಕಬ್ಬಿಣದ ಗ್ರಿಲ್ ಏಕಾಏಕಿ ಮುರಿದು ಬಾವಿಗೆ ಬಿದ್ದ ಕಾರಣ ಈ ದುರಂತ ಘಟಿಸಿದೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ.
ಮದುವೆ ಮನೆಯಲ್ಲಿ ಹಳದಿ ಶಾಸ್ತ್ರ ನಡೆಯುತ್ತಿತ್ತು. ಅನೇಕ ಯುವತಿಯರು, ಬಂಧು-ಬಳಗದವರು ಭಾಗವಹಿಸಿದ್ದರು. ಬಾವಿಯ ಕಟ್ಟೆಯ ಮೇಲೆ ಕುಳಿತು ಹಳದಿ ಶಾಸ್ತ್ರವನ್ನು ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಬಾವಿಯ ಮೇಲಿದ್ದ ಕಬ್ಬಿಣದ ಗ್ರಿಲ್ ಮುರಿದಿದೆ. ಆಗ ಬಾವಿಯ ಮೇಲೆ ನಿಂತಿದ್ದ ಅಷ್ಟೂ ಮಹಿಳೆಯರು ಆಕಸ್ಮಿಕವಾಗಿ ಬಾವಿಗೆ ಧುಮುಕಿದ್ದಾರೆ.
ಕೆಲವು ಮಹಿಳೆಯರು ಮತ್ತು ಮಕ್ಕಳು ಕಬ್ಬಿಣದ ಗ್ರಿಲ್ ಮೇಲೆ ಕುಳಿತಿದ್ದರು. ಆಗ ಗ್ರಿಲ್ ಹಠಾತ್ತನೆ ಮುರಿದು ಹೋದ ಕಾರಣ ಅವರೆಲ್ಲ ಬಾವಿಗೆ ಬಿದ್ದಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಾಜಲಿಂಗಂ ತಿಳಿಸಿದ್ದಾರೆ. ಘಟನೆ ಬುಧವಾರ ರಾತ್ರಿ 8.30ರ ಸಮಯದಲ್ಲಿ ನಡೆದಿದೆ. ಮಹಿಳೆಯರು ಕುಳಿತಿದ್ದರಿಂದ ಹೊರೆ ಹೆಚ್ಚಾಗಿ ಬಾವಿಯ ಕಬ್ಬಿಣದ ಗ್ರಿಲ್ ಮುರಿದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಲಭ್ಯ ಮಾಹಿತಿಯ ಪ್ರಕಾರ ಪೂಜಾ (19), ಶಶಿಕಲಾ (15), ಶಾಕುಂತಲ (35), ಮಮತಾ ದೇವಿ(35), ಮೀರಾ (25), ಪೂಜಾ (20), ಪಾರಿ(1), ಜ್ಯೋತಿ (15), ರಾಧಿಕಾ(16), ಸುಂದರಿ(15), ಆರತಿ (10), ಪಪ್ಪಿ (20) ಮತ್ತು ಮನು (18) ಮೃತರಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದನ್ನು ಖಚಿತ ಪಡಿಸಿಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಲಕ್ನೋದಲ್ಲಿ ಸರ್ಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮೃತರ ಕುಟುಂಬದವರಿಗೆ ತಲಾ 4 ಲಕ್ಷ ರೂ.ಗಳ ನೆರವು ನೀಡಲಾಗುವುದು ಎಂದು ಅಕಾರಿಗಳು ಹೇಳಿದ್ದಾರೆ.