ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ₹50 ಲಕ್ಷ ಅಪಘಾತ ವಿಮೆ ಯೋಜನೆ ಜಾರಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹50 ಲಕ್ಷ ಮೊತ್ತದ ಅಪಘಾತ ವಿಮಾ ಸೌಲಭ್ಯ ದೊರಕಿಸುವ ಯೋಜನೆಯನ್ನು ನಿಗಮ ಜಾರಿಗೊಳಿಸಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ನಿಗಮವು ಯೋಜನೆಯನ್ನು ಜಾರಿಗೆ ತಂದಿದೆ.

ಈ ಸಂಬಂಧ ನಿಗಮದ ಅಧ್ಯಕ್ಷ ಚಂದ್ರಪ್ಪ ಸಮ್ಮುಖದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಪಂಕಜ್ ತಪ್ಲಿಯಾಲ್ ಒಪ್ಪಂದಕ್ಕೆ ಸಹಿ ಹಾಕಿದರು.

ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ₹50 ಲಕ್ಷ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೊಂಡಿದ್ದು, ಇದುವರೆಗೂ ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ(ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರ ಲಭ್ಯವಾಗುತ್ತಿರಲಿಲ್ಲ.

ಈ ಬಗ್ಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಅವರು, ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ  ಜಾರಿಗೊಳಿಸುತ್ತಿರುವ ಉತ್ತಮವಾದ ಯೋಜನೆಯಾಗಿರುವುದಾಗಿ ತಿಳಿಸಿದ್ದಾರೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್  ರವರ ಸಹಯೋಗಕ್ಕೆ ಅಭಿನಂದನೆ ಸಲ್ಲಿಸಿದರು.

ಸಿಬ್ಬಂದಿಗಳು ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯಿಂದ ನೌಕರರ ಅವಲಂಬಿತರಿಗೆ ಸಂಕಷ್ಟ ಎದುರಾಗದಿರುವ ನಿಟ್ಟಿನಲ್ಲಿ ಅಪಘಾತ ವಿಮಾ ಯೋಜನೆಗೆ ನಿಗಮವು ಎಸ್‌ಬಿಐನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ನಿಗಮದ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಎಂ. ಚಂದ್ರಪ್ಪರವರ ಸಮ್ಮುಖದಲ್ಲಿ ವಿ.ಅನ್ಬುಕುಮಾರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ  ಹಾಗೂ ಪಂಕಜ್ ತಪ್ಲಿಯಾಲ್, ಡಿ.ಜಿ.ಎಂ, ಸಮ್ಮುಖದಲ್ಲಿ ಎಸ್‌ಬಿಐನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನೌಕರರಿಗೆ ಅಪಘಾತ ವಿಮಾ ಯೋಜನೆ ಸೌಲಭ್ಯಗಳು

ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ)ನಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ “ಪ್ರೀಮಿಯಂ ರಹಿತ” ವೈಯುಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ. ಸರಿಸುಮಾರು ಶೇ 55ರಷ್ಷು ಸಿಬ್ಬಂದಿಗಳು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಗಳನ್ನು ಹೊಂದಿದ್ದಾರೆ.

ಈ ಯೋಜನೆಯಡಿ ನೌಕರರಿಗೆ ಅಫಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ₹50 ಲಕ್ಷಗಳ ಪರಿಹಾರದ ಹಣ ದೊರೆಯಲಿದೆ. ಅಫಘಾತದಲ್ಲಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ₹20 ಲಕ್ಷಗಳ ಹ಼ಣ ಹಾಗೂ ಶಾಶ್ವತ ಭಾಗಶ: ಅಂಗವೈಕಲ್ಯ ಆದಲ್ಲಿ ₹10 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.

ಅಲ್ಲದೆ, ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.

ಸಿಬ್ಬಂದಿಗಳ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ ₹10 ಲಕ್ಷ, ಔಷಧಗಳ ಆಮದಿಗಾಗಿ ಗರಿಷ್ಟ ₹5 ಲಕ್ಷ, ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ₹2 ಲಕ್ಷ (₹50 ಲಕ್ಷ + ₹2 ಲಕ್ಷ), ಏರ್ ಅಂಬ್ಯೂಲೆನ್ಸ್ ಸೇವೆಗೆ ₹10 ಲಕ್ಷ ವಿಮಾ ಪರಿಹಾರ ಸಿಗಲಿದೆ. ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ ₹5 ಲಕ್ಷ ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಟ ₹5 ಲಕ್ಷಗಳ ವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆಯು ಒಳಗೊಂಡಿದೆ.

Donate Janashakthi Media

Leave a Reply

Your email address will not be published. Required fields are marked *