ಬೆಂಗಳೂರು: ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ), ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಮುಸ್ಲಿಂ ದ್ವೇಷದ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದ 61 ಚಿಂತಕರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಈ ಕುರಿತು ಕುಂ.ವೀರಭದ್ರಪ್ಪ ಅವರು ಮಾಹಿತಿ ಹಂಚಿಕೊಂಡಿದ್ದು, “ನನಗೆ ಭದ್ರಾವತಿಯಿಂದ ಜೀವ ಬೆದರಿಕೆ ಪತ್ರ ಬಂದಿದೆ, ಹೆಸರು ವಿಳಾಸವಿಲ್ಲದ ಹೇಡಿ ಬರೆದಿರುವ ಪತ್ರ ಇದು. ಇದರಲ್ಲಿ ಮಾಜಿ ಮುಖ್ಯಮಂತ್ರಿಗಳೀರ್ವರ ಹೆಸರುಗಳೂ ಇವೆ, ನೀವು ಓದಿ ಆನಂದಿಸಿ” ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ಜೀವ ಬೆದರಿಕೆ ಹಾಕಲಾಗಿದ್ದು, “61+ ಸಾಹಿತಿಗಳು, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಸರ್ವನಾಶದ ಹಾದಿಯಲ್ಲಿ ಇದ್ದೀರಿ, ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವ ರೂಪದಲ್ಲಾದರೂ ಬರಬಹುದು. ಅದಕ್ಕಾಗಿ ಸಿದ್ಧರಾಗಿ. 61+ ದೇಶದ್ರೋಹಿ ಬುದ್ಧಿಜೀವಿಗಳೇ ಕುಂ.ವೀರಭದ್ರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ಸಿದ್ಧರಾಗಿ, ಸಿದ್ಧರಾಗಿ. ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಅಂತಿಮ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿ” ಎಂದು ತಿಳಿಸಲಾಗಿದೆ.
“ಹಿಜಾಬ್ ಪರವಾಗಿ, ಮುಸ್ಲಿಮರ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ನೀವುಗಳು 61 ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಕುರಿತು…” ಎಂದು ಜೀವ ಬೆದರಿಕೆಗೆ ಕಾರಣ ನೀಡಲಾಗಿದೆ.
ಕೋಮುಗಳ ನಡುವೆ ಕೋಮು ದ್ವೇಷ ಬಿತ್ತುತ್ತಿರುವ ಮತೀಯ ಸಂಘಟನೆಗಳ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಸಮರ ಸಾರಿದ್ದಾರೆ. ಸಿದ್ದರಾಮಯ್ಯ ಮೊದಲಿನಿಂದಲೂ ಸಂಘಪರಿವಾರದ ವಿರುದ್ಧ ಮಾತನಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆಗಳಿಗೆ ಸಾಹಿತಿಗಳು, ಕಲಾವಿದರು, ಬರಹಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಸ್ತ್ರ ಸಂಹಿತೆಯನ್ನು ವಿಧಿಸಿ ಏಕಾಏಕಿ ಹೊರಡಿಸಿದ ಅವೈಜ್ಞಾನಿಕ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು ಎಂಬ ವಿಷಯ ಒಳಗೊಂಡಂತೆ ಕೋಮು ಸಾಮರಸ್ಯಕ್ಕೆ ಆಗ್ರಹಿಸಿ 61 ಜನ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.
ಶೈಕ್ಷಣಿಕ ವರ್ಷಾಂತ್ಯದಲ್ಲಿ ಅನಗತ್ಯವಾಗಿ ಎದ್ದ ಶಿರವಸ್ತ್ರ ವಿವಾದದಿಂದ ತೊಂದರೆಗೊಳಗಾದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಾಂವಿಧಾನಿಕ ಶಿಕ್ಷಣದ ಹಕ್ಕನ್ನು ನಿರಾಕರಿಸದೇ ಸಮವಸ್ತ್ರ ಭಾಗವಾಗಿ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು, ಅದಕ್ಕೆ ಅಗತ್ಯವಾದ ಸೂಚನೆಯನ್ನು ಅಧಿಕೃತವಾಗಿ ಸರಕಾರವು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.
ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಧರ್ಮ ಭೇದವಿಲ್ಲದೇ ಈ ಮೊದಲು ನಡೆಯುತ್ತಿದ್ದ ಸಾಮರಸ್ಯ ಪರಂಪರೆಯ ಚಟುವಟಿಕೆಗಳು ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಬೇಕು. ದುರುದ್ದೇಶಪೂರ್ವಕವಾಗಿ ಅದನ್ನು ಹಾಳುಗೆಡಹುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಧರ್ಮ ಮತ್ತು ಮತಾಂಧತೆಯ ಅಮಲೇರಿಸಿಕೊಂಡು ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಭಗವದ್ಗೀತೆಯನ್ನು ಪ್ರಸ್ತಾಪವನ್ನು ಕೈಬಿಡಬೇಕು. ಕನ್ನಡ ನೆಲದ ಸಾಮರಸ್ಯ ಪರಂಪರೆಗೆ ಯಾವುದೇ ಕುತ್ತು ಬಾರದಂತೆ ಸರಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.
