ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ಮೈಸೂರು ರಸ್ತೆಯ ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದ ಪರಿಣಾಮ 25 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ರೋಡ್‍ನ ಪೂರ್ಣಿಮಾ ಪ್ಯಾಲೇಸ್ ಬಳಿ ದುರ್ಘಟನೆ ನಡೆದಿದೆ. ಕೆಆರ್ ನಗರ ಡಿಪೋಗೆ ಸೇರಿದ ಬಸ್ಸಿನಲ್ಲಿ ಸುಮಾರು 45 ಮಂದಿ ಪ್ರಯಾಣಿಕರಿದ್ದರು.ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ.
ಇದನ್ನೂ ಓದಿ : ಅಪಾಯಕ್ಕೆ ಆಹ್ವಾನ ನೀಡುತ್ತಿವೆ ರಸ್ತೆಗುಂಡಿಗಳು!, ಬಿಬಿಎಂಪಿ ಕಚೇರಿ ಮುಂದಿದೆ ದೊಡ್ಡದಾದ ರಸ್ತೆಗುಂಡಿ
ಗುಂಡಿಗೆ ಇಳಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೆಟ್ರೋ ಪಿಲ್ಲರ್ ಇಲ್ಲದೇ ಇದಿದ್ರೇ ಬಸ್ ಮತ್ತೊಂದು ಭಾಗದ ರಸ್ತೆಗೆ ಹೋಗಿ ದೊಡ್ಡ ಅನಾಹುತವೇ ಆಗಿ ಹೋಗ್ತಿತ್ತು. ನಾಲ್ಕು ಅಡಿಯ ತಡೆಗೋಡೆಗೆ ಗುದ್ದಿ ಕೊನೆಗೆ ಪಿಲ್ಲರ್ ನಂಬರ್ 545 ಗೆ ಬಸ್ ಗುದ್ದಿದೆ. ಪಿಲ್ಲರ್ ನಂಬರ್ 546 ಬಳಿ ದೊಡ್ಡ ಗುಂಡಿ ಬಿದ್ದಿದೆ. ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಇಲ್ಲವೇ ಗುಂಡಿಗೆ ಇಳಿದ ಬಸ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಘಟನೆಯಿಂದ ಡ್ರೈವರ್ ಬಿಜೆ ಮಂಜುನಾಥ್ ಹಾಗೂ ಕಂಡೆಕ್ಟರ್ ವೆಂಕಟರಮಣ ಅವರಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದಿಂದಾಗಿ ಬಹುತೇಕರಿಗೆ ಬಾಯಿ, ಹಲ್ಲು, ಮುಖದ ಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುಗಳೆಲ್ಲ ವಿಕ್ಟೊರಿಯಾ, ಬಿಜಿಎಸ್, ಕೆಂಗೇರಿ ಉಪನಗರದ ಸುಪ್ರ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಹಿಂಬದಿ ಮತ್ತು ಮುಂದೆ ಕೂತಿದ್ದವರಿಗೆ ಹೆಚ್ಚಿನ ಗಾಯಗಳಾಗಿವೆ. ಫಿನಾಕಲ್ ಆಸ್ಪತ್ರೆಯಲ್ಲಿ ಮೂವರು, ಸುಪ್ರದಲ್ಲಿ 12 ಹಾಗೂ ವಿಕ್ಟೋರಿಯಾದಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರು ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.