ಕ್ಷಮಿಸಿ ಬಿಡು

ಕೆ ನೀಲಾ

ಅವರಿಗೊಂದೂ ಗೊತ್ತಿಲ್ಲ
ಕ್ಷಮಿಸಿ ಬಿಡೋಣ
ದಾರಿ ತಪ್ಪಿದ ಅರಿಯದ ಕಂದಗಳವು.

ಅವರಜ್ಜ ನಮ್ಮಜ್ಜ ಒಂದೇ ಹುಕ್ಕಾದಲ್ಲಿ
ಎಳೆದ ಝುರಕಿಯ ಹೊಗೆ
ಇನ್ನೂ ಸುಳಿದಾಡುತಿದೆ ಇಲ್ಲೆಲ್ಲ.

ಇದೇ ಜಾತ್ರೆಯಲ್ಲಿ
ಅವರವ್ವನ ಎದೆಯಲಿ ಹುದುಗಿದ
ಚುಕ್ಕಿ ಬಳೆಯಾಸೆಯ ಅರಿತವಳು
ಬಳೆಗಾರತಿ ನನ್ನಮ್ಮಿ ಜಾನ್.

ಅವಳ ಮೃದು ಮುಂಗೈಗೆ
ಇನಿತು ನೋವಾಗದಂತೆ
ಬಳೆಯೊಂದೂ ಚಟ್ಟೆನ್ನದಂತೆ
ಹೂ ಸ್ಪರ್ಷದಂತೆ ಬಳೆ ಮುಡಿಸಿ
ಮುಗುಳ್ನಕ್ಕಿದ್ದಳು ನನ್ನಮ್ಮಿ ಜಾನ್.

ಅವಳೋ ಬಯಸಿದ ಬಣ್ಣದ
ಬಳೆಗಳನ್ನೊಮ್ಮೆ ಸವರಿ ಅಮ್ಮಿಜಾನ್‌ಳ ಕಣ್ಣಲ್ಲಿ
ಗೆಳೆತನದ ಹೊಳಪು ತರಿಸಿದ್ದು
ಈ ಲಾಠಿ ಹಿಡಿದು ಠಳಾಯಿಸವ ದೇಹಗಳಿಗೇನು ಗೊತ್ತು?

ಕ್ಷಮಿಸಿ ಬಿಡು
ಚರಿತೆ ಅರಿಯದ ದಾರಿ ಬಿಟ್ಟ ಕಂದಗಳು ಅವು.

ನನ್ನ ಮನೆಯ ಚೊಂಗ್ಯಾದ ಘಮಕ್ಕೆ
ಅವರ ಅಂಗಳದ ಕೂಸುಗಳು
ಇತ್ತ ಹೊರಳಿ ಅರಳಿಸಿದ ಅಂಗೈಗೆ
ನನ್ನಮ್ಮಿ ಜಾನ್ ಹೂಮುತ್ತಿನೊಂದಿಗೆ
ಗೋಲು ಚಂದಿರನಂಥ ಸಿಹಿ ಸುರಿವ
ಚೊಂಗ್ಯಾ ಇಟ್ಟಿದ್ದು ಇವುಗಳಿಗೇನು ಗೊತ್ತು?

ಮತ್ತವರ ಮನೆಯ ಕರಜಿಕಾಯಿ ಕೋಡುಬಳೆಗೆ
ಅವರವ್ವ ಹರಿಸಿದ ಒಲವ ಧಾರೆಗೆ ಬೇರೆಂಬ ಭಾವವೆಂದೂ
ಬಾರದೆ ಅವಳ ಸೆರಗ ಚುಂಗ್ಹಿಡಿದು ಬಾಲ್ಯ ಕಳೆದಿರುವೆ.