ಪತ್ರ ಬರೆದ ಚಿಂತಕರು
ಡಾ.ಕೆ.ಮರುಳಸಿದ್ದಪ್ಪ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬೊಳುವಾರು ಮಹಮದ್ ಕುಂಞಿ, ಡಾ.ಪುರುಷೋತ್ತಮ ಬಿಳಿಮಲೆ, ಪ್ರೊ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಸುರೇಶ್, ಕೆ.ನೀಲಾ, ಡಾ.ರಹಮತ್ ತರೀಕೆರೆ, ಚಿದಂಬರ ರಾವ್ ಜಂಬೆ, ಡಾ.ವಸುಂಧರಾ ಭೂಪತಿ, ಕೆ.ಎಸ್.ವಿಮಲಾ, ಡಾ.ಎನ್.ಗಾಯತ್ರಿ, ಡಾ.ಜಿ.ರಾಮಕೃಷ್ಣ, ಅಚ್ಯುತ, ವಾಸುದೇವ ಉಚ್ಚಿಲ, ಟಿ.ಸುರೇಂದ್ರ ರಾವ್, ಎಸ್.ದೇವೇಂದ್ರ ಗೌಡ, ಬಿ.ಐಳಿಗೆರ, ಜೆ.ಸಿ.ಶಶಿಧರ್, ಡಾ.ಕಾಶಿನಾಥ್ ಅಂಬಲಗಿ, ಡಾ.ಪ್ರಭು ಖಾನಾಪುರೆ, ಎನ್.ಕೆ.ವಸಂತ್ ರಾಜ್, ಯಶವಂತ ಮರೋಳಿ, ಡಾ.ಕೆ.ಷರೀಫಾ, ಡಾ.ಹೇಮಾ ಪಟ್ಟಣ ಶೆಟ್ಟಿ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಚಂದ್ರ ಪೂಜಾರಿ, ಪ್ರೊ.ನರೇಂದ್ರ ನಾಯಕ್, ಪ್ರೊ.ಕೆ.ಫಣಿರಾಜ್, ಡಾ.ಇಂದಿರಾ ಹೆಗಡೆ, ಪ್ರೊ.ರಾಜೇಂದ್ರ ಉಡುಪ, ಪ್ರೊ.ಮಾಧವಿ ಭಂಡಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಕೆ.ರಾಘವ, ಅಮೃತಾ ಅತ್ರಾಡಿ, ಕೆ.ಸದಾಶಿವ ಮಾಸ್ಟ್ರು, ಪ್ರೊ.ಭೂಮಿಗೌಡ, ಎಂ.ದೇವದಾಸ, ಎಸ್.ವೈ.ಗುರುಶಾಂತ್, ವೆಂಕಟೇಶ್ ಪ್ರಸಾದ್, ಚಂದ್ರಹಾಸ ಉಲ್ಲಾಳ್, ಐ.ಕೆ.ಬೋಳವಾರ್, ಮನೋಜ ವಾಮಂಜೂರ್, ಪ್ರಭಾಕರ್ ಕಾಪಿಕಾಡ್, ಟಿ.ಆರ್.ಭಟ್, ಶ್ಯಾಮಸುಂದರ ರಾವ್, ನಾ.ದಿವಾಕರ್, ಕಲೀಂ, ಸಿ.ಬಸವಲಿಂಗಯ್ಯ, ಎಲ್.ಜಗನ್ನಾಥ್, ಕೆ.ಎಸ್.ಲಕ್ಷ್ಮಿ, ಬಿ.ಎಂ.ಹನೀಫ್, ನಾಗೇಶ್ ಕಲ್ಲೂರ, ಸುಷ್ಮಾ, ಡಾ.ಕಾಳೇಗೌಡ ನಾಗವಾರ, ಕೋದಂಡ ರಾಮ್, ಮಾವಳ್ಳಿ ಶಂಕರ್, ಯಮುನಾ ಗಾಂವ್ಕರ್, ಬಿ.ಶ್ರೀಪಾದ್ ಭಟ್.
ಸತ್ಯವನ್ನು ದೌರ್ಜನ್ಯದ ಮೂಲಕ ಹತ್ತಿಕ್ಕುವ ಪ್ರಯತ್ನ !