ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಹಿಳೆಯರ ಕ್ಷಮೆ ಕೋರುತ್ತೇನೆ ಎಂದರು.
“ನಾನು ಎಲ್ಲಾ ಮಹಿಳೆಯರಲ್ಲಿ ಕ್ಷಮೆಯಾಚಿಸುತ್ತೇನೆ… ನನ್ನ ಮಾತುಗಳು ಯಾವುದೇ ಮಹಿಳೆಯರಿಗೆ ನೋವುಂಟುಮಾಡಿದ್ದರೆ, ನಾನು ಕ್ಷಮೆಯಾಚಿಸಲು ಸಿದ್ಧ” ಎಂದು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾನು ಯಾವುದೇ ಮಹಿಳೆಯನ್ನು ಅವಮಾನಿಸಿಲ್ಲ ಅಥವಾ ಅವರನ್ನು ನೋಯಿಸುವ ಪದಗಳನ್ನು ಬಳಸಿಲ್ಲ ಎಂದು ಹೇಳಿದರು. ಕುಮಾರಸ್ವಾಮಿ ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಕರ್ನಾಟಕದ ಕಾಂಗ್ರೆಸ್ ಆರೋಪಿಸಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.
ಇದನ್ನೂ ಓದಿ: ಕಲಬುರಗಿಯನ್ನು ಅಗ್ರಿಕಲ್ಚರ್ ಹಬ್ ಮಾಡಲು ಅಗತ್ಯ ಕ್ರಮ- ಸಚಿವ ಪ್ರಿಯಾಂಕ್ ಖರ್ಗೆ
ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಎಚ್‌ಡಿಕೆ, ನಾಡಿನ ತಾಯಂದಿರು ಕ್ಷಮೆ ಮಾಡದ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ನನ್ನ ಹೇಳಿಕೆ ಕುರಿತು ತರಾತುರಿಯಲ್ಲಿ ಎಲ್ಲಾ ಹಾಲಿ ಮಾಜಿ ಶಾಸಕರು, ಮುಖಂಡರ ಜೊತೆ ಜೂಮ್ ಮೀಟಿಂಗ್ ಮಾಡಿದ್ದಾರೆ. ಪಾಪ ಇಂದಿರಾ ಗಾಂಧಿ ಮೃತಪಟ್ಟಾಗ ಬಿಟ್ರೆ ಎರಡನೇ ಬಾರಿಗೆ ಕಣ್ಣೀರು ಹಾಕಿರಬಹುದು. ಅವರ ಜೀವನದಲ್ಲಿ ಎರಡನೇ ಬಾರಿ ದುಃಖ ಪಟ್ಟಿರೋದು ನನ್ನ ಹೇಳಿಕೆ ನೋಡಿ. ಓ ಓ ಬಹಳ ದುಃಖತಪ್ತರಾಗಿ ಕಂಬನಿ ಮಿಡಿದಿದ್ದಾರೆ. ಕೆಲ ಮಹಿಳೆರನ್ನ ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಳ್ಳುವಾಗ ದುಃಖ ಬಂದಿರಲಿಲ್ಲ ಪಾಪ ಎಂದು ವಂಗ್ಯವಾಗಿ ಡಿಕೆಶಿಗೆ ಟಾಂಗ್ ಕೊಟ್ಟರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕುಮಾರಸ್ವಾಮಿ ಕೂಡಲೇ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ಎಂದು ವಿವಿಧ ಪಕ್ಷಗಳು ಆಗ್ರಹಿಸಿದ್ದವು.