ಜಾತ್ರೆಯಲ್ಲಿ ಬೆಂಡು ಬತ್ತಾಸೆಯ ಸಿಹಿ ಅಂಗಡಿ
ತೆರವುಗೊಳಿಸುತ್ತಿರುವ ಇವರಿಗೇನು ಗೊತ್ತು?
ಇವರಪ್ಪ ನನ್ನಪ್ಪ ಇದೇ ಸೂಫಿ-ಸಂತ ಸನ್ನಿಧಾನದಲ್ಲಿ
ಲಿಗಿಲಿಗಿ ಧುನಿ ಮುಂದೆ ಚಳ್ಳಾಮು ಝೇಂಕರಿಸಿ

‘ಅಲ್ಲಾ ಶಿವನೇ
ಶಿವನೇ ಅಲ್ಲಾ
ಒಂದೇ ಎಲ್ಲಾ
ನಿನ್ ಬಿಟ್ಟರೆ ಬೇರಿಲ್ಲಾ’

ಕೊರಳೆತ್ತಿ ಹಾಡಿದ ಹಾಡುಗಳ ಪ್ರತಿ ಶಬ್ದಗಳು
ಬೆರೆತು ಹೋಗಿವೆ ಗಾಳಿಯಲಿ ಅನವರತ.

ಶಾಲೊಂದು ಹೊದ್ದು ಹೆಗಲಿಗೆ ಬಿಸಿಲ
ಬೀದಿ ಸವೆಸುತ ದ್ವೇಷದ ನಶೆಯ ಇವರಿಗೆ
ಬದುಕ ಪ್ರೇಮದ ಹಾಡೆಂಬುದನರಿಯರು.

ಇಷ್ಕ್ ಮೊಹೊಬ್ಬತ್ ಬೆಲೆಯನೇನು ಬಲ್ಲರು? ದಾರಿ ಬಿಟ್ಟ ಮಕ್ಕಳು
ಕ್ಷಮಿಸಿ ಬಿಡು ಇವರನು.

ಅವರು ಹೋಗೆಂದರೆ ನನ್ನನು
ದುಂಡು ಭೂಮಿಯ ಸುತ್ತಿ‌
ಮತ್ತಿಲ್ಲೇ ಬಂದು ನಿಲ್ಲುವೆನು
ಯಾರಪ್ಪನ ಸೊತ್ತೂ ಅಲ್ಲದ
ನೆಲದವ್ವನ ಉಡಿಯಲೇ ಇರುವೆನು.

ಈ ನೆಲದ ಕಣಕಣದಿ ಕರುಳ ಬಳ್ಳಿಯ ಬಂಧವಿದೆ ಸಂಬಂಧವಿದೆ
ನಾನೆಲ್ಲೂ ಹೋಗಲಾರೆ
ಕರುಳ ಕಾವ್ಯದ ಹಾಡು ಕಲಿತವಳು ಕಟ್ಟಿದವಳು.

ಕಣ್ಣಲ್ಲಿ ಆಕ್ರೋಶದ ಕಿಡಿ
ಕೈಯಲ್ಲಿ ಪರಕಿಯರು ಕೊಟ್ಟ ಲಾಠಿ
ಎದೆಯೊಳಗೆ ಸುಳ್ಳು ಶಬ್ದಗಳ ಒಜ್ಜೆ
ದ್ವೇಷದ ಮಾತುಗಳ ಸುರಿಸುವ ನಾಲಗೆ
ಎಲ್ಲ ಎಲ್ಲವು ಅವರದಲ್ಲದವುಗಳೇ.

ದಾರಿ ಬಿಟ್ಟ ಕಂದಗಳು.
ಕ್ಷಮಿಸಿ ಬಿಡು.

ನಾಳೆಗಲ್ಲ
ಇಂದೇ ನಿಜವನರಿವ ದಿನ ಬರುವುದು.

ಕತ್ತಲಂಚಿಗೆ ಹಗಲ ಬೆರಳು ಬೆಳಕ್ಹಿಡಿದು ಬರುವುದು
ಮಗುವಿನ ನಗುವಂತೆ.

ನಾನಿಲ್ಲೇ ಇರುವೆ. ಇದ್ದು ಕಾಯುವೆ
ಬೆಳಕ ಕಂದನ ಮುಗುಳ್ನಗುವಿಗಾಗಿ.

Donate Janashakthi Media

Leave a Reply

Your email address will not be published. Required fields are marked *