ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯು ಶನಿವಾರ ‘ನಮ್ಮ (ನಮ್ಮ) ಕಾರ್ಗೋ’ ಟ್ರಕ್ ಸೇವೆಗೆ ಚಾಲನೆ ನೀಡಿದ್ದು, ಸಚಿವ ರಾಮಲಿಂಗಾ ರೆಡ್ಡಿ 20 ವಾಹನಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವರು, ಒಂದು ತಿಂಗಳಲ್ಲಿ 100 ಟ್ರಕ್‌ಗಳನ್ನು ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ 500 ಟ್ರಕ್‌ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಟ್ರಕ್‌ಗಳ ನಿರ್ವಹಣೆಗಾಗಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಡಿಪೋ ಆಗಿ ಬಳಸಿಕೊಳ್ಳಲಾಗುವುದು ಮತ್ತು ಅಲ್ಲಿನ ಉಳಿದ ಖಾಲಿ ಜಾಗವನ್ನು ವಾಣಿಜ್ಯ ಆದಾಯ ಗಳಿಸಲು ಸರ್ಕಾರಿ ಕಂಪನಿಗಳಿಗೆ ನೀಡಲಾಗುವುದು ಎಂದು ರೆಡ್ಡಿ ಹೇಳಿದ್ದಾರೆ. ಕೆಎಸ್‌ಆರ್‌ಟಿಸಿ ತನ್ನ ಟ್ರಕ್‌ಗಳಿಗೆ ಗಾಢ ನೀಲಿ ಬ್ರ್ಯಾಂಡಿಂಗ್ ಒಳಗೊಂಡ ಲೋಗೋವನ್ನು ರಚಿಸಿದೆ. ಈ ಲೋಗೋ ವಿಶ್ವಾಸಾರ್ಹತೆ, ಪ್ರಾಧಿಕಾರ ಮತ್ತು ಜ್ಞಾನವನ್ನು ಸಂಕೇತಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾಗಿ ದಿ ಹಿಂದೂ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಬಿಬಿಎಂಪಿ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ: ಡಿ ಕೆ ಶಿವಕುಮಾರ್
2021 ರಲ್ಲಿ ಪ್ರಯಾಣಿಕ ಸಾರಿಗೆ ವ್ಯವಹಾರದಲ್ಲಿ ತನ್ನ ಶಕ್ತಿಯನ್ನು ಬಳಸಿಕೊಳ್ಳುವ ಸಲುವಾಗಿ, KSRTC ಮಾರ್ಗದ ಬಸ್‌ಗಳಲ್ಲಿ ಪಾರ್ಸೆಲ್‌ಗಳನ್ನು ಸಾಗಿಸಲು ‘ನಮ್ಮ ಕಾರ್ಗೋ’ ಬ್ರಾಂಡ್‌ನ ಅಡಿಯಲ್ಲಿ ಲಾಜಿಸ್ಟಿಕ್ಸ್ ವ್ಯವಹಾರವನ್ನು ಪ್ರಾರಂಭಿಸಲಾಗಿತ್ತು. ಇದನ್ನೆ ಮುಂದುವರೆಸಿ ಕೆಎಸ್‌ಆರ್‌ಟಿಸಿ ಈಗ ಸರಕು ಸಾಗಣೆಗಾಗಿ ಜಿಪಿಎಸ್ ಅಳವಡಿಸಿರುವ ಹೊಚ್ಚಹೊಸ “ನಮ್ಮ ಕಾರ್ಗೋ ಟ್ರಕ್ ಸೇವೆ” ಅನ್ನು ಪರಿಚಯಿಸುತ್ತಿದೆ ಎಂದು ಸಾರಿಗೆ ನಿಗಮದ ಅಧಿಕಾರಿ ತಿಳಿಸಿದ್ದಾರೆ.
KSRTC ಟ್ರಕ್‌ಗಳು ಕರ್ನಾಟಕದಾದ್ಯಂತ ಸುರಕ್ಷಿತ, ವೇಗದ ಮತ್ತು ವಿಶ್ವಾಸಾರ್ಹ ಸೇವೆಗಳೊಂದಿಗೆ ಸರಕುಗಳನ್ನು ಸಾಗಿಸುತ್ತವೆ ಎಂದು ನಿಗಮ ತಿಳಿಸಿದೆ. ಕೆಎಸ್‌ಆರ್‌ಟಿಸಿ ದೇಶದ ಅತಿದೊಡ್ಡ ಸಾರಿಗೆ ನಿಗಮಗಳಲ್ಲಿ ಒಂದಾಗಿದ್ದು, ಇದು 16 ವಿಭಾಗಗಳು, 83 ಡಿಪೋಗಳು, 174 ಬಸ್ ನಿಲ್ದಾಣಗಳು, 7,649 ಸಾರಿಗೆ ಸೇವೆಗಳನ್ನು ಹೊಂದಿದೆ. ಅಲ್ಲದೆ 8,355 ಬಸ್‌ಗಳ ಫ್ಲೀಟ್ ಅನ್ನು ಹೊಂದಿದೆ.
ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆಯಿಂದ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಗೆ ಟ್ರಕ್ ಸೇವೆ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ಜನರು ಕೆಎಸ್‌ಆರ್‌ಟಿಸಿ ಕಾಲ್ ಸೆಂಟರ್ ಸಂಖ್ಯೆ 080-26252625 ಮತ್ತು [email protected] ಇ-ಮೇಲ್ ಅನ್ನು ಸಂಪರ್ಕಿಸಬಹುದಾಗಿದೆ.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