ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿದ ಪ್ರತಿಪಕ್ಷಗಳು
ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಸಚಿವ ಚೆಲುವರಾಯಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ರಾಜೀನಾಮೆಗೆ ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ” ಕೆಎಸ್‌ಆರ್‌ಟಿಸಿ ಸಿಬ್ಬಂದಿ ವರ್ಗಾವಣೆ ಬಗ್ಗೆ ಮೇಲಾಧಿಕಾರಿಯಲ್ಲಿ ಕೇಳಿದಾಗ ಸ್ಥಳೀಯ ಶಾಸಕರ ಆದೇಶ ಎಂದಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಅಧಿಕಾರಿಗಳಿಗೆ ದಿನನಿತ್ಯ ಕಿರುಕುಳ ಇದೆ ಎಂಬ ಬಗ್ಗೆ ಮಾತನಾಡುತ್ತಿದ್ದಾರೆ. ಮಂತ್ರಿಗಳ ಹೆಸರು ಉಲ್ಲೇಖ ಮಾಡಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಚಾಲಕ ಐಸಿಯುನಲ್ಲಿ ಇದ್ದಾರೆ ಸ್ಥಿತಿ ಗಂಭೀರ ಆಗಿದೆ ” ಎಂದು ವಿವರಿಸಿದರು.
ರಾಜಕೀಯ ಒತ್ತಡ ಹಾಗೂ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಅಗದೇ ಇರುವುದು ಇದಕ್ಕೆ ಕಾರಣ. ಆತ್ಮಹತ್ಯೆ ಯತ್ನದ ಬಗ್ಗೆ ಯಾವುದೇ ಎಫ್ ಐ ಆರ್ ಆಗಿಲ್ಲ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಡೆತ್ ನೋಟ್ ನಲ್ಲಿ ಹೆಸರು ಇದ್ದವರ ವಿರುದ್ಧವೂ ಎಫ್ ಐ ಆರ್ ಆಗಬೇಕು. ಡೆತ್ ನೋಟ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೆಸರು ಇದೆ. ಈ ನಿಟ್ಟಿನಲ್ಲಿ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ವಿಪಕ್ಷ ನಾಯಕನಿಲ್ಲದ ಅಧಿವೇಶನ – ಕಗ್ಗಂಟು ಬಿಚ್ಚಲಾಗದ ಬಿಜೆಪಿ
ಇನ್ನು ಇದೇ ವಿಚಾರವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ” ಘಟನೆ ನಡೆದು 24 ಗಂಟೆ ಆದರೂ ಎಫ್ ಐ ಆರ್ ಆಗಿಲ್ಲ. ಸತ್ತಿಲ್ಲ ಎಂಬ ಕಾರಣಕ್ಕಾಗಿ ಎಫ್ ಐ ಆರ್ ಆಗಿಲ್ಲ ಎಂದು ಅಧಿಕಾರಿಗಳು ಹೇಳ್ತಿದ್ದಾರೆ ” ಎಂದು ಆರೋಪಿಸಿದರು. ಹೆಣ್ಣು ಮಗಳ ಮೇಲೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎನ್ನುತ್ತಿದ್ದಾರೆ. ಆದರೆ, ವರ್ಗಾವಣೆ ಮಾಡಿದ್ದು ಸಚಿವರ ವಿಚಾರಕ್ಕೆ , ಮಹಿಳೆಯ ವಿಚಾರಕ್ಕೆ ವರ್ಗಾವಣೆ ಮಾಡಲಾಗಿಲ್ಲ ಎಂದು ಕೆಎಸ್ ಆರ್ ಟಿ ಸಿ ಡಿಸಿ ಹೇಳಿದ್ದಾರೆ ಎಂದರು.
ಈ ವೇಳೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪಿಐ ನಂದೀಶ್ ಆತ್ಮಹತ್ಯೆ ಕೇಸ್ ಪ್ರಸ್ತಾಪಿಸಿದರು. ಆಗ ಅಂದು ನೀವು ಮಾತಾಡಬೇಕಿತ್ತು, ಯಾಕೆ ಮಾತಾಡಲಿಲ್ಲ ಎಂದ ಹೆಚ್ಡಿಕೆ ಗರಂ ಆದ್ರು. ಈ ವೇಳೆ ನರೇಂದ್ರಸ್ವಾಮಿ ವಿರುದ್ಧ ಸ್ಪೀಕರ್ ಯು.ಟಿ.ಖಾದರ್ ಸಹ ಸಿಟ್ಟಾದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್, ಅಂದು ಗಣಪತಿ ಆತ್ಮಹತ್ಯೆ ಕೇಸ್ನಲ್ಲಿ ನನ್ನ ಮೇಲೆ ಆರೋಪ ಮಾಡಿದ್ರಿ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಕೊಟ್ಟು ಕ್ಲೀನ್ ಚಿಟ್ ಬಂತು. ಆಗ ತಪ್ಪಾಯ್ತು ಅಂತಾ ಸಾರಿ ಕೇಳಿದ್ರಾ ಎಂದು HDKಗೆ ಪ್ರಶ್ನೆ ಮಾಡಿದ್ರು. ನೀವು ಯಾರನ್ನು ಬೇಕಾದರೂ ತೇಜೋವಧೆ ಮಾಡಬಹುದಾ? ಪೆನ್ಡ್ರೈವ್ ಇದೆ ಅಂತಾ ತೋರಿಸಿದ್ರಲ್ಲಾ, ಪ್ರೊಡ್ರೂಸ್ ಮಾಡಿ ಎಂದರು. ಆಗ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ನಾನು ಡೆತ್ ನೋಟ್ ಇಟ್ಟುಕೊಂಡು ಮಾತಾಡುತ್ತಿದ್ದೇನೆ. ನಾನು ಯಾವುದೇ ಸಚಿವರ ಹೆಸರು ಬಾಯಿಬಿಟ್ಟಿಲ್ಲ. ನಿಮ್ಮ ಹಣೆಬರಹ ಗೊತ್ತಿದೆ ಎಂದು ಜಾರ್ಜ್ಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟರು. ಈ ವೇಳೆ ಕೆ.ಜೆ.ಜಾರ್ಜ್, ಕುಮಾರಸ್ವಾಮಿ ನಡುವೆ ಮಾತಿನಚಕಮಕಿ ನಡೆಯಿತು.